Advertisement

ಮಂಗಳೂರು ನಗರದಲ್ಲೂ ಮಲೇರಿಯಾ ಆತಂಕ

06:47 PM Mar 20, 2018 | Team Udayavani |

ಮಹಾನಗರ: ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸುವ ಸಂಬಂಧ ಆರೋಗ್ಯ ಇಲಾಖೆಯು ಹಲವು ವರ್ಷಗಳಿಂದ ಜಾಗೃತಿ ಮೂಡಿಸುತ್ತಿದ್ದರೂ, ಮಲೇರಿಯಾ ಪ್ರಕರಣ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆಯು ಕೆಲವು ವರ್ಷಗಳಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಹೆಚ್ಚಳವಾಗುತ್ತಿದೆ.

Advertisement

ಕಳೆದ ಎರಡು ತಿಂಗಳಲ್ಲಿ 361 ಮಂದಿಗೆ ಮಲೇರಿಯಾ ಪೀಡಿತರೆಂದು ಶಂಕಿಸಿದ್ದು, ಅವುಗಳ ಪೈಕಿ 96 ಮಂದಿಯಲ್ಲಿ ದೃಢಪಟ್ಟಿದೆ. ಹಾಗೆಯೇ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣ ಹೆಚ್ಚಳದ ಕುರಿತು ಆತಂಕ ಸೃಷ್ಟಿಸಿದೆ. ಈ ಅವಧಿಯಲ್ಲಿ ಒಟ್ಟು 39,440 ಮಂದಿಯ ರಕ್ತವನ್ನು ಮಲೇರಿಯಾ ಅಥವಾ ಡೆಂಗ್ಯೂವಿನ ಶಂಕೆಯ ಮೇಲೆ ತಪಾಸಣೆಗೆ ಒಳಪಡಿಸಲಾಗಿತ್ತು. ಇಡೀ ಜಿಲ್ಲೆಯ ಪೈಕಿ ಮಂಗಳೂರು ನಗರದಲ್ಲೇ ಅತೀಹೆಚ್ಚಿನ ಮಲೇರಿಯಾ ಪ್ರಕರಣ ದಾಖಲಾಗುತ್ತಿದೆ. ಕಳೆದೆರಡು ತಿಂಗಳಿನಲ್ಲಿ 13,213 ಮಂದಿಯ ರಕ್ತ ಸಂಗ್ರಹಿಸಿದ್ದು, ಆ ಪೈಕಿ 325 ಮಂದಿಗೆ ಮಲೇರಿಯಾ ಇರುವುದು ಖಚಿತವಾಗಿದೆ. ಅವರ ಪೈಕಿ 95 ಮಂದಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ.


ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಲೇರಿಯಾ ರೋಗಕ್ಕೆ ತುತ್ತಾಗುವವರ ಸಂಖ್ಯೆ ಕಡಿಮೆ ಇಲ್ಲ. 2015ರಲ್ಲಿ 503 ಮಲೇರಿಯಾ ಪ್ರಕರಣ ದಾಖಲಾಗಿತ್ತು. 2016ರಲ್ಲಿ 581 ಮತ್ತು 2017ರಲ್ಲಿ 597 ಪ್ರಕರಣ ಪತ್ತೆಯಾಗಿದ್ದವರು. 
ಈ ರೋಗವನ್ನು ನಿಯಂತ್ರಣದಲ್ಲಿಡಲು ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ ಕಾರ್ಯ ನಿರತವಾಗಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆಂದೇ 60 ಮಂದಿಯ ತಂಡದ ಪ್ರತಿ ಸದಸ್ಯರೂ ನಿತ್ಯವೂ ಒಂದೊಂದು ವಾರ್ಡಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಆರೋಗ್ಯ ಇಲಾಖೆಯು ನಿಯೋಜಿಸಿರುವ 5 ಮಂದಿಯ ತಂಡವು ನಿತ್ಯವೂ ಕಟ್ಟಡ ಕಾಮಗಾರಿ ನಡೆಯುವಲ್ಲಿ ಹೋಗಿ ಜಾಗೃತಿ ಮೂಡಿಸುತ್ತಿದೆ. ನೀರು ನಿಂತ ಪ್ರದೇಶವಿದ್ದರೆ ಸೊಳ್ಳೆ ಉತ್ಪತ್ತಿಯಾಗದಂದೆ ಕೀಟನಾಶಕ ಸಿಂಪಡಿಸಲಾಗುತ್ತಿದೆ. ಸ್ಥಳದಲ್ಲೇ ಕಾರ್ಮಿಕರ ರಕ್ತ ಪರೀಕ್ಷೆ ನಡೆಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ‘ಸುದಿನ’ಕ್ಕೆ ತಿಳಿಸಿದ್ದಾರೆ. 

