ಅಂಕೋಲಾ: ದಿಪಾವಳಿ ಬಂತೆಂದರೆ ಹಿಂದೆಲ್ಲಾ ಬಿದಿರು ಕಡ್ಡಿಗಳಿಂದ ಮಾಡಿದ ಆಕಾಶ ಬುಟ್ಟಿಗಳನ್ನು ಮನೆಯೆದುರು ಕಾಣುತ್ತಿದ್ದೆವು. ಆದರೆ ಕಳೆದ 20 ವರ್ಷಗಳಿಂದ ಚೀನಾದ ಆಕಾಶ ಬುಟ್ಟಿಗಳೇ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ.
ದೇಶಿ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಟ್ಟಣದ ಕೆಸಿ ರಸ್ತೆಯಲ್ಲಿರುವ ಆದಿಶೇಷ ದ್ವಿಚಕ್ರ ವಾಹನ ರಿಪೇರಿ ಮಳಿಗೆಯ ರಾಜೇಶ ಅವರು ದೀಪಾವಳಿಗೆ ದೇಶಿ ಆಕಾಶಬುಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಮನೆ ಮುಂದೆ ಬಿದಿರಿನ ಕಡ್ಡಿಗಳಿಂದ ಮಾಡಿದ ಆಕಾಶ ಬುಟ್ಟಿಗಳು ದುಷ್ಟಶಕ್ತಿಗಳನ್ನು ಮನೆಯೊಳಗೆ ಬಾರದಂತೆ ತಡೆದರೆ, ಅದರೊಳಗೆ ಬೆಳಕು ಐಶ್ವರ್ಯದ ಲಕ್ಷ್ಮೀಯನ್ನು ಮನೆಯೊಳಗೆ ಸ್ವಾಗತಿಸುತ್ತದೆ ಎಂಬ ಪ್ರತೀಕವಿದೆ.
ಇಂತಹ ಆಕಾಶ ಗೂಡು ಪ್ರತಿಯೊಬ್ಬರು ಬಳಕೆಗೆ ಬರುವಂತೆ ಮಾಡಲು ಕಳೆದ