Advertisement

ಮಲಾಡ್‌ ಕನ್ನಡ ಸಂಘ:ವಿಧವಾ ವೇತನ,ವಿದ್ಯಾರ್ಥಿ ವೇತನ ವಿತರಣೆ

03:34 PM Aug 09, 2017 | |

ಮುಂಬಯಿ:ಮಲಾಡ್‌ ಪರಿಸರದ ಕನ್ನಡಿಗರ ಹಿತಾಸಕ್ತಿಗಾಗಿ ದುಡಿಯುತ್ತಿರುವ ಮಲಾಡ್‌ ಕನ್ನಡ ಸಂಘವು ಮಕ್ಕಳಲ್ಲಿ ಭಾಷೆ, ಸಂಸ್ಕೃತಿಯ ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಕನ್ನಡ ಕಲಿಕಾ ತರಗತಿಯನ್ನು ಪ್ರಾರಂಭಿಸಿದ್ದು, ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮರಾಠಿ ಮಣ್ಣಿನಲ್ಲಿ  ಮಲಾಡ್‌ ಕನ್ನಡ ಸಂಘದ ಇದೊಂದು ಮಹತ್ವದ ಸಾಧನೆಯಾಗಿದೆ. ನಾಡಿನ ಆಚಾರ, ವಿಚಾರ, ಸಂಸ್ಕೃತಿ-ಸಂಸ್ಕಾರಗಳನ್ನು ಮಕ್ಕಳಲ್ಲಿ ಬೆಳೆಯುವಂತೆ ಮಾಡುವ ಕೈಂಕರ್ಯವನ್ನು ಈ ಸಂಘದಿಂದ ಮಾಡಲಾಗುತ್ತಿದೆ. ಇದರಲ್ಲಿ ಮಕ್ಕಳ ಪಾಲಕರ ಕೊಡುಗೆ ಮೆಚ್ಚುವಂಥದ್ದಾಗಿದೆ ಎಂದು ಮಲಾಡ್‌ ಕನ್ನಡ ಸಂಘದ ಅಧ್ಯಕ್ಷ   ಹರೀಶ್‌ ಎನ್‌. ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಆ. 6ರಂದು ಮಾರ್ವೇರೋಡ್‌ನ‌ ದೀಪಮಾಲಾ  ಕೋ ಆಪರೇಟಿವ್‌ ಸೊಸೈಟಿಯ ಸಭಾಂಗಣದಲ್ಲಿ ನಡೆದ ಮಲಾಡ್‌ ಕನ್ನಡ ಸಂಘದ 16ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಲಾಡ್‌ ಕನ್ನಡ ಸಂಘದ ಗುಣಮಟ್ಟದ ನಾಡು-ನುಡಿಯ ಕಾರ್ಯವೈಖರಿಯ ಯಶಸ್ಸಿಗೆ ನಿಸ್ವಾರ್ಥ ಸೇವೆಯ ಸದಸ್ಯರು ಹಾಗೂ ಶಿಸ್ತಿನ ಕಾರ್ಯಕ್ರಮಗಳೇ  ಸಾಕ್ಷಿಯಾಗಿವೆ. ಸಂಘದಲ್ಲಿ ಹಗಲಿರುಳು ದುಡಿಯುತ್ತಿರುವ ಮಹಿಳಾ ವಿಭಾಗ, ವೈಶಿಷ್ಟéಪೂರ್ಣ ಕಾರ್ಯಕ್ರಮಗಳ ಮೂಲಕ ಸಂಘದ ಬೆಳವಣಿಗೆಯಲ್ಲಿ ತೊಡಗಿಕೊಂಡಿರುವ ಯುವ ವಿಭಾಗದ ಸೇವೆಯನ್ನು ಮರೆಯುವಂತಿಲ್ಲ. ಸಂಘವು ಅಭಿವೃದ್ಧಿಯತ್ತ ಸಾಗಲು ಆರ್ಥಿಕವಾಗಿ ಬಲಾಡ್ಯ ಹೊಂದಲು ದಾನಿಗಳು ನೀಡುವ ಸಹಕಾರವು ಸಂಘದ ಅಭಿವೃದ್ಧಿಗೆ ಪೂರಕ ವಾಗಿದೆ. ಶಿಕ್ಷಣದಿಂದ ಮಕ್ಕಳು ಎಂದಿಗೂ ವಂಚಿತರಾಗಬಾರದು ಎಂಬ ಚಿಂತನೆಯ ಮೂಲಕ ಪ್ರತಿ ವರ್ಷ ವಿದ್ಯಾರ್ಥಿ ಗಳಿಗೆ ಧನ ಸಹಾಯ ಹಾಗೂ ಪ್ರತಿಭಾನ್ವೇಷಣೆ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಕಾರ್ಯಕ್ರಮ ಗಳಿಗೆ ಮಹತ್ವ ನೀಡುವ ಉದ್ದೇಶ
ದಿಂದ ವಾರ್ಷಿಕೋತ್ಸವದಂತಹ ದುಂದುವೆಚ್ಚ ಗಳಿಗೆ ಕಡಿವಾಣ ಹಾಕಲಾಗಿದೆ. ಪ್ರಾಮಾಣಿಕ, ನಿಸ್ವಾರ್ಥವಾಗಿ ಸೇವೆಗೈದ ಆತ್ಮತೃಪ್ತಿ ಈ ಸಂಸ್ಥೆಗೆ ದೊರಕಿದೆ. ಮಲಾಡ್‌ ಪರಿಸರದಲ್ಲಿ ಇನ್ನೂ ಹೆಚ್ಚಿನ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮಲಾಡ್‌ ಕನ್ನಡ ಸಂಘದ ಕೀರ್ತಿ ಪತಾಕೆ ಎತ್ತರಕ್ಕೆ ಏರುವಂತಾಗಲಿ ಎಂದರು.ಸುಜಾತಾ ತುಳಸಿದಾಸ್‌ ಅಮೀನ್‌ ಪ್ರಾರ್ಥನೆಗೈದರು. 

