Advertisement

ಪರ್ಪುಂಜ, ಶೇಕಮಲೆ: ಮಲೇರಿಯಾ ಪ್ರಕರಣ ಪತ್ತೆ

12:07 AM Jun 12, 2019 | mahesh |

ಬಡಗನ್ನೂರು: ಒಳಮೊಗ್ರು ಗ್ರಾಮದ ಪರ್ಪುಂಜ ಹಾಗೂ ಶೇಕಮಲೆಯಲ್ಲಿ ಎರಡು ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆಯ ಬಳಿಕ ಇಬ್ಬರೂ ಗುಣಮುಖರಾಗಿದ್ದಾರೆ.ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿ ಪ್ರಮೀಳಾ ಅವರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದರು.

Advertisement

ಗ್ರಾ.ಪಂ. ಅಧ್ಯಕ್ಷ ಯತಿರಾಜ್‌ ರೈ ನೀರ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಜೂ. 11ರಂದು ಪಂಚಾಯತ್‌ ಸಭಾಂಗಣದಲ್ಲಿ ಸಭೆ ನಡೆಯಿತು. ಮಳೆಗಾಲ ಆರಂಭವಾಗಿದ್ದು, ರಸ್ತೆ ಬದಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೊಳೆತ ತ್ಯಾಜ್ಯ ಹಾಗೂ ನೀರು ಸಂಗ್ರಹಣೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಈ ಬಗ್ಗೆ ಗ್ರಾ.ಪಂ. ಕೂಡ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯಾಧಿಕಾರಿ ಮನವಿ ಮಾಡಿಕೊಂಡರು.

ಸಾರ್ವಜನಿಕ ಸ್ಥಳಗಳಲ್ಲಿ ಕಸ, ತ್ಯಾಜ್ಯ ಕುಂಬ್ರ ಪೇಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಬದಿಗಳಲ್ಲಿ ತ್ಯಾಜ್ಯ ಸೇರಿದಂತೆ ಕಸ, ಪ್ಲಾಸ್ಟಿಕ್‌ ಬಾಟಲಿಗಳ ರಾಶಿ ಬಿದ್ದಿವೆ ಎಂದು ಶಶಿಕಿರಣ್‌ ರೈ ತಿಳಿಸಿದರು. ಪರ್ಪುಂಜದ ಕೆಲ ಅಂಗಡಿಗಳ ಹಿಂಬದಿಗಳಲ್ಲಿ ಕಸದ ರಾಶಿ ತುಂಬಿಕೊಂಡಿದೆ. ರಾತ್ರಿ ಸಮಯದಲ್ಲಿ ಕಸ ತಂದು ಹಾಕುತ್ತಿರುವ ಹಾಗೆ ಕಾಣುತ್ತಿದೆ ಎಂದು ಆರೋಗ್ಯ ಸಹಾಯಕಿ ಪ್ರಮೀಳಾತಿಳಿಸಿದರು.

ಸ್ಥಳ ಬದಲಾವಣೆ ಬೇಡ
ಗ್ರಾಮದಲ್ಲಿ ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎನ್ನುವುದು ಆಯಾ ಪಂಚಾಯತ್‌ ಸದಸ್ಯರಿಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ಎಲ್ಲಿ ನೀರಿನ ಟ್ಯಾಂಕ್‌ ಆಗಬೇಕು, ಬೋರ್‌ವೆಲ್‌ ಬೇಕು ಎನ್ನುವ ಬಗ್ಗೆ ಪಂಚಾಯತ್‌ ಆಡಳಿತ ಮಂಡಳಿ ನಿರ್ಣಯಿಸಿ ಮನವಿಯನ್ನು ಜಿಲ್ಲಾ ಪಂಚಾಯತ್‌ಗೆ ಕಳುಹಿಸುತ್ತದೆ. ಹೀಗೆ ಕಳುಹಿಸಿದ ಮನವಿಯಲ್ಲಿರುವ ಸ್ಥಳವನ್ನು ಜಿಲ್ಲಾ ಪಂಚಾಯತ್‌ ಬದಲಾವಣೆ ಮಾಡುವುದು ಸರಿಯಲ್ಲ. ಪಂಚಾಯತ್‌ಆಡಳಿತ ಮಂಡಳಿ ಆಯ್ಕೆ ಮಾಡಿ ತಿಳಿಸಿದ ಸ್ಥಳಕ್ಕೆ ಅನುದಾನ ಕೊಡಬೇಕು ಎಂದು ಅಬ್ದುಲ್‌ ರಹೀಮಾನ್‌ ಹೇಳಿದರು.

ಪರ್ಪುಂಜ, ಕುಂಬ್ರ, ಕೊಲತ್ತಡ್ಕ, ಬಿಜಳ ಇತ್ಯಾದಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಜಿ.ಪಂ. ಎಂಜಿನಿಯರ್‌ ಅವರು ಇಮೇಲ್‌ ಮಾಡಿದ್ದೇವೆ ಎಂದು ಅಧ್ಯಕ್ಷರು ತಿಳಿಸಿದರು. ಉಪಾಧ್ಯಕ್ಷೆ ಸುನಂದಾ, ಸದಸ್ಯರಾದ ಶೀನಪ್ಪ ನಾಯ್ಕ, ಜಯರಾಮ ರೈ, ಮಹೇಶ್‌ ಕೇರಿ, ಪಿ.ವಿಶ್ವನಾಥ, ಸುಂದರಿ, ವಸಂತಿ ಡಿ., ಚಂದ್ರಕಲಾ, ಉಷಾ ನಾರಾಯಣ ಎಚ್‌., ತ್ರಿವೇಣಿ ಕೆ., ಭಾಗೀರಥಿ ಬಿ., ವಸಂತಿ ಆರ್‌. ಶೆಟ್ಟಿ ಉಪಸ್ಥಿತರಿದ್ದರು.