ಮನೆಯಲ್ಲಿ ಬಳಸದ ಸೊಳ್ಳೆ ಪರದೆಗಳಿಂದಲೂ ಮಲೇರಿಯಾ ಬರಬಹುದು. ಇದನ್ನು ತಪ್ಪಿಸಲು ಪ್ರತಿ ಗುರುವಾರ ಪಾಲಿಕೆ ವ್ಯಾಪ್ತಿಯ ಹತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೊಳ್ಳೆ ಪರದೆಯನ್ನು ರಾಸಾಯನಿಕದಿಂದ ತೊಳೆಯಲಾಗುತ್ತಿದೆ. ಇದಕ್ಕೆಂದು ಸ್ಥಳೀಯರು ಸೊಳ್ಳೆ ಪರದೆಯನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಬೇಕಿದೆ. 

Advertisement

ಮನೆ ಬಾಗಿಲಿಗೆ ಆಸ್ಪತ್ರೆ
ಮಲೇರಿಯಾ ತಡೆಯಲು ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಉಚಿತ ಸೇವೆ ನೀಡುವ ಓಮ್ನಿ ವಾಹನ ಸೌಲಭ್ಯವಿದೆ. ನಾಗರಿಕರು ತಮ್ಮ ಕುಟುಂಬ ಸದಸ್ಯರಿಗೆ ಜ್ವರ ಕಾಣಿಸಿಕೊಂಡರೆ 9448556872 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಕೂಡಲೇ ಮನೆ ಬಾಗಿಲಿಗೆ ಬಂದು ರಕ್ತದ ಮಾದರಿ ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಹೆಚ್ಚಿನ ಚಿಕಿತ್ಸೆ ಬೇಕಾದರೆ ಉಚಿತ ವೈದ್ಯಕೀಯ ಚಿಕಿತ್ಸೆ ಸಹಿತ ಔಷಧ ನೀಡಲಾಗುತ್ತದೆ.

ಎಚ್ಚರಿಕೆ ವಹಿಸಿ
– ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ
– ಸೊಳ್ಳೆ ಪರದೆಯನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿ
– ಸೊಳ್ಳೆಯಿಂದ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು
– ಮಂದ ಬಣ್ಣದ ಉಡುಪು ಧರಿಸಿ, ಸಾಮಾನ್ಯವಾಗಿ ಸೊಳ್ಳೆ ನಿಮ್ಮಿಂದ ದೂರವಿರುತ್ತದೆ.
– ದಿನಂಪ್ರತಿ ಮನೆಯ ನೆಲವನ್ನು ಒರೆಸಲು ಮರೆಯದಿರಿ
– ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ ಹತ್ತಿರದ ವೈದ್ಯರನ್ನು ಭೇಟಿಯಾಗಿ

ಮುಂದಿನ ವಾರ ಸಭೆ
ಮಲೇರಿಯಾ ನಿಯಂತ್ರಿಸಲು ಪಾಲಿಕೆ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲು ಮುಂದಿನ ವಾರದಲ್ಲಿ ಸಭೆ ನಡೆಸುತ್ತೇವೆ. ರೋಗ ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಕೂಡ ಅಗತ್ಯ.
– ಭಾಸ್ಕರ್‌ ಕೆ., ಮೇಯರ್‌ 

ಜ್ವರದ ನಿರ್ಲಕ್ಷ ಬೇಡ
ಮಲೇರಿಯಾ ತಡೆಗಟ್ಟಲು ಆರೋಗ್ಯ ಇಲಾಖೆಯು ಪ್ರತಿ ತಾಲೂಕಿನಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕು. ಸುತ್ತಮುತ್ತಲ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಗಮನಹರಿಸಬೇಕು. ಯಾವುದೇ ರೀತಿಯ ಜ್ವರವನ್ನು ನಿರ್ಲಕ್ಷ್ಯ ಮಾಡಬಾರದು.
– ಡಾ| ಅರುಣ್‌ ಕುಮಾರ್‌, ಆರೋಗ್ಯ ಇಲಾಖೆ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ

— ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next