ಬೆಂಗಳೂರು:ರಾಜ್ಯದ 20 ಜಿಲ್ಲೆಗಳಲ್ಲಿ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಚಿತ್ರದುರ್ಗ, ಕಲಬುರಗಿ, ರಾಯಚೂರು, ಬಿಜಾಪುರ ಸೇರಿ ಎಂಟು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ. ಒಟ್ಟು 20 ಜಿಲ್ಲೆಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಲೇರಿಯಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಸ್ವತ್ಛತೆ ಕಾಪಾಡುವುದು, ಶುದ್ಧ ನೀರು ಪೂರೈಕೆಕ್ಕೆ ಹೆಚ್ಚು ಗಮನ ನೀಡಲು ತಿಳಿಸಲಾಗಿದೆ ಎಂದರು.
ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಗಳು ಹಾಗೂ ರಾಜ್ಯದಲ್ಲಿರುವ 3 ಸಾವಿರ ಪ್ರಯೋಗಾಲಯಗಳಿಗೆ ರಕ್ತದ ಮಾದರಿ ಪರೀಕ್ಷೆಗೆ ಬಂದಾಗ ಅಪಾಯಕಾರಿ ಕಾಯಿಲೆಗಳ ಲಕ್ಷಣ ಇದ್ದರೆ ತಕ್ಷಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ರವಾನಿಸುವಂತೆ ಸೂಚಿಸಲಾಗಿದೆ. ಅದರಂತೆ ವರದಿಗಳು ಬರುತ್ತಿವೆ ಎಂದು ಹೇಳಿದರು.
ಮಲೇರಿಯಾ, ಚಿಕೂನ್ ಗುನ್ಯಾ, ಡೆಂಗ್ಯೂ ಸೇರಿ 21 ಕಾಯಿಲೆಗಳ ಲಕ್ಷಣಗಳು ಕಂಡು ಬಂದರೆ ಖಾಸಗಿ ಕ್ಲಿನಿಕ್‌ಗಳಿಂದ ಹಿಡಿದು ನರ್ಸಿಂಗ್ ಹೋಂಗಳವರೆಗೆ ಎಲ್ಲರೂ ಇಲಾಖೆಗೆ ಮಾಹಿತಿ ನೀಡುವುದು ಕಡ್ಡಾಯಗೊಳಿಸುವ ಹೊಸ ಕಾಯ್ದೆ ಸಹ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.