Advertisement

ಅಭಿವೃದ್ಧಿ ಅಧಿಕಾರಿ ಗೀತಾ ಬಿ.ಎಸ್‌. ಸುತ್ತೋಲೆಗಳನ್ನು ಓದಿದರು. ಕಾರ್ಯದರ್ಶಿ ದಾಮೋದರ ಸ್ವಾಗತಿಸಿ, ವರದಿ ವಾಚಿಸಿ ವಂದಿಸಿದರು. ಸಿಬಂದಿ ಗುಲಾಬಿ ಅರ್ಜಿಗಳನ್ನು ಓದಿದರು. ಜಯಶೀಲ, ಕೇಶವ, ಜಾನಕಿ ಸಹಕರಿಸಿದರು.

ಸರಕಾರಿ ಆಸ್ಪತ್ರೆ: ಲ್ಯಾಬ್‌ ಟೆಕ್ನಿಷಿಯನ್‌ ಇಲ್ಲ
ಯಾವುದೇ ಜ್ವರವನ್ನು ರಕ್ತ ಪರೀಕ್ಷೆ ಮಾಡಿಯೇ ಅದು ಮಲೇರಿಯಾ ಜ್ವರವಾ ಅಥವಾ ಡೆಂಗ್ಯೂ ಜ್ವರವಾ ಎಂದು ಹೇಳಬೇಕಾಗುತ್ತದೆ. ಆದರೆ ರಕ್ತ ಪರೀಕ್ಷೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ ಇಲ್ಲ. ಬಡವರು ಖಾಸಗಿ ಲ್ಯಾಬ್‌ಗಳ ಮೊರೆಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಬ್ದುಲ್‌ ರಹೀಮಾನ್‌ ಅರಿಯಡ್ಕ ಹೇಳಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

ಗ್ರಂಥಾಲಯಕ್ಕೆ ಜಾಗ: ಆಯುಕ್ತರಿಗೆ ಪತ್ರ
ಕುಂಬ್ರ ಪೇಟೆಯ ಕಾಲೇಜು ಬಳಿ ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೃಷಿ ಇಲಾಖೆಯ ಕಟ್ಟಡವಿರುವ ಜಾಗವನ್ನು ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ಬಿಟು rಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಬರೆದುಕೊಳ್ಳಲಾಗಿದ್ದರೂ, ಕೃಷಿ ಇಲಾಖೆ ಇದಕ್ಕೆ ಇದುವರೆಗೆ ಉತ್ತರ ನೀಡಿಲ್ಲ. ಆದ್ದರಿಂದ ನೇರವಾಗಿ ಕೃಷಿ ಆಯುಕ್ತರಿಗೆ ಪತ್ರಬರೆಯುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ನೆಟ್ಟ ಗಿಡದ ಹಕ್ಕು ಯಾರಿಗೆ?
ಅರಣ್ಯ ಇಲಾಖೆ ಗಿಡ ನೆಡಿ ಮರ ಬೆಳೆಸಿ ಎಂದು ಹೇಳುತ್ತಲೇ ಇದೆ. ಪ್ರತಿ ವರ್ಷ ಗಿಡಗಳನ್ನು ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಕೊಡುತ್ತಿದೆ. ಆದರೆ ನೆಟ್ಟ ಗಿಡ ಮರವಾಗಿ ಬೆಳೆದ ಮೇಲೆ ಆ ಮರದ ಹಕ್ಕು ಯಾರಿಗೆ? ಅನ್ನೋದೇ ಪ್ರಶ್ನೆಯಾಗಿದೆ. ನೆಟ್ಟ ಗಿಡವು ಮರವಾಗಿ ಬೆಳೆದು ಗಾಳಿಗೆ ಉರುಳಿ ಬಿದ್ದರೂ ಅದನ್ನು ಕಡಿಯುವ ಹಕ್ಕು ನೆಟ್ಟವರಿಗಿಲ್ಲ. ಕಡಿದರೆ ಅರಣ್ಯಇಲಾಖೆ ಕೇಸು ಮಾಡುತ್ತದೆ ಎಂದು ಅರಿಯಡ್ಕ ಅಬ್ದುಲ್‌ ರಹೀಮಾನ್‌ ಹೇಳಿದರು. ನಾವು ನಮ್ಮ ಜಾಗದಲ್ಲಿ ನೆಟ್ಟ ಗಿಡ, ಮರವಾಗಿ ಬೆಳೆದ ಮೇಲೆ ಅದರ ಸಂಪೂರ್ಣ ಹಕ್ಕು ನೆಟ್ಟವನಿಗೆ ಸಿಗುವಂತಾಗಬೇಕು. ಈ ಬಗ್ಗೆ ಅರಣ್ಯಇಲಾಖೆಗೆ ಬರೆದುಕೊಳ್ಳಬೇಕು ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next