Advertisement

ಮಾಕುಟ್ಟ-ಕೇರಳ ಅಂತಾರಾಜ್ಯ ಹೆದ್ದಾರಿಯಲ್ಲಿ ಆತಂಕ

11:05 PM Aug 14, 2019 | Sriram |

ಮಡಿಕೇರಿ: ಕೊಡಗಿಗೆ ಮಳೆ ಹರಿಸುವ ಮಾಕುಟ್ಟ -ಕೇರಳ ಅಂತರಾಜ್ಯ ಹೆದ್ದಾರಿಯ ಆಸು ಪಾಸಿನ ಮಳೆಕಾಡುಗಳು ಈ ಬಾರಿ ಇನ್ನಷ್ಟು ಅನಾಹುತಗಳಿಗೆ ಕಾರಣವಾಗಿದೆ. ರಸ್ತೆ ಸಂಚಾರ ನಿಷೇಧದಿಂದಾಗಿ ಮಾನವ ಹಾನಿಯ ಮತ್ತಷ್ಟು ಘಟನಾವಳಿಗಳು ತಪ್ಪಿದೆ.

Advertisement

ಮಾಕುಟ್ಟ ರಸ್ತೆಯಲ್ಲಿ ಸಿಗುವ ಹನುಮಾನ್‌ ದೇವಾಲಯ ಮುಂಭಾಗದ ರಸ್ತೆ ಸಮೀಪದ ಬೆಟ್ಟವೊಂದು ಎರಡು ದಿನಗಳ ಹಿಂದೆ ಸ್ಫೋಟಗೊಂಡು ಭಾರೀ ಬಂಡೆಕಲ್ಲುಗಳು ರಸ್ತೆ ಉದ್ದಕ್ಕೂ ಉರುಳಿವೆ. ಬೆಟ್ಟ ಕುಸಿತದ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು ಇದೀಗ ವೀರಾಜಪೇಟೆ ಲೋಕೋಪಯೋಗಿ ಇಲಾಖೆ ಜೆಸಿಬಿ ಮೂಲಕ ರಸ್ತೆ ಮೇಲೆ ಬಿದ್ದ ಮಣ್ಣು, ಬಂಡೆಯನ್ನು ತೆರವುಗೊಳಿಸಿದೆ.

ಇಷ್ಟು ಮಾತ್ರವಲ್ಲದೆ, ಕೇವಲ 4-5 ದಿನಗಳಲ್ಲಿ ಭಾರೀ ಮಳೆ ಗಾಳಿಗೆ ಮಾಕುಟ್ಟ ರಸ್ತೆಯ ಉದ್ದಕ್ಕೂ ಸುಮಾರು 25ಕ್ಕೂ ಅಧಿಕ ಮರಗಳು ಉರುಳಿವೆ. ರಸ್ತೆಯಲ್ಲಿ ವಾಹನ ಸಂಚಾರವಿದ್ದಿದ್ದರೆ ಹಲವು ಜೀವಹಾನಿಗೆ ಇದೂ ಕಾರಣವಾಗುತ್ತಿತ್ತು. ಈ ಬಾರಿ ಬ್ರಹ್ಮಗಿರಿ ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ಕೇಶವ್‌ ಅವರ ನೇತೃತ್ವದಲ್ಲಿ ಸುಮಾರು 12 ಮಂದಿ, ಮಾಕುಟ್ಟ ಮೀಸಲು ಅರಣ್ಯ ವಲಯಾರಣ್ಯಾಧಿಕಾರಿ ಸುಹಾನ ಹರೀಶ್‌ ನೇತೃತ್ವದಲ್ಲಿ 8 ಮಂದಿ ಅರಣ್ಯ ಸಿಬಂದಿಗು ರಸ್ತೆಯ ಉದ್ದಕ್ಕೂ ಬಿದ್ದಿದ್ದ ಮರಗಳನ್ನು ತೆರವು ಮಾಡಿದ್ದಾರೆ. ಆ.12 ರಂದು ಕೂಡಾ ಮಾಕುಟ್ಟ ರಸ್ತೆಯ ಮೇಲೆ ಬಿದ್ದ ಹಲವು ಸಣ್ಣ ಪುಟ್ಟ ಮರಗಳು, ಬಿದಿರು ಮೆಳೆಯನ್ನು ತೆರವುಗೊಳಿಸಲಾಗಿದೆ.

ಎರಡು ಮರಕೊಯ್ಯುವ ಯಂತ್ರ ಮಾಕುಟ್ಟ ಅರಣ್ಯ ವಲಯದ ಕಚೇರಿಯಲ್ಲಿದ್ದು ಅಂತರರಾಜ್ಯ ಹೆದ್ದಾರಿಯುದ್ದಕ್ಕೂ ಬೀಳುತ್ತಿರುವ ಮರಗಳನ್ನು ತೆರವು ಮಾಡುವ ಕಾರ್ಯಾಚರಣೆ ನಿರಂತರವಾಗಿ ನಡೆದಿದೆ. ಕಳೆದ ವರ್ಷ ಮಾಕುಟ್ಟ ಅರಣ್ಯದ ಮೇಲೆ ಸುಮಾರು 199 ಇಂಚಿಗೂ ಅಧಿಕ ಮಳೆ ದಾಖಲಾಗಿತ್ತು. ಕಳೆದ ವರ್ಷ ಆಗಸ್ಟ್‌ 10 ರವರೆಗೆ ಸುಮಾರು 83.52 ಇಂಚು ಮಳೆ ದಾಖಲಾಗಿತ್ತು. ಈ ಬಾರಿಯೂ ಮಾಕುಟ್ಟದ ಮೇಲೆ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹೆಚ್ಚು ಕಮ್ಮಿ 85 ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ಕಳೆದ ಬಾರಿಗಿಂತಲೂ ಅಧಿಕ ಮಳೆಯಾಗಿರುವುದು ಗೋಚರಿಸಿದೆ.
ಒಟ್ಟಿನಲ್ಲಿ ಕಾಕತಾಳೀಯ ಎಂಬಂತೆ ಮಾಕುಟ್ಟ ರಸ್ತೆಯ ಇಬ್ಭಾಗ ಬರೆಕುಸಿತ, ಬೆಟ್ಟಕುಸಿತ, ರಸ್ತೆ ಕುಸಿತ ಜಲಸ್ಫೋಟದ ನಂತರವೇ ಜಿಲ್ಲೆಯ ಇತರೆಡೆ ಜಲಪ್ರಳಯ ಸಂಭವಿಸುತ್ತಿರುವದು ದುರಂತ. ಕೇರಳ ಮಾದರಿಯ ರಸ್ತೆ ಇಬ್ಬದಿ ಗುಣಮಟ್ಟದ ತಡೆಗೋಡೆ ಕಾಮಗಾರಿ ಇಲ್ಲಿ ಅಗತ್ಯವಾಗಿದೆ.ಮಾಕುಟ್ಟ ವ್ಯಾಪ್ತಿಗೆ ಕೇರಳದಿಂದ ವಿದ್ಯುತ್‌ ಸರಬರಾಜಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮೂರು ದಿನ ಮಾತ್ರ ವಿದ್ಯುತ್‌ ಕಡಿತ ಉಂಟಾಗಿದೆ. ಇಂದು ವಿದ್ಯುತ್‌ ಸರಬರಾಜು ಎಂದಿನಂತೆ ಇರುವುದಾಗಿ ಮಾಕುಟ್ಟ ವ್ಯಾಪ್ತಿಯ ಬೇಟೋಳಿ ಗ್ರಾ.ಪಂ.ಸದಸ್ಯ ಉಮ್ಮರ್‌ ತಿಳಿಸಿದ್ದಾರೆ. ಜಿಲ್ಲೆಯ ನೀರು ಕೇರಳದ ತೊಟ್ಟಿಪಾಲ, ಪೆರಟ್ಟ, ವಳ್ಳಿತೋಡು ಭಾಗದಲ್ಲಿಯೂ ಹರಿಯುತ್ತಿದ್ದು ಕಳೆದ 80 ವರ್ಷದ ಅವಧಿಯಲ್ಲಿ ಕಂಡು ಕೇಳರಿಯದ ಪ್ರವಾಹ ಈ ಭಾಗದಲ್ಲಿಯೂ ಉಂಟಾಗಿದೆ.

ವಾಹನ ಸಾಂದ್ರತೆ
ಸಾಧಾರಣವಾಗಿ ಓಣಂ, ರಂಜಾನ್‌ ಮತ್ತು ಬಕ್ರೀದ್‌ ಸಂದರ್ಭದಲ್ಲಿ ಕೇರಳ-ಕೊಡಗು ಮಾರ್ಗದಲ್ಲಿ ಅಧಿಕ ವಾಹನ ಸಾಂದ್ರತೆ ಕಂಡು ಬರುತ್ತದೆ. ಈ ಬಾರಿ ರಸ್ತೆ ಕಾಮಗಾರಿ, ತಡೆಗೋಡೆ ಕಾಮಗಾರಿ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ನೆರೆಯ ಕೇರಳಕ್ಕೆ ಕೊಡಗಿನ ಮಾಕುಟ್ಟ ಹಾಗೂ ಮಾನಂದವಾಡಿಯ ಮಾರ್ಗದಲ್ಲಿ ಬಸ್‌ ಸಂಚಾರ ರದ್ದು ಮಾಡಲಾಗಿದೆ. ಲಘು ವಾಹನಗಳ ಓಡಾಟ ಮಾತ್ರ ಗೋಣಿಕೊಪ್ಪಲು-ಕುಟ್ಟ ನಡುವಣ ಮಾರ್ಗದಲ್ಲಿ ಕಂಡು ಬಂದಿದೆ. ಮಾಕುಟ್ಟ ರಸ್ತೆ ವರ್ಷದಿಂದ ವರ್ಷಕ್ಕೆ ಜಲಸ್ಫೋಟದಿಂದಾಗಿ ಅಪಾಯಕಾರಿಯಾಗಿ ಗೋಚರಿಸತೊಡಗಿದೆ.

Advertisement

ಇಲ್ಲಿ ಗುಣಮಟ್ಟದ ಕಾಮಗಾರಿಯ ಅಗತ್ಯವಿದೆ.ಲೋಕೋಪಯೋಗಿ ಇಲಾಖೆ ಕೈಗೊಂಡ ದುರಸ್ತಿ ಕಾಮಗಾರಿಯ ಲೋಪದಿಂದಾಗಿ ಮತ್ತೆ ಮತ್ತೆ ಅದೇ ಸ್ಥಳದಲ್ಲಿ ರಸ್ತೆ ಇಬ್ಭಾಗ ವಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next