Advertisement

ಅತ್ಯಾಧುನಿಕ ಸ್ವದೇಶಿ ಹೆಡ್‌ಫೋನ್‌ ತಯಾರಿಕೆಗೆ ವಾಣಿಜ್ಯ ನಗರಿ ವೇದಿಕೆ

01:13 PM Aug 01, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ವಿಶ್ವದರ್ಜೆಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಹಾಗೂ ಸಂಗೀತದ ಸ್ಪಷ್ಟ ಅನುಭವ ನೀಡುವ ಹೆಡ್‌ಫೋನ್‌ ತಯಾರಿಕೆಗೆ ಹುಬ್ಬಳ್ಳಿ ವೇದಿಕೆ ಆಗುತ್ತಿದೆ. ಅಂದ ಹಾಗೆ ಇದು ಮೊದಲ ಸ್ವದೇಶಿ ಹೆಡ್‌ಫೋನ್‌ ಆಡಿಯೋ ಸಾರ್ಟ್‌ಅಪ್‌ ಆಗಿದೆ.

ವಿಶ್ವಮಟ್ಟಕ್ಕೆ ದೇಸಿ ಉತ್ಪನ್ನವೊಂದನ್ನು ನೀಡುವುದಕ್ಕೆ ಯುವ ಉದ್ಯಮಿಗಳಿಬ್ಬರು ಮಹತ್ವದ ಹೆಜ್ಜೆ ಇರಿಸಿದ್ದಾರೆ. ದೇಶಪಾಂಡೆ ಸ್ಟಾರ್ಟ್‌ ಅಪ್ಸ್‌, ಕೇಂದ್ರ ಸರ್ಕಾರದ ಭಾರತೀಯ ವಿನ್ಯಾಸ ಸಂಸ್ಥೆ ಮತ್ತು ಡಿಎಸ್‌ಟಿ ನೆರವು, ಪ್ರೋತ್ಸಾಹದೊಂದಿಗೆ ಹೆಡ್‌ಫೋನ್‌ ತಯಾರಿಕೆಗೆ ನವೋದ್ಯಮಿಗಳಾದ ನವಜಿತ್‌ ಕರ್ಕೆರಾ ಮತ್ತು ಜಗತ್‌ ಬಿಡ್ಡಪ್ಪ ಮುಂದಾಗಿದ್ದಾರೆ. ಸಂಗೀತ ಪ್ರಿಯರಿಗೆ, ಆಡಿಯೋ ಮೂಲಕ ಕ್ರೀಡೆಗಳು, ಮನರಂಜನೆ ಆಲಿಸುವವರು ಉತ್ತಮ ಗುಣಮಟ್ಟದ ಹೆಡ್‌ ಫೋನ್‌ಗಳಿಗೆ ಮೊರೆ ಹೊಗುತ್ತಾರೆ. ಅತ್ಯುತ್ತಮ ತಂತ್ರಜ್ಞಾನದ ಹೆಡ್‌ಫೋನ್‌ ಬಯಸುತ್ತಾರೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡೇ ರ್ಯಾಪರ್‌ ನವೋದ್ಯಮ ಕಂಪನಿ ಸ್ವದೇಸಿ ಉತ್ಪನ್ನವನ್ನು ವಿಶ್ವದ ಮಾರುಕಟ್ಟೆಗೆ ನೀಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಯತ್ನ, ಪ್ರಯೋಗಗಳು ನಡೆದಿವೆ. ಎಲ್ಲವೂ ಅಂದುಕೊಂಡಂತೆಯಾದರೆ 2022ರ ಫೆಬ್ರವರಿ ಇಲ್ಲವೆ ಮಾರ್ಚ್‌ ವೇಳೆಗೆ ವಿಶ್ವದ ಸಂಗೀತ ಪ್ರಿಯರ ಕೈಗೆ ಭಾರತದಲ್ಲಿ ಉತ್ಪಾದಿತ ವಿಶ್ವದರ್ಜೆಯ ಹೆಡ್‌ಫೋನ್‌ ಕಿವಿಗಳಿಗೆ ಇಂಪು ನೀಡಲಿದೆ.

