Advertisement

ಮಳಲಿ ಮಸೀದಿ: ಮಂಗಳೂರು ಸಿವಿಲ್‌ ಕೋರ್ಟ್‌ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ

12:33 AM Jul 16, 2022 | Team Udayavani |

ಬೆಂಗಳೂರು: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಅಸಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸುತ್ತಿರುವ ಮಂಗಳೂರಿನ ಸಿವಿಲ್‌ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಅಸಲು ದಾವೆಯ ಭವಿಷ್ಯ ವಿಚಾರಣಾ ನ್ಯಾಯಾಲಯದಲ್ಲೇ ನಿರ್ಧಾರವಾಗಲಿದೆ.

Advertisement

ಈ ವಿಚಾರವಾಗಿ ಮಂಗಳೂರಿನ ತೆಂಕಳೈಪಾಡಿ ಗ್ರಾಮದ ಧನಂಜಯ್‌ ಹಾಗೂ ಬಡುಗಳೈಪಾಡಿ ಗ್ರಾಮದ ಮನೋಜ್‌ ಕುಮಾರ್‌ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ತಕರಾರು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್‌ ಸುಬ್ಟಾರೆಡ್ಡಿ ಹಾಗೂ ಮಸೀದಿ ಆಡಳಿತ ಮಂಡಳಿ ಪರ ಹಿರಿಯ ವಕೀಲ ಜಯಕುಮಾರ್‌ ಎಸ್‌. ಪಾಟೀಲ್‌ ವಾದ ಮಂಡಿಸಿದ್ದರು.

ಅರ್ಜಿದಾರರ ವಾದ ಏನಿತ್ತು:
ಮಳಲಿ ಮಸೀದಿಯಲ್ಲಿ ಪತ್ತೆಯಾಗಿರುವ ದೇವಾಲಯದ ರಚನೆ ಬಗ್ಗೆ ಮೊದಲು ಪರಿಶೀಲನೆಯಾಗಬೇಕು. ಅದರ ವಸ್ತುಸ್ಥಿತಿ ಪರಿಶೀಲಿಸಲು ನ್ಯಾಯಾಲಯದ ವತಿಯಿಂದ ಕಮಿಷನರ್‌ ಒಬ್ಬರನ್ನು ನೇಮಕ ಮಾಡಬೇಕು. ಜ್ಞಾನವಾಪಿ ಮಸೀದಿಯ ಮಾದರಿಯಲ್ಲಿ ಕಮಿಷನರ್‌ ನೇಮಕ ಮಾಡುವ ಕುರಿತು ಪರಿಗಣಿಸಬೇಕಿದೆ. ಆದ್ದರಿಂದ, ಕಮಿಷನರ್‌ ನೇಮಕ ಮಾಡುವ ಕುರಿತ ಮನವಿ ಬಗ್ಗೆ ಸಿವಿಲ್‌ ಕೋರ್ಟ್‌ ಮೊದಲು ವಿಚಾರಣೆ ನಡೆಸಬೇಕಿದೆ.

ನೂರು ವರ್ಷಕ್ಕೂ ಹಳೆಯ ಕಟ್ಟಡ ಪ್ರಾಚೀನ ಸ್ಮಾರಕ ಎನಿಸಿಕೊಳ್ಳುತ್ತದೆ. ಮಳಲಿ ಮಸೀದಿ 700 ವರ್ಷಕ್ಕೂ ಹಳೆಯದಾಗಿದೆ ಎಂದು ಮಸೀದಿಯವರೇ ಹೇಳುತ್ತಿದ್ದಾರೆ.

Advertisement

ಹೀಗಿರುವಾಗ ಒಳಗೆ ಪತ್ತೆಯಾಗಿರುವ ದೇವಾಲಯ ಅದಕ್ಕಿಂತ ಹಳೆಯದಾಗಿರುವ ಸಾಧ್ಯತೆ ಇರುತ್ತದೆ.

ಮಸೀದಿಯವರ ಮಾತನ್ನೇ ಒಪ್ಪಕೊಂಡರೂ ಪ್ರಾಚೀನ ಸ್ಮಾರಕಗಳಿಗೆ ಸಾರ್ವಜನಿಕ ಪೂಜಾ ಸ್ಥಳ ಕಾಯ್ದೆ ಅನ್ವಯಿಸುವುದಿಲ್ಲ.ಆದ್ದರಿಂದ, ಆ ಕಾಯ್ದೆಯಡಿ ದಾವೆ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂಬ ಅವರ ವಾದ ಒಪ್ಪಲು ಸಾಧ್ಯವಿಲ್ಲ .

