ನರಗುಂದ: ಮುಂಗಾರು ಮಳೆಯಿಲ್ಲದೇ ಕಂಗಾಲಾದ ತಾಲೂಕಿನ ರೈತರು ಹಿಂಗಾರು ಅವಧಿಯಲ್ಲಾದರೂ ಉತ್ತಮ ಬೆಳೆ ತೆಗೆಯುವ ಉತ್ಸಾಹದೊಂದಿಗೆ ಸಾಕಷ್ಟು ಬಿತ್ತನೆ ಮಾಡಿ ಕಾಲುವೆ ನೀರು ಅವಲಂಬಿಸಿದ್ದಾರೆ. ಆದರೆ ಸಮರ್ಪಕ ನೀರು ನಿರ್ವಹಣೆಯಲ್ಲಿ ನೀರಾವರಿ ಅಧಿಕಾರಿಗಳ ತಾತ್ಸಾರದಿಂದಾಗಿ ರೈತರ ಬೆಳೆಗೆ ತಂಪೆರೆಯಬೇಕಾದ ಮಲಪ್ರಭಾ ಕಾಲುವೆ ನೀರು ವ್ಯರ್ಥವಾಗಿ ಹರಿಯುತ್ತಿದೆ.
ಪ್ರತಿವರ್ಷ ಹಿಂಗಾರು ಅವಧಿಯಲ್ಲಿ ನೀರಾವರಿ ನಿಗಮದ ಅಧಿಕಾರಿಗಳು ಕಾಲುವೆಗೆ ನೀರು ಹರಿಸಿ ಕೈತೊಳೆದುಕೊಂಡು ಅತ್ತ ತಿರುಗಿ ನೋಡುವುದಿಲ್ಲ. ಇಂತಹ ನಿರ್ಲಕ್ಷ್ಯದ ಪರಿಣಾಮ ಕಾಲುವೆಗೆ ನೀರು ಹರಿಸಿದ ಸಂದರ್ಭದಲ್ಲಿ ತಾಲೂಕಿನ ಹಳ್ಳ ಕೊಳ್ಳಗಳು ತುಂಬಿ ಹರಿಯುವುದು ಸಾಮಾನ್ಯವಾಗಿದೆ. ಬೆಳೆಗೆ ಬಾರದ ನೀರು ವ್ಯರ್ಥವಾಗಿ ಹರಿದು ನದಿಗೆ ಸೇರುವುದು ರೈತರಲ್ಲಿ ಅಸಮಾಧಾನ ಮೂಡಿಸುತ್ತಿದೆ.
ಈ ಮಧ್ಯೆ ಕಳೆದ ತಿಂಗಳು ಉಕ್ಕಿ ಹರಿದಿದ್ದ ಮಲಪ್ರಭಾ ನರಗುಂದ ಶಾಖಾ ಕಾಲುವೆಯ 12ನೇ ಉಪ ಹಂಚಿಕೆಯ ಪಟ್ಟಣದ ಸೋಮಾಪುರ ಕಾಲುವೆ ನೀರು ಶನಿವಾರ ಕೂಡ ಮತ್ತೇ ಉಕ್ಕಿ ಹರಿದಿದೆ. ಈ ರೀತಿ ನೀರು ಪೋಲಾಗುತ್ತಿದ್ದರೂ ಇಲ್ಲಿ ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.
ಸೋಮಾಪುರ ಕಾಲುವೆ ನೀರು ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಸೋಮಾಪುರ ಬಡಾವಣೆ ಹೊರವಲಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ನೀರಾವರಿ ಕಾಲೋನಿ ಬಳಿಯೇ ಕಾಲುವೆ ನೀರು ಪೋಲಾಗುತ್ತಿದೆ.
ಹಿಂದೊಮ್ಮೆ ಇದೇ ಕಾಲುವೆ ನೀರು ಉಕ್ಕಿ ಹರಿದಾಗಲೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ಬೇಜವಾಬ್ದಾರಿ ರೈತರಿಗೆ ಶಾಪವಾಗಿ ಪರಿಣಮಿಸುತ್ತಿದೆ. ರೈತರ ಜಮೀನಿಗೆ ಸಿಗಬೇಕಾದ ಕಾಲುವೆ ನೀರು ಇಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದರೂ ಅತ್ತ ತಿರುಗಿ ನೋಡುವ ವ್ಯವಧಾನ ನೀರಾವರಿ ಅಧಿಕಾರಿಗಳಿಗೆ ಇಲ್ಲದಂತಾಗಿದೆ. ಇದರ ಪರಿಣಾಮ ರೈತರ ಬೆಳೆಗಳಿಗೆ ತಂಪೆರೆಯಬೇಕಾದ ನೀರು ಪೋಲಾಗುತ್ತಿದೆ. ಇಲ್ಲಿ ಈ ಸ್ಥಿತಿಯಾದರೆ ಅತ್ತ ಕಾಲುವೆ ಕೆಳಹಂತದ ರೈತರು ಜಮೀನಿಗೆ ನೀರು ಬಾರದೇ ಕೈಕಟ್ಟಿ ಕೂಡುವಂತಾಗಿದೆ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
ಇದು ಕೇವಲ ಈ ವರ್ಷದ ತಾಪತ್ರಯವಲ್ಲ. ಪ್ರತಿವರ್ಷ ಕಾಲುವೆಗೆ ನೀರು ಹರಿಸಿದಾಗ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ತಾಲೂಕಿನ ಹಿರೇಹಳ್ಳ, ವರ್ತಿ ಹಳ್ಳ, ಇರುಮಾರು ಹಳ್ಳ ಮುಂತಾದ ಹಳ್ಳಗಳಲ್ಲಿ ಕಾಲುವೆ ನೀರು ವ್ಯರ್ಥವಾಗಿ ಹರಿಯುತ್ತಿದ್ದರೂ ನೀರಾವರಿ ಅಧಿಕಾರಿಗಳಾಗಲಿ ಅಥವಾ ನೀರು ನಿರ್ವಹಣೆ ಮಾಡುವ ಸಹಕಾರಿ ಸಂಘಗಳಾಗಲಿ ಇದನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತಿಲ್ಲ ಎಂಬುದು ರೈತರು ದೂರು.
ಇನ್ನಾದರೂ ನೀರಾವರಿ ಅಧಿಕಾರಿಗಳು ಎಚ್ಚೆತ್ತುಕೊಂಡು ಪೋಲಾಗುತ್ತಿರುವ ನೀರನ್ನು ತಡೆದು ರೈತರ ಜಮೀನುಗಳಿಗೆ ತಲುಪುವಂತೆ ಸಮರ್ಪಕವಾಗಿ ನಿರ್ವಹಣೆ ಮಾಡಲಿ. ಇಲ್ಲವಾದಲ್ಲಿ ಮೊದಲೇ ಮಳೆ ಅವಕೃಪೆಯಿಂದ ಕಂಗಾಲಾಗಿ ಮುಂಗಾರು ಹಂಗಾಮಿನ ವಾಣಿಜ್ಯ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ನಾವು ಹಿಂಗಾರು ಬೆಳೆಗಳಿಂದಲೂ ವಂಚಿತ ಆಗಬೇಕಾಗುತ್ತದೆ ಎಂಬುದು ತಾಲೂಕಿನ ರೈತರ ಅಳಲಾಗಿದೆ.