Advertisement
ಏರುತ್ತಿರುವ ತಾಪಮಾನದ ನಡುವೆಯೂ ಕೂಡಾ ಮಾಲಾಡಿ ಗ್ರಾಮಸ್ಥರು ಬತ್ತಿದ ಕೆರೆ ಹಾಗೂ ಆವೆಮಣ್ಣು ತೆಗೆದ ಹೊಂಡ ಹಾಗೂ ಕೃಷಿ ಭೂಮಿಗಳಿಗೆ ಹೊಳೆಸಾಲಿನಲ್ಲಿ ಹರಿದುಬಂದ ವಾರಾಹಿ ಕಾಲುವೆ ನೀರನ್ನು ಹಾಯಿಸುವ ಕಾರ್ಯದಲ್ಲಿ ನಿರತರಾಗಿದ್ದು ಪರಿಣಾಮ ಗ್ರಾಮದಲ್ಲಿ ನೀರಿನ ಒರತೆ ಹೆಚ್ಚಾಗಿದ್ದು ಗ್ರಾಮದ ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
ನೀರು ಹಾಯಿಸಿದ ಗ್ರಾಮಸ್ಥರು
ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಹೊಳೆ ಸಾಲಿನಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ಕಿಂಡಿ ಅಣೆಕಟ್ಟಿಗೆ ಸಮರ್ಪಕವಾದ ಹಲಗೆ ಅಳವಡಿಸದ ಹಿನ್ನೆಲೆಯಲ್ಲಿ ಹರಿದು ಬಂದ ನೀರು ನೇರವಾಗಿ ಮಲ್ಯಾಡಿ, ಕುದ್ರುಬೈಲು ಮಾರ್ಗವಾಗಿ ಗುಳ್ಳಾಡಿ ಹೊಳೆಯನ್ನು ಸಂದಿಸುತ್ತಿದೆ. ಆದ್ದರಿಂದ ಸ್ಥಳೀಯ ಮಾಲಾಡಿ ಗ್ರಾಮಸ್ಥರು ಹೊಳೆ ನೀರನ್ನು ಸಮೀಪದ ಆವೆಮಣ್ಣು ತೆಗೆದ ಹೊಂಡಕ್ಕೆ (ಕೊಜೆ ಹೊಂಡ)ಹಾಯಿಸುವ ಮೂಲಕ ಗ್ರಾಮದ ಅಂತರ್ಜಲ ಮಟ್ಟ ಹೆಚ್ಚಿಸಲು ಸ್ಥಳೀಯರಾದ ನಿವೃತ್ತ ಮುಖ್ಯೋಪಾಧ್ಯಾಯ ಮಾಲಾಡಿ ವಿಶ್ವನಾಥ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಶೆಟ್ಟಿ, ಸುರೇಶ್ ಶೆಟ್ಟಿ ಮಾಲಾಡಿ, ಸದಾಶಿವ ಶೆಟ್ಟಿ, ರಂಜಿತ್ ಶೆಟ್ಟಿ, ಸದಾಶಿವ ಶೆಟ್ಟಿ ಮಾಲಾಡಿ, ಗಣೇಶ್ ಮತ್ತಿತರು ನಿರಂತರವಾಗಿ ಶ್ರಮಿಸಿದ್ದಾರೆ.