ಮೊದಲು ಕಮಿಷನರ್‌ ನೇಮಕ ಮಾಡಬೇಕು. ಅವರು ಸ್ಥಳದ ಸರ್ವೇ ನಡೆಸಿ ವಸ್ತುನಿಷ್ಠ ವರದಿ ನೀಡಬೇಕು. ಅದಕ್ಕೂ ಮೊದಲು ದಾವೆಯ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಸಿ, ಒಂದೊಮ್ಮೆ ಅದು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ಆದೇಶ ನೀಡಿದರೆ, ತಕ್ಷಣವೇ ಒಳಗಿರುವ ದೇವಾಲಯ ರಚನೆಯನ್ನು ನೆಲಸಮಗೊಳಿಸುವ ಸಾಧ್ಯತೆ ಇದೆ. ಆದ್ದರಿಂದ, ಕಮಿಷನರ್‌ ನೇಮಕಗೊಂಡು, ಪರಿಶೀಲನೆ ನಡೆಸುವವರೆಗೆ ದಾವೆಯ ಸಿಂಧುತ್ವದ ಕುರಿತು ಯಾವುದೇ ಆದೇಶ ನೀಡದಂತೆ ಸಿವಿಲ್‌ ಕೋರ್ಟ್‌ಗೆ ನಿರ್ದೇಶಿಸಬೇಕು.

ಮಸೀದಿ ಆಡಳಿತ ಮಂಡಳಿ ವಾದ:
ಅಸಲು ದಾವೆಯನ್ನು ಆಲಿಸಲು ವಿಚಾರಣಾ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ನಿರ್ಧಾರವಾಗುವ ಮೊದಲು ಕಮಿಷನರ್‌ ವರದಿ ಅಗತ್ಯವಿಲ್ಲ. ಒಂದು ವೇಳೆ, ಮೊದಲು ಕಮಿಷನರ್‌ ನೇಮಿಸಿ, ವರದಿ ಬಂದ ನಂತರ ದಾವೆಯ ಸಿಂಧುತ್ವದ ಬಗ್ಗೆ ವಿಚಾರಣೆ ನಡೆದು ವ್ಯತಿರಿಕ್ತ ತೀರ್ಪು ಬಂದರೆ, ಕಮಿಷನರ್‌ ನೇಮಕ ಮತ್ತದರ ವರದಿ ಎರಡಕ್ಕೂ ಮಾನ್ಯತೆ ಇರುವುದಿಲ್ಲ. ಆದ್ದರಿಂದ, ಮೊದಲು ಅಸಲು ದಾವೆಯ ಸಿಂಧುತ್ವದ ಬಗ್ಗೆ ನಿರ್ಧಾರವಾಗಬೇಕಿದೆ.

ಪ್ರಕರಣವೇನು?
ಮಳಲಿ ಮಸೀದಿ ನವೀಕರಣ ಕಾಮಗಾರಿಯ ವೇಳೆ ದೇವಾಲಯ ಮಾದರಿ ರಚನೆ ಪತ್ತೆಯಾಗಿದೆ ಎನ್ನಲಾಗಿದ್ದು, ಆ ರಚನೆಯನ್ನು ಕೆಡವದಂತೆ ನಿರ್ಬಂಧ ವಿಧಿಸುವಂತೆ ಕೋರಿ ಧನಂಜಯ್‌ ಹಾಗೂ ಮನೋಜ್‌ ಕುರ್ಮಾ ಸಿವಿಲ್‌ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್‌, ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಈ ಮಧ್ಯೆ ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯ್ದೆಯ ಅಡಿಯಲ್ಲಿ ಅಸಲು ದಾವೆ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್‌ ಒಬ್ಬರನ್ನು ನೇಮಕ ಮಾಡಿ ಸ್ಥಳ ಪರಿಶೀಲನೆ ನಡೆಸುವಂತೆ ಕೋರಿದ್ದರು. ಆದರೆ, ಸಿವಿಲ್‌ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ಕೈಗೆತ್ತಿಕೊಂಡಿತ್ತು. ಇದನ್ನು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next