800 ಮಿಲಿಯನ್‌ ಡಾಲರ್‌ ವಹಿವಾಟು

ಹೆಡ್‌ ಮತ್ತು ಇಯರ್‌ಫೋನ್‌ ಜಾಗತಿಕವಾಗಿ 60 ಬಿಲಿಯನ್‌ ಡಾಲರ್‌ ವಹಿವಾಟು ಹೊಂದಿದೆ ಎಂದು ಅಂದಾಜಿಸಲಾಗುತ್ತಿದೆ. ಭಾರತದಲ್ಲಿ ಹೆಡ್‌ ಮತ್ತು ಇಯರ್‌ಫೋನ್‌ ಅಂದಾಜು 800 ಮಿಲಿಯನ್‌ ಡಾಲರ್‌ ವಹಿವಾಟು ನಡೆಯುತ್ತದೆ. 8,000-10,000 ಸಾವಿರ ರೂ. ಬೆಲೆಯ ಹೆಡ್‌ಫೋನ್‌ಗಳ ವಹಿವಾಟು ಅಂದಾಜು 400 ಕೋಟಿ ರೂ. ಇದ್ದರೆ, ಜಾಗತಿಕವಾಗಿ 10 ಬಿಲಿಯನ್‌ ಡಾಲರ್‌ ವಹಿವಾಟು ನಡೆಯುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬ್ರಾಂಡೆಂಡ್‌ ಹೆಡ್‌ಫೋನ್‌ಗಳು ಬಹುತೇಕ ವಿದೇಶದ್ದಾಗಿವೆ. ದೇಶದಲ್ಲಿ ಬಳಕೆಯಾಗುವ ಹೆಡ್‌ಫೋನ್‌ಗಳಲ್ಲಿ ಶೇ.90 ಆಮದಾಗುತ್ತಿದೆಯಂತೆ. ಇದನ್ನು ಮನಗಂಡೇ ನವೋದ್ಯಮಿಗಳಾದ ನವಜಿತ್‌ ಕರ್ಕೆರಾ ಮತ್ತು ಜಗತ್‌ ಬಿಡ್ಡಪ್ಪ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಹೆಡ್‌ಫೋನ್‌ ವಿನ್ಯಾಸ ಹಾಗೂ ಉತ್ಪಾದನೆ ಕುರಿತು ಪೇಟೆಂಟ್‌ ಪಡೆದಿದ್ದಾರೆ.

Advertisement

ಹೋಮ್‌ ಥೇಟರ್‌ ಅನುಭವ  

ಉತ್ಕೃಷ್ಟ ಗುಣಮಟ್ಟದ ಸ್ಪೀಕರ್‌, ಆತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೆಡ್‌ಫೋನ್‌ ಉತ್ಪಾದನೆ ಉದ್ಯಮ ಆರಂಭಿಸಿದ್ದಾರೆ. ಸಂಗೀತ, ಹಾಡು, ಕ್ರೀಡೆ ಇನ್ನಿತರ ಆಡಿಯೋ ವಿಶೇಷವಾಗಿ ಹೋಮ್‌ ಥೇಟರ್‌ನಲ್ಲಿ ಮೂಡಿಬರುವ ರೀತಿಯಲ್ಲಿ ಕೇಳುಗರು ಅನುಭವಿಸುವಂತಿರಬೇಕು ಎಂಬ ಉದ್ದೇಶದೊಂದಿಗೆ ಹೆಡ್‌ಫೋನ್‌ ವಿನ್ಯಾಸಗೊಳಿಸ ಲಾಗುತ್ತಿದೆ.

