Advertisement

ಮಳಲಿ ಮಸೀದಿ ವಿವಾದ: ಜ್ಞಾನವಾಪಿ ಮಸೀದಿ ಪ್ರಕರಣದಂತೆ ಕಮಿಷನರ್‌ ನೇಮಕ ಆಗಲಿ

10:34 PM Jun 22, 2022 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿಯ ರಚನೆ ಹಾಗೂ ಕುರುಹುಗಳು ಪತ್ತೆಯಾಗಿರುವ ಕುರಿತು ಪರಿಶೀಲನೆ ನಡೆಸಲು ಜ್ಞಾನವಾಪಿ ಮಸೀದಿಯ ಪ್ರಕರಣದಂತೆ ಕಮಿಷನರ್‌ ನೇಮಕವಾಗವೇಕು ಪ್ರಕರಣದಲ್ಲಿ ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ವಿವೇಕ್‌ ಸುಬ್ಟಾರೆಡ್ಡಿ ಹೈಕೋರ್ಟ್‌ ಮುಂದೆ ಪ್ರತಿಪಾದಿಸಿದ್ದಾರೆ.

Advertisement

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನ ತೆಂಕಳೈಪಾಡಿ ಗ್ರಾಮದ ಧನಂಜಯ್‌ ಹಾಗೂ ಬಡುಗಳೈಪಾಡಿ ಗ್ರಾಮದ ಮನೋಜ್‌ ಕುಮಾರ್‌ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್‌ ಸುಬ್ಟಾರೆಡ್ಡಿ, ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆಯಾದಾಗಲೂ ಆ ಅರ್ಜಿಯ ವಿಚಾರಣಾ ಮಾನ್ಯತೆಯ ಕುರಿತು ಪ್ರಶ್ನೆ ಎದುರಾಗಿತ್ತು. ಆದರೆ, ನ್ಯಾಯಾಲಯ ಮೊದಲು ಸ್ಥಳಪರಿಶೀಲನೆ ನಡೆಯಲಿ, ಅರ್ಜಿಯ ವಿಚಾರಣಾ ಮಾನ್ಯತೆ ಕುರಿತು ಮುಂದೆಯೂ ವಿಚಾರಣೆ ನಡೆಸಬಹುದು ಎಂದು ತಿಳಿಸಿ ಕಮಿಷನರ್‌ ನೇಮಕ ಮಾಡಿತ್ತು. ವಿಶೇಷ ಸಂದರ್ಭಗಳಲ್ಲಿ ಆರಂಭಿಕ ಹಂತದಲ್ಲೇ ಕಮಿಷನರ್‌ ನೇಮಕ ಮಾಡಬಹುದು. ಮೊದಲು ಪುರಾವೆಗಳನ್ನು ಸಂಗ್ರಹಿಸಿ, ಸುರಕ್ಷಿತವಾಗಿಡಬೇಕು. ಆದ್ದರಿಂದ, ಮಳಲಿ ಮಸೀದಿ ವಿಚಾರದಲ್ಲೂ ಜ್ಞಾನವಾಪಿ ಮಸೀದಿ ಪ್ರಕರಣದಂತೆ ಅರ್ಜಿಯ ವಿಚಾರಣಾ ಮಾನ್ಯತೆಯ ವಿಷಯವನ್ನು ಬದಿಗಿರಿಸಿ, ಕಮಿಷನರ್‌ ನೇಮಕ ಮಾಡಬೇಕು. ಈ ಕುರಿತು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಅಲ್ಲದೆ, ಸಾರ್ವಜನಿಕ ಪೂಜಾ ಸ್ಥಳ ಕಾಯ್ದೆಯು ಈ ಮಸೀದಿಗೆ ಅನ್ವಯಿಸುವುದಿಲ್ಲ. ಏಕೆಂದರೆ, ಮಸೀದಿಯವರೇ ಹೇಳಿರುವ ಪ್ರಕಾರ ಅದು 700ಕ್ಕೂ ಅಧಿಕ ವರ್ಷಗಳಷ್ಟು ಹಳೆಯದಾಗಿದೆ. ಅಲ್ಲಿ 1,500ಕ್ಕೂ ಅಧಿಕ ವರ್ಷಗಳ ಹಳೆಯ ದೇವಾಲಯವಿದೆ ಎಂದು ಹಿಂದುಗಳು ಹೇಳುತ್ತಿದ್ದಾರೆ. ಪ್ರಾಚೀನ ಸ್ಮಾರಕಗಳ ಕಾಯ್ದೆ-1958ರ ಪ್ರಕಾರ 100 ವರ್ಷಕ್ಕಿಂತ ಹಳೆಯ ಕಟ್ಟಡಗಳು ಪುರಾತನ ಸ್ಮಾರಕವೆನಿಸಿಕೊಳ್ಳಲಿದ್ದು, ಆ ಕಟ್ಟಡಗಳಿಗೆ ಸಾರ್ವಜನಿಕ ಪೂಜಾ ಸ್ಥಳ ಕಾಯ್ದೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Advertisement

ಪ್ರಕರಣವೇನು?
ಮಳಲಿ ಮಸೀದಿ ನವೀಕರಣ ಕಾಮಗಾರಿಯ ವೇಳೆ ದೇವಾಲಯ ಮಾದರಿ ರಚನೆ ಪತ್ತೆಯಾಗಿದೆ ಎನ್ನಲಾಗಿದ್ದು, ಆ ರಚನೆಯನ್ನು ಕೆಡವದಂತೆ ನಿರ್ಬಂಧ ವಿಧಿಸುವಂತೆ ಕೋರಿ ಧನಂಜಯ್‌ ಹಾಗೂ ಮನೋಜ್‌ ಕುಮಾರ್‌ ಸಿವಿಲ್‌ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್‌, ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಈ ಮಧ್ಯೆ ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯ್ದೆಯ ಅಡಿಯಲ್ಲಿ ಅಸಲು ದಾವೆ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿದ್ದರು. ಮತ್ತೂಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್‌ ಒಬ್ಬರನ್ನು ನೇಮಕ ಮಾಡಿ ಪರಿಶೀಲನೆ ನಡೆಸುವಂತೆ ಕೋರಿದ್ದರು. ಆದರೆ, ಸಿವಿಲ್‌ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸುತ್ತಿದೆ. ಇದರಿಂದ, ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next