Advertisement

Malali Masjid; ಹೈಕೋರ್ಟ್‌ ವಿಚಾರಣೆ ಅಂತ್ಯ, ಶೀಘ್ರ ಆದೇಶ ನಿರೀಕ್ಷೆ

11:32 PM Feb 02, 2024 | Team Udayavani |

ಮಂಗಳೂರು: ಗುರುಪುರ ಸಮೀಪದ ಮಳಲಿ ಮಸೀದಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದೆ. ಉತ್ತರಪ್ರದೇಶದ ಜ್ಞಾನವಾಪಿ ಮಸೀದಿಯ ನೆಲಅಂತಸ್ತಿನಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಾಣಸಿ ನ್ಯಾಯಾಲಯ ಅವಕಾಶ ಕೊಟ್ಟಿರುವ ಹೊತ್ತಿನಲ್ಲಿ ಮಳಲಿ ಪ್ರಕರಣ ತೀವ್ರ ಕುತೂಹಲ ಕೆರಳಿಸಿದೆ.

Advertisement

ಮಳಲಿಯ ಅಸಯ್ಯದ್‌ ಅಬ್ದುಲ್ಲಾಹಿಲ್‌ ಮದನಿ ಮಸೀದಿಯು ದೇಗುಲವನ್ನು ಹೋಲುವ ಬಗ್ಗೆ ವಿಶ್ವ ಹಿಂದೂ ಪರಿಷತ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಮಂಗಳೂರಿನ ಹೆಚ್ಚುವರಿ ಸಿವಿಲ್‌ ನ್ಯಾಯಾಲಯವು ತೀರ್ಪು ನೀಡಿತ್ತು. ಈ ಪ್ರಕರಣದ ವಿಚಾರಣೆ ನಡೆಸಲು ಅಧೀನ ನ್ಯಾಯಾಲಯಕ್ಕಿರುವ ಅಧಿಕಾರವನ್ನು ಪ್ರಶ್ನಿಸಿ ಮಸೀದಿ ಪರ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದರ ವಿಚಾರಣೆ ಪೂರ್ಣಗೊಂಡಿದ್ದು, ಆದೇಶ ನೀಡುವುದು ಬಾಕಿ ಇದೆ.

ಮಂಗಳೂರಿನ ಸಿವಿಲ್‌ ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಅವಕಾಶ ಇದೆ ಎಂದು ತೀರ್ಪು ನೀಡಿದರೆ ವಿಚಾರಣೆ ಮುಂದುವರಿಯಲಿದೆ. ಇಲ್ಲವಾದರೆ ಹೈಕೋರ್ಟ್‌ ತೀರ್ಪಿನ ವಿರುದ್ಧ ಮೈಸೂರಿನ ಟ್ರಿಬ್ಯುನಲ್‌ನಲ್ಲಿ ಕೇಸು ದಾಖಲಿಸುವ ಸಾಧ್ಯತೆ ಇದೆ.

ಮಸೀದಿ ಆಡಳಿತ ಮಂಡಳಿ ವಾದವೇನು?
ಮಂಗಳೂರಿನ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಮಸೀದಿಯ ಕಾಮಗಾರಿ ಮುಂದುವರಿಸಲು ಅವಕಾಶ ನೀಡಬೇಕು. ವಿಶ್ವಹಿಂದೂ ಪರಿಷತ್‌ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು. ವಕ್ಫ್ ಕಾಯ್ದೆ ಅನ್ವಯ ಈ ದಾವೆಯ ವಿಚಾರಣೆ ನಡೆಸುವ ಅಧಿಕಾರವು ನ್ಯಾಯಾಲಯಕ್ಕೆ ಇಲ್ಲ ಎಂದು ಮಸೀದಿ ಆಡಳಿತ ಮಂಡಳಿ ವಾದಿಸಿತ್ತು. ಇದನ್ನು ತಿರಸ್ಕರಿಸಿ, ವಿಶ್ವಹಿಂದೂ ಪರಿಷತ್‌ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ಮಾನ್ಯ ಮಾಡಿತ್ತು.

ಬಳಿಕ ವಿಹಿಂಪ ವತಿಯಿಂದ ಮಳಲಿಯ ರಾಮಾಂಜನೇಯ ಮಂದಿರದಲ್ಲಿ ತಾಂಬೂಲ ಪ್ರಶ್ನೆ ನಡೆಸಲಾಗಿದ್ದು, ಅದರಂತೆ ಮಸೀದಿ ಇದ್ದಲ್ಲಿ ಹಿಂದೆ ದೇಗುಲ ಇತ್ತು ಎಂದು ಕಂಡುಬಂದಿತ್ತು. ಈ ನಡುವೆ ಮಸೀದಿ ಆಡಳಿತವು, ಅಧೀನ ಕೋರ್ಟ್‌ಗೆ ಈ ವಿಚಾರಣೆ ನಡೆಸುವ ಅಧಿಕಾರ ಇಲ್ಲ ಎಂದು ಹೈಕೋರ್ಟ್‌ ಮೊರೆ ಹೋಗಿತ್ತು.

Advertisement

ಹೈಕೋರ್ಟ್‌ನಲ್ಲಿ ವಿಹಿಂಪ ಪರವಾಗಿ ತೀರ್ಪು ಬಂದಲ್ಲಿ ಸಿವಿಲ್‌ ನ್ಯಾಯಾಲಯದಲ್ಲೇ ವಿಚಾರಣೆ ಮುಂದುವರಿಯಲಿದೆ. ನಾವು ಮಸೀದಿಯಲ್ಲಿರುವ ಕುರುಹುಗಳ ಬಗ್ಗೆ ಪರಿಶೀಲಿಸಲು ಕೋರಿರುವ ಅರ್ಜಿ ಯಥಾಸ್ಥಿತಿಯಲ್ಲಿದ್ದು, ಅದನ್ನು ನಡೆಸುವಂತೆ ಕೋರಲಾಗುವುದು ಎಂದು ವಿಹಿಂಪ ಪರ ವಕೀಲ ಚಿದಾನಂದ ಕೆದಿಲಾಯ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next