ಇಯರ್‌ಫೋನ್‌ ಉತ್ಪಾದನೆಗೂ ಚಿಂತನೆ 

ಮೊದಲ ಹಂತದಲ್ಲಿ ಸುಮಾರು 4,000-5,000 ಹೆಡ್‌ಫೋನ್‌ಗಳನ್ನು ಉತ್ಪಾದಿಸಲು ನಿರ್ಧರಿಸಲಾಗಿದೆ. ಹೆಡ್‌ಫೋನ್‌ ಉತ್ಪಾದನೆ, ಮಾರುಕಟ್ಟೆ ಪ್ರವೇಶದ ನಂತರದಲ್ಲಿ ಇಯರ್‌ ಫೋನ್‌ಗಳ ನಿರ್ಮಾಣಕ್ಕೂ ಕಂಪನಿ ಚಿಂತನೆ ನಡೆಸಿದೆ. ಈಗಾಗಲೇ ನಾಲ್ಕೈದು ಜನರಿಗೆ ಉದ್ಯೋಗ ನೀಡಲಾಗಿದ್ದು, ಉತ್ಪಾದನೆ ಆರಂಭದಲ್ಲಿ ಏಳೆಂಟು ಜನರಿಗೆ ಉದ್ಯೋಗ ನೀಡುವ ಚಿಂತನೆ ಹೊಂದಲಾಗಿದೆ.

ಯುರೋಪ್‌- ಯುಎಸ್‌ನಲ್ಲೂ ಬಿಡುಗಡೆಗೆ ಯತ್ನ

ಯುರೋಪ್‌ ಹಾಗೂ ಅಮೆರಿಕಾದಲ್ಲಿಯೂ ಹೆಡ್‌ಫೋನ್‌ ಬಿಡುಗಡೆಗೆ ಯೋಜಿಸಲಾಗಿದ್ದು, ಅಮೆರಿಕಾದಲ್ಲಿ ವಿತರಣಾ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್‌-ಅಕ್ಟೋಬರ್‌ ವೇಳೆಗೆ ಹೆಡ್‌ಫೋನ್‌ ಗಳ ಉತ್ಪಾದನೆ ಸಿದ್ಧಗೊಳ್ಳಲಿದೆ. 2022ರ ಫೆಬ್ರವರಿ-ಮಾರ್ಚ್‌ ವೇಳೆಗೆ ಉತ್ಪನ್ನ ಗ್ರಾಹಕರಿಗೆ ತಲುಪಿಸುವ ಯತ್ನಕ್ಕೆ ಕಂಪನಿ ಮುಂದಾಗಿದೆ. ಬೇಸಿಕ್‌ ಮಾಡೆಲ್‌ 11 ರಿಂದ 13 ಸಾವಿರ ರೂ.ಗೆ ನೀಡಲು ಉದ್ದೇಶಿಸಲಾಗಿದೆ. ಹೆಡ್‌ಫೋನ್‌ಗೆ ಎರಡು ವರ್ಷಗಳವರೆಗೆ ದುರಸ್ತಿ, ತಾಂತ್ರಿಕ ತೊಂದರೆ ಕುರಿತಾಗಿ ಆನ್‌ಲೈನ್‌ ಸೇವೆ ನೀಡಲಾಗುತ್ತದೆ. ಒಂದು ವೇಳೆ ಉತ್ಪಾದನೆಯಲ್ಲಿ ದೋಷ ಇದ್ದರೆ ಹೊಸ ಉತ್ಪನ್ನ ನೀಡಲಾಗುತ್ತದೆ.