ಸಂಸ್ಥೆಯ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ಶಂಕರ ಡಿ. ಪೂಜಾರಿ ಕನ್ನಡ ಸಂಘವೊಂದು ಪ್ರಸಿದ್ದಿ ಪಡೆಯಲು ಬರೆ ಮಾತಿನಿಂದ, ಆರ್ಥಿಕ ಬಂಡವಾಳದಿಂದ ಬೆಳೆಯಲು ಸಾಧ್ಯವಿಲ್ಲ. ಎಲ್ಲಿ ಜನ ಬೆಂಬಲದೊಂದಿಗೆ ಕಾರ್ಯಕರ್ತರ ನಿಸ್ವಾರ್ಥ ಸೇವೆ ಇರುತ್ತದೋ ಅಲ್ಲಿ ಸಂಸ್ಥೆಯು ಯಶಸ್ವಿಯಾಗಲು ಸಾಧ್ಯ ಎಂಬುದಕ್ಕೆ ನಮ್ಮ ಸಂಘ ನಿದರ್ಶನವಾಗಿದೆ ಎಂದರು. ಜತೆ ಕಾರ್ಯದರ್ಶಿ ಅನಿಲ್‌ ಎಸ್‌. ಪೂಜಾರಿ ಗತ ಸಾಲಿನ ವಾರ್ಷಿಕ
ವರದಿ ವಾಚಿಸಿದರು. ವಾರ್ಷಿಕ ಲೆಕ್ಕ ಪತ್ರಗಳನ್ನು ಸದಸ್ಯರ  ಅನು ಮೋದನೆ
ಯೊಂದಿಗೆ ಅಂಗೀಕರಿಸಲಾಯಿತು.

ನೂತನ ವರ್ಷಕ್ಕೆ ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ರಘುನಾಥ ಪೂಜಾರಿ, ಲೆಕ್ಕ ಪರಿಶೋಧಕರನ್ನಾಗಿ ಸುರೇಂದ್ರ ಶೆಟ್ಟಿ ಆ್ಯಂಡ್‌ ಕಂಪೆನಿಯನ್ನು ನೇಮಿಸಲಾಯಿತು.

ಸದಸ್ಯರ ಪರ ಮಾತನಾಡಿದ, ಅಭ್ಯುದಯ ಬ್ಯಾಂಕಿನ ಉನ್ನತಾಧಿಕಾರಿ ಪ್ರೇಮ್‌ ಸಾಲ್ಯಾನ್‌, ಸಂಘದಲ್ಲಿ ಇಂದು ಹಲವಾರು ಹೊಸಮುಖದ ಸದಸ್ಯರು ಕಾಣುವ ಮೂಲಕ ಸಂಘವು ಹೊಸ ಸದಸ್ಯರೊಂದಿಗೆ ಬೆಳೆಯುತ್ತಿದೆ. ಈ ಮೂಲಕ ಸಂಘದ ಕನಸಿನ ಹರಿಕಾರ ಹರೀಶ್‌ ಎನ್‌. ಶೆಟ್ಟಿ ಅವರ ಕೊಡುಗೆ ಪ್ರತಿಫಲಿಸುತ್ತಿದೆ. ಆರ್ಥಿಕ ಧನ ಸಹಾಯ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಪರಿಕಲ್ಪನೆಯೊಂದಿಗೆ ಒಟ್ಟಾರೆಯಾಗಿ ಇದು ಒಂದು ಯಶಸ್ವಿ ಕಾರ್ಯಕ್ರಮವಾಗಿದೆ ಎಂದರು.

Advertisement

ಹಿರಿಯ ಸದಸ್ಯರಾದ ಶ್ಯಾಮ್‌ ಶೆಟ್ಟಿ ಅವರು ಮಾತನಾಡಿ, ಸಂಘದ ಪ್ರಸಕ್ತ ಬೆಳವಣಿಗೆಯನ್ನು ಶ್ಲಾಘಿಸಿ, ಕೆಲವೊಂದು ಸಲಹೆ-ಸೂಚನೆಗಳನ್ನು ನೀಡಿದರು. ಜತೆ ಕೋಶಾಧಿಕಾರಿ ಶಂಕರ್‌ ಆರ್‌. ಶೆಟ್ಟಿ ವಿದ್ಯಾರ್ಥಿಗಳ ಹಾಗೂ ವಿಧವಾವೇತನ ಪಡೆದವರ ಹೆಸರನ್ನು ಘೋಷಿಸಿದರು. ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರಕಾಶ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತಿ ಬಾಲಚಂದ್ರ ರಾವ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್‌ ಕೆ. ಪೂಜಾರಿ ಉಪಸ್ಥಿತರಿದ್ದರು. ಉದ್ಯಮಿಗಳಾದ ದಯಾನಂದ ಶೆಟ್ಟಿ, ತಿಮ್ಮಪ್ಪ ಶೆಟ್ಟಿ, ಲಕ್ಷ್ಮೀನಾರಾಯಣ ರಾವ್‌ ಅವರನ್ನು ಗೌರವಿಸಲಾಯಿತು. ಯುವ ವಿಭಾಗದ ಕಾರ್ಯದರ್ಶಿ ಶಂಕರ್‌ ಎಚ್‌. ಪೂಜಾರಿ ವಂದಿಸಿದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.   

 ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next