ನರಗುಂದ: ಕೊರೊನಾ ಒಂದು, ಎರಡನೇ ಅಲೆಯಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಲಾಗಿದೆ. ಇದೀಗ ಮೂರನೇ ಅಲೆ ಕೂಡ ಪ್ರವೇಶಿಸುತ್ತಿದೆ. ಇಂತಹ ಆರ್ಥಿಕ ಹೊರೆಯ ಮಧ್ಯೆಯೂ ಸರ್ಕಾರ ಅಭಿವೃದ್ಧಿ ಕಾರ್ಯಗಳತ್ತ ದಾಪುಗಾಲಿಟ್ಟಿದೆ ಎಂದು ಲೋಕೋಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಲೋಕೋಪಯೋಗಿ ಇಲಾಖೆಯಿಂದ ಸಿಂಧನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿ 30ರ ನರಗುಂದ ಪಟ್ಟಣ ಪರಿಮಿತಿಯಲ್ಲಿ 1.5 ಕಿಮೀ ವ್ಯಾಪ್ತಿಯಲ್ಲಿ 7 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಮತ್ತು ಸಿಂಧನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿ 30ರ ಯಾವಗಲ್ಲದಿಂದ ನರಗುಂದ ಹೊರವಲಯ ಆಚಮಟ್ಟಿ ಕ್ರಾಸ್‌ವರೆಗೆ 19.94 ಕಿಮೀ ವ್ಯಾಪ್ತಿಯ 6.80 ಕೋಟಿ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಗೆ ಪಟ್ಟಣದ ಶಿವಾಜಿ ವೃತ್ತದಲ್ಲಿ ಭೂಮಿಪೂಜೆ ನೆರವೇರಿಸಿ ಸಚಿವರು ಮಾತನಾಡಿದರು.
ಹೋರಾಟ ಮಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ಸಣ್ಣ ವಯಸ್ಸಿನ ಯುವ ನಾಯಕರೊಬ್ಬರು ಪದ ಪ್ರಯೋಗ ಮಾಡಿದ್ದು ವಿಪರ್ಯಾಸ. ರಾಜಕಾರಣಿಗಳು ಶಾಶ್ವತವಲ್ಲ. ರಾಜಕಾರಣ ಶಾಶ್ವತ ಎಂಬುದನ್ನು ಅವರು ಅವಲೋಕಿಸಬೇಕಿದೆ. ಹಿರಿಯ ನಾಯಕರೊಬ್ಬರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಪ್ರಮುಖ ಲೋಕೋಪಯೋಗಿ ಇಲಾಖೆ ಸಚಿವನಾಗಿ ಒಂದು ಯೋಜನೆ ಕಾಮಗಾರಿಗೆ ಹಣ ಬಿಡುಗಡೆಯಾಗದೇ ಭೂಮಿಪೂಜೆ ಮಾಡುತ್ತೇನೆಂದು ಅವರು ತಿಳಿದಿದ್ದು ವಿಚಿತ್ರವಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ತಿರುಗೇಟು ನೀಡಿದರು.
ಸವದತ್ತಿ ರಾಜ್ಯ ಹೆದ್ದಾರಿ ಪಟ್ಟಣ ವ್ಯಾಪ್ತಿಯಲ್ಲಿ ಚಾಲನೆ ನೀಡಲಾದ ಕಾಮಗಾರಿ 6 ತಿಂಗಳೊಳಗೆ ಮುಗಿಸಿ ಉತ್ತಮ ರಸ್ತೆ ನಿರ್ಮಿಸಲಾಗುವುದು. ರಸ್ತೆಯ ಎರಡೂ ಬದಿಗೆ ಬೀದಿದೀಪ ಅಳವಡಿಸಲಾಗುತ್ತದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಗುರಪ್ಪ ಆದೆಪ್ಪನವರ, ಬಸಪ್ಪ ಸವದತ್ತಿ, ಶಿವಾನಂದ ಮುತವಾಡ, ಮಲ್ಲಪ್ಪ ಮೇಟಿ, ಪ್ರಕಾಶಗೌಡ ತಿರಕನಗೌಡ್ರ, ರಾಚನಗೌಡ ಪಾಟೀಲ, ಸಿದ್ದಪ್ಪ ಯಲಿಗಾರ, ವಸಂತ ಜೋಗಣ್ಣವರ, ಎಂ.ಎಸ್ .ಪಾಟೀಲ, ಶಿವನಗೌಡ ಹೆಬ್ಬಳ್ಳಿ ಮುಂತಾದವರು ವೇದಿಕೆಯಲ್ಲಿದ್ದದರು.
ಪಹಣಿಯಲ್ಲಿ ಇನಾಮು ರದ್ದತಿಗೆ ಕ್ರಮ: ಪಾಟೀಲ
ತಾಲೂಕಿನ ಹಿರೇಕೊಪ್ಪ, ಕುರುಗೋವಿನಕೊಪ್ಪ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 500 ಎಕರೆ ಪ್ರದೇಶದ ರೈತರ ಪಹಣಿಯಲ್ಲಿ ಮಾಲಿಕರ ಜಾಗದಲ್ಲಿ ಇನಾಮು ಎಂದು ನಮೂದಾಗಿದೆ. ಇದರಿಂದ ರೈತರ ಮಾಲಿಕತ್ವ ಇಲ್ಲವಾಗಿದೆ. ಈ ಬಗ್ಗೆ ಕಂದಾಯ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದಾಗ ಸಂಪುಟ ಸಭೆಯಲ್ಲಿ ಅನುಮತಿ ಪಡೆಯಲಾಗಿದೆ. ಇನ್ನು ಒಂದು ವರ್ಷದೊಳಗೆ ಸಂಬಂಧಿ ಸಿದ ರೈತರು ಅರ್ಜಿ ಸಲ್ಲಿಸಿ ಮಾಲಿಕರ ಕಾಲಂನಲ್ಲಿ ತಮ್ಮ
ಹೆಸರು ನಮೂದಿಸಿಕೊಳ್ಳಬೇಕು. ಇನ್ನುಳಿದಂತೆ ಕೆಲವು ರೈತರ ಪಹಣಿಯಲ್ಲಿ ಸರಕಾರ ಎಂದು ನಮೂದಾಗಿದ್ದನ್ನು ತೆಗೆಯುವ ಪ್ರಯತ್ನ ನಡೆಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.