ಹುಬ್ಬಳ್ಳಿಯಲ್ಲೇ ಟೆಸ್ಟಿಂಗ್‌- ಪ್ಯಾಕಿಂಗ್‌ 

ಸಂಗೀತದಲ್ಲಿ ಮೂಡಿಬರುವ ವಿವಿಧ ವಾದ್ಯಗಳು, ಡ್ರಮ್ಸ್‌ ಶಬ್ದ ಸ್ಪಷ್ಟ ಹಾಗೂ ಇಂಪಾದ ರೀತಿಯಲ್ಲಿ ಕೇಳುಗರಲ್ಲಿ ತನ್ಮಯತೆ ಮೂಡಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಹೆಡ್‌ಫೋನ್‌ ತಯಾರಿಕೆ ಗುರಿಯನ್ನು ಕಂಪನಿ ಹೊಂದಿದೆ. ಹೆಡ್‌ಫೋನ್‌ಗೆ ಅಗತ್ಯವಾದ ಎಲೆಕ್ಟ್ರಾನಿಕ್‌ ಜೋಡಣೆಯನ್ನು ಬೆಂಗಳೂರಿನಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಉಳಿದಂತೆ ಹೆಡ್‌ಫೋನ್‌ ತಯಾರಿಕೆಗೆ ಅಸೆಂಬ್ಲಿ, ಟೆಸ್ಟಿಂಗ್‌ ಹಾಗೂ ಪ್ಯಾಕಿಂಗ್‌ ಅನ್ನು ಹುಬ್ಬಳ್ಳಿಯಲ್ಲಿಯೇ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಹುಬ್ಬಳ್ಳಿಯ ದೇಶಪಾಂಡೆ ಸಾರ್ಟ್‌ ಅಪ್ಸ್‌ನಲ್ಲಿ ಎಸ್‌ ಎನ್‌ಜಿ ಲೈನ್‌ ಅಳವಡಿಕೆ, ಇರುವ ಯಂತ್ರೋಪಕರಣಗಳಲ್ಲದೆ ವಿಶೇಷವಾಗಿ ಕೆಲವೊಂದು ಯಂತ್ರೋಪಕರಣಗಳನ್ನು ಅಳವಡಿ ಸಲಾಗಿದೆ. ಆರ್‌ ಆ್ಯಂಡ್‌ ಡಿ ರೂಪಿಸಲಾಗಿದೆ.

ನಾನು ಮಸ್ಕತ್‌ನಲ್ಲಿ ಜನಿಸಿದ್ದು, ಭಾರತಕ್ಕೆ ಬಂದು ಇಲ್ಲಿಯೇ ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿದೆ. ಹೋಮ್‌ ಥೇಟರ್‌ ಸಿಸ್ಟಮ್‌ ಬಗ್ಗೆ ಸಣ್ಣವನಿದ್ದಾಗಿನಿಂದಲೂ ಆಸಕ್ತನಾಗಿದ್ದೆ. ಎಂಜಿನಿಯರಿಂಗ್‌ ಕಲಿಯುವಾಗ ಹೆಡ್‌ಫೋನ್‌ ತೆಗೆದುಕೊಂಡಿದ್ದೆ. ಆದರೆ, ಅದು ತೃಪ್ತಿ ತರುವಂತೆ ಇರಲಿಲ್ಲ. ಎಂಜಿನಿಯರಿಂಗ್‌ ಇದ್ದಾಗಲೇ ಜನರ ಸುರಕ್ಷತೆ ದೃಷ್ಟಿಯಿಂದ ಸ್ಮಾರ್ಟ್‌ ಹೆಲ್ಮೆಟ್‌ ತಯಾರಿಸಿದ್ದೆವು. ಅದರ ಸಂಶೋಧನೆಯಲ್ಲಿದ್ದಾಗಲೇ ಹೆಡ್‌ಫೋನ್‌ ಚಿಂತನೆ ಗರಿಗೆದರಿತ್ತು. ವಿಶ್ವದರ್ಜೆಯ, ಕೇಳುಗರಿಗೆ ತೃಪ್ತಿ-ಆನಂದ ನೀಡುವ ಹೆಡ್‌ಫೋನ್‌ ನೀಡಬೇಕೆಂಬ ಉದ್ದೇಶದೊಂದಿಗೆ ಆರಂಭಿಸಿದ ಪಯಣ ಇದೀಗ ವಿಶ್ವವ್ಯಾಪಿ ಹಂಚಿಕೆಯ ಉತ್ಪಾದನೆಯತ್ತ ಸಾಗುತ್ತಿದೆ. ಯಶಸ್ಸಿನ ನಿರೀಕ್ಷೆಯಲ್ಲಿದ್ದೇವೆ.

ನವಜಿತ್‌ ಕರ್ಕೆರಾ, ನವೋದ್ಯಮಿ 

Advertisement

Udayavani is now on Telegram. Click here to join our channel and stay updated with the latest news.

Next