Advertisement

ಮಾಲಾಡಿ: ಆಪರೇಷನ್‌ ಚೀತಾ ಕಾರ್ಯಾಚರಣೆ ಯಶಸ್ವಿ

09:41 PM Oct 06, 2019 | Sriram |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಮಾಲಾಡಿ ಅರೆಬೈಲು ತೋಳಾರ್‌ ಮಾವಿನ ತೋಪಿನಲ್ಲಿ ಕಳೆದ ಹಲವು ದಿನಗಳಿಂದಲೂ ಚಿರತೆ ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮಾಲಾಡಿ ಶ್ರೀ ನಂದಿಕೇಶ್ವರ ದೇವಸ್ಥಾನದ ಬಳಿ ಬೋನ್‌ ಇರಿಸಿ ಸತತವಾಗಿ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಫಲವಾಗಿ ಅ.6 ರಂದು ಚಿರತೆ ಸೆರೆ ಸಿಕ್ಕಿದೆ.

Advertisement

ಬೋನ್‌ನಲ್ಲಿ ಸೆರೆಯಾದ ಚಿರತೆ
ಚಿರತೆ ಬೋನಿನಲ್ಲಿ ಸೆರೆಯಾಗಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಸ್ಥಳದಲ್ಲಿ ಪರಿಸರದ ನೂರಾರು ಮಂದಿ ಜಮಾಯಿಸಿ ಕಾತರದಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ನೆರೆದವರು ಬೋನಿನಲ್ಲಿರುವ ಚಿರತೆಯ ದೃಶ್ಯವನ್ನು ವೀಕ್ಷಿಸಿದರು.

ಗ್ರಾ.ಪಂ.ನ ಸಹಕಾರ
ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಚಿರತೆಯ ಹೆಜ್ಜೆ ಗುರುತು ಇರುವ ಸಮೀಪದಲ್ಲಿಯೇ ಬೋನ್‌ ಇರಿಸಿದರು. ಒಂದೆಡೆ ನಾಯಿ ಮರಿಯನ್ನು ಬೋನಿನಲ್ಲಿ ಇರಿಸಿ, ಸ್ಥಳೀಯರಾದ ಸುರೇಶ್‌ ದೇವಾಡಿಗ ಮತ್ತು ಸತೀಶ್‌ ದೇವಾಡಿಗ ಅವರ ಸಹಕಾರದಿಂದ ಚಿರತೆ ಬೋನಿಗೆ ಬಿದ್ದಿದ್ದು “ಆಪರೇಷನ್‌ ಚೀತಾ ಕಾರ್ಯಾಚರಣೆ’ ಯಶಸ್ವಿಯಾಗಿದೆ.

ಮತ್ತೆ ಚಿರತೆ ಮರಿಗಳ ಸಂಚಾರ
ಗ್ರಾ.ಪಂ.ಮಾಲಾಡಿ, ಸುಳಿಗುಂಡಿ ಹಾಗೂ ಅಸೋಡು ಪರಿಸರ ದಲ್ಲಿ ಮತ್ತೂಮ್ಮೆ ಚಿರತೆ ಸಂಚರಿಸುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗಿವೆ. ಮೂರು ಕರು ಸೇರಿದಂತೆ ಪರಿಸರದಲ್ಲಿರುವ ನಾಯಿ ಮರಿಗಳ ಮೇಲೆ ದಾಳಿ ನಡೆಸಿದ್ದು ಪ್ರಸ್ತುತ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ವಲಯ ಸಂರಕ್ಷಣಾಧಿಕಾರಿ ಕಮಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್‌, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್‌, ಉಪ ವಲಯ ಅರಣ್ಯಾಧಿಕಾರಿ ಉದಯ ಬಿ., ಗ್ರಾ.ಪಂ.ಅಧ್ಯಕ್ಷ ಶೇಖರ್‌ ಕಾಂಚನ್‌ ಕೊಮೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಪ್ರಶಾಂತ್‌ ತೋಳಾರ್‌,
ಗ್ರಾ.ಪಂ. ಸದಸ್ಯರಾದ ವಿಜಯ ಭಂಡಾರಿ, ಸತೀಶ್‌ ದೇವಾಡಿಗ, ಲಕ್ಷ್ಮಣ ಪೂಜಾರಿ, ಶರತ್‌ ಮಾಲಾಡಿ, ಅರಣ್ಯ ಸಿಬಂದಿಗಳಾದ ವಿ. ಮಂಜು, ಮಾಲತಿ, ಸೋಮಶೇಖರ್‌ ಹಾಗೂ ಅಶೋಕ್‌, ಸತೀಶ್‌ ಕುಮಾರ್‌ ತೆಕ್ಕಟ್ಟೆ , ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next