ಮಲೇರಿಯಾ ಸೋಂಕುಕಾರಕ ಪರೋಪಜೀವಿಗಳನ್ನು ಪ್ರಸಾರ ಮಾಡುವ ಅನಾಫಿಲಿಸ್ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಕೀಟನಾಶಕ ಹಾಯಿಸಿದ ಸೊಳ್ಳೆ ಪರದೆ (ಐಟಿಎನ್‌ಗಳು)ಗಳನ್ನು ಉಪಯೋಗಿಸುವುದು. ಡೆಂಗ್ಯೂ ರೋಗವನ್ನು ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಮನೆಯೊಳಗೆ ಮತ್ತು ಆಸುಪಾಸಿನಲ್ಲಿ ಪರಿಣಾಮಕಾರಿ ಕೀಟನಾಶಕಗಳನ್ನು ಸಿಂಪಡಿಸಬೇಕು.
ಒಳಾಂಗಣದಲ್ಲಿ ಕೀಟನಾಶಕ (ಇನ್‌ಡೋರ್ ರೆಸಿಡ್ಯುಯಲ್ ಸ್ಪ್ರೆàಯಿಂಗ್ – ಐಆರ್‌ಎಸ್) ಗಳನ್ನು ಸಿಂಪಡಿಸುವುದರಿಂದ ಹೆಣ್ಣು ಸೊಳ್ಳೆಗಳ ಸಂತಾನಾಭಿವೃದ್ಧಿಗೆ ತಡೆ ಉಂಟಾಗುತ್ತದೆ. ಇದರಿಂದ ಡೆಂಗ್ಯೂ ವೈರಸ್ ಪ್ರಸಾರವು ಪ್ರತಿಬಂಧಿಸಲ್ಪಡುತ್ತದೆ.
ಸೊಳ್ಳೆಗಳು ಆಹಾರ ಪಡೆದ ಬಳಿಕ ಗೋಡೆಗಳು ಮತ್ತು ಛಾವಣಿಗಳಲ್ಲಿ ವಿರಮಿಸುತ್ತವೆ. ಹೀಗಾಗಿ ಕೀಟನಾಶಕಗಳ ಸಿಂಪಡನೆಯ ಮೂಲಕ ಅವುಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದಾಗಿದೆ. ಸೊಳ್ಳೆಗಳ ಲಾರ್ವಾಗಳನ್ನು ನಾಶಪಡಿಸುವುದಕ್ಕಾಗಿ ಮನೆಯೊಳಗೆ ಕೀಟನಾಶಕಗಳನ್ನು ಸಿಂಪಡಿಸುವುದರ ಜತೆಗೆ ಮನೆಯ ಆಸುಪಾಸಿನಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಅಲ್ಲೂ ಕೀಟನಾಶಕ ಸಿಂಪಡಿಸಬೇಕು. ಇದರಿಂದಲೂ ಸೊಳ್ಳೆಗಳ ಸಂತಾನಾಭಿವೃದ್ಧಿ ಮತ್ತು ಸಂಖ್ಯೆಯನ್ನು ನಿಯಂತ್ರಿಸಬಹುದು.
ಬೆಳಗ್ಗಿನಿಂದ ಸಂಜೆಯ ವರೆಗೂ ಸೊಳ್ಳೆಗಳ ಕಡಿತಕ್ಕೆ ಗುರಿಯಾಗುವುದನ್ನು ತಪ್ಪಿಸಿ. ವಿಶೇಷವಾಗಿ ಮುಂಜಾನೆ ಮತ್ತು ಮುಸ್ಸಂಜೆಯ ಹೊತ್ತು ಸೊಳ್ಳೆಗಳು ಸಾಕಷ್ಟು ಕ್ರಿಯಾಶೀಲವಾಗಿರುತ್ತವೆ. ದೇಹ ಮುಚ್ಚುವ ಉದ್ದನೆಯ ತೋಳಿನ ಉಡುಪುಗಳು ಮತ್ತು ಪ್ಯಾಂಟುಗಳನ್ನು ಧರಿಸಿ.
ಕಿಟಕಿಗಳ ಮೂಲಕ ಸೊಳ್ಳೆಗಳು ಬಾರದಂತೆ ಪರದೆಗಳನ್ನು ಅಳವಡಿಸುವುದು ಕಡಿಮೆ ಖರ್ಚಿನ ಮತ್ತು ಸರಳವಾದ ಸೊಳ್ಳೆ ನಿಯಂತ್ರಣ ವಿಧಾನವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ವಿಕರ್ಷಕಗಳನ್ನು ಮನೆಯೊಳಗೆ ಉಪಯೋಗಿಸಬಹುದಾಗಿದೆ.
ಮನೆಯೊಳಗೂ ಹೊರಗೂ ನೀರು ನಿಲ್ಲುವ ಸ್ಥಳಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ನೀರು ಸಂಗ್ರಾಹಕ ಟ್ಯಾಂಕಿ ಇತ್ಯಾದಿಗಳಲ್ಲಿ ದೀರ್ಘಕಾಲ ನೀರು ಸಂಗ್ರಹಿಸಿ ಇಡಬಾರದು. ಇದು ಬಹಳ ಉಪಯುಕ್ತವಾದ ಸರಳ ನಿಯಂತ್ರಣ ವಿಧಾನವಾಗಿದೆ. ಕೊಳಚೆ ಮತ್ತು ಹಳೆಯ ಟಯರುಗಳು, ಕುಡಿದು ಎಸೆದ ಸೀಯಾಳದ ಬುರುಡೆ ಇತ್ಯಾದಿ ನೀರು ನಿಂತು ಸೊಳ್ಳೆ ಸಂತಾನಾಭಿವೃದ್ಧಿ ಆಗುವಂತಹ ಸ್ಥಳಗಳನ್ನು ನಾಶ ಮಾಡುವುದು, ಕೊಳಚೆ ನೀರು ಹರಿಯುವ ಕೊಳವೆಗಳನ್ನು ಮತ್ತು ಚರಂಡಿಗಳನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದರಿಂದ ಸೊಳ್ಳೆಗಳ ಲಾರ್ವಾಗಳನ್ನು ನಾಶಪಡಿಸಿ ಪ್ರೌಢ ಸೊಳ್ಳೆ ಉತ್ಪಾದನೆ ಆಗದಂತೆ ತಡೆಯಲು ಸಹಕಾರಿಯಾಗುತ್ತದೆ.
ಡೆಂಗ್ಯೂ ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆಯು ಶುದ್ಧ ನೀರಿನಲ್ಲಿಯೇ ಸಂತಾನೋತ್ಪತ್ತಿ ನಡೆಸುತ್ತದೆ. ಹೀಗಾಗಿ ಡ್ರಮ್, ಬಕೆಟ್, ಹೂಕುಂಡ ಇತ್ಯಾದಿಗಳನ್ನು ಶುಚಿಯಾಗಿ ಇರಿಸಿಕೊಳ್ಳಬೇಕು ಮತ್ತು ನೀರಿನ ಸಂಗ್ರಾಹಕಗಳು ತೆರೆದಿರದಂತೆ ನೋಡಿಕೊಳ್ಳಬೇಕು.