ಮುಂಬಯಿ: ಮಲಾಡ್ ಪೂರ್ವದ ಕುರಾರ್ ವಿಲೇಜ್‌ನ ಲಕ್ಷ್ಮಣ್ ನಗರದಲ್ಲಿರುವ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಶ್ರೀ ಶನಿ ಮಹಾತ್ಮಾ ಚಾರಿಟೆಬಲ್ ಸೊಸೈಟಿಯ ಆಶ್ರಯದಲ್ಲಿ ಮಲಾಡ್ ಪರಿಸರದ ಸುಮಾರು 800 ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಪ್ರಸಿದ್ಧ ನ್ಯಾಯವಾದಿ ಎಫ್. ಆರ್. ಮಿಶ್ರಾ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಮನ್ ಜ್ಯುವೆಲ್ಲರ್ ಮಾಲಕ ನರೇಶ್ ಪಾಲ್ಗೊಂಡಿದ್ದರು. ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಸಮಿತಿ ಮತ್ತು ಸೊಸೈಟಿ ನಡೆಸುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳಿಗೆ ಶುಭ ಹಾರೈಸಿದರು.
ಸೊಸೈಟಿಯ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ ಅವರು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಮಾಜಿ ಅಧ್ಯಕ್ಷ ಬಿ. ಎನ್. ಚಂದನ್, ಶ್ರೀಧರ ಆರ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಹರೀಶ್ ಜೆ. ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಎನ್. ಕೋಟ್ಯಾನ್, ಸೊಸೈಟಿಯ ಕೋಶಾಧಿಕಾರಿ ಮಹೇಶ್ ಜೆ. ಸಾಲ್ಯಾನ್, ಸದಾನಂದ ನಾಯಕ್ ಹಾಗೂ ನಿತ್ಯಾನಂದ ಕೋಟ್ಯಾನ್, ರವಿ ಎನ್. ಶೆಟ್ಟಿ, ದಿನೇಶ್ ಕುಂಬ್ಳೆ ಮೊದಲಾದವರು ಪಾಲ್ಗೊಂಡಿದ್ದರು.
ಶ್ರೀ ಶನಿ ಮಹಾತ್ಮಾ ಚಾರಿ ಟೆಬಲ್ ಸೊಸೈಟಿಯು ಕಳೆದ 22 ವರ್ಷಗಳಿಂದ ಮಲಾಡ್ ಪರಿಸರದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುತ್ತಿದ್ದು, ಹಲವು ವರ್ಷಗಳಿಂದ ಹೊಟೇಲ್ ಉದ್ಯಮಿ, ದಿವ್ಯಾಸಾಗರ್ ಹೊಟೇಲ್‌ನ ಸಿಎಂಡಿ ಮುದ್ರಾಡಿ ದಿವಾಕರ ಶೆಟ್ಟಿ ಅವರ ಸಹಕಾರದಿಂದ ಶಾಲಾ ಪರಿಕರಗಳನ್ನು ವಿತರಿಸಲಾಗುತ್ತಿದೆ.
ಪ್ರಾರಂಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಇವರು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪರಿಸರದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.