ಮಂಗಳೂರು: ನಗರದಲ್ಲಿ ಮಲೇರಿಯಾ ರೋಗಿಗಳ ಸಂಖ್ಯೆ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿದೆ. ಇಲ್ಲಿನ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ಅವರ ಕುಟುಂಬ ಸದಸ್ಯರಲ್ಲಿ ಮಲೇರಿಯಾ ಹೆಚ್ಚಾಗಿ ಕಂಡುಬರುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಖಾಸಗಿ ವೈದ್ಯರು ಸರಕಾರದ ನಿರ್ದೇಶನದಂತೆ ಚಿಕಿತ್ಸೆ ನೀಡಬೇಕಿದೆ ಎಂದು ರಾಷ್ಟ್ರೀಯ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ (ಎನ್‌ವಿಬಿಡಿಸಿಪಿ)ದ ಹಿರಿಯ ವಲಯ ನಿರ್ದೇಶಕ ಡಾ| ರವಿಕುಮಾರ್ ಹೇಳಿದರು.
ಅವರು ಶನಿವಾರ ನಗರದ ವೆನ್ಲಾಕ್ ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ವತಿಯಿಂದ ಮಂಗಳೂರಿನ ಖಾಸಗಿ ವೈದ್ಯರಿಗಾಗಿ ಹಮ್ಮಿಕೊಂಡಿದ್ದ ಮಲೇರಿಯಾ ಚಿಕಿತ್ಸೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಲೇರಿಯಾ ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ಚಿಕಿತ್ಸೆ ನೀಡುವುದು ಅತಿ ಅಗತ್ಯವಾಗಿದ್ದು, ಕಾಯಿಲೆಯ ಹಂತಗಳನ್ನು ತಿಳಿದುಕೊಂಡು ಔಷಧ ನೀಡಬೇಕಾಗುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಕ್ಕಳು, ಬಾಣಂತಿಯರು ಎಂಬ ಅಂಶಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕಿದೆ ಎಂದರು.
ಮಂಗಳೂರಲ್ಲೇ ಅಧಿಕಎನ್‌ವಿಬಿಡಿಸಿಪಿ ಉಪನಿರ್ದೇಶಕ ಡಾ| ಪ್ರಕಾಶ್ ಕುಮಾರ್ ಮಾತನಾಡಿ, ಕಳೆದ ವರ್ಷ ರಾಜ್ಯದಲ್ಲಿ 6,565 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ ಬಹುತೇಕ ಪ್ರಕರಣಗಳು ಮಂಗಳೂರಿನಿಂದ ದಾಖಲಾಗಿವೆ. ರಾಜ್ಯದಲ್ಲಿ ಒಟ್ಟಾರೆ ನಗರ ಭಾಗದಲ್ಲಿ ಶೇ. 72 ಹಾಗೂ ಗ್ರಾಮೀಣ ಭಾಗದಲ್ಲಿ ಶೇ. 28 ಪ್ರಕರಣಗಳು ಕಂಡುಬಂದಿದ್ದರೆ, ನಗರ ಭಾಗದ ಶೇ. 95 ಪ್ರಕರಣಗಳು ಮಂಗಳೂರಿನಿಂದಲೇ ದಾಖಲಾಗಿವೆ. ಹೀಗಾಗಿ ಮಂಗಳೂರಿನಲ್ಲಿ ಮಲೇರಿಯಾ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಇಲ್ಲಿನ ಖಾಸಗಿ ವೈದ್ಯರ ಪಾತ್ರ ಅತಿ ಮುಖ್ಯವಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಬೇಕಿದೆ. ಜತೆಗೆ ಸಮರ್ಪಕವಾಗಿ ಫಾಗಿಂಗ್ ಕಾರ್ಯ ನಡೆದರೆ ಮಾತ್ರ ಮಲೇರಿಯಾ ನಿಯಂತ್ರಣ ಸಾಧ್ಯ ಎಂದರು.
ವೇದಿಕೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್, ಎನ್‌ವಿಬಿಡಿಸಿಪಿ ಜಂಟಿ ನಿರ್ದೇಶಕ ಡಾ| ಶಿವರಾಜ್ ಸಜ್ಜನ್ ಶೆಟ್ಟಿ, ಜಿಲ್ಲಾ ನೋಡೆಲ್ ಅಧಿಕಾರಿ ಡಾ| ಮಹಮ್ಮದ್ ಶರೀಫ್, ಡಾ| ಅರುಣ್‌ಕುಮಾರ್ ಉಪಸ್ಥಿತರಿದ್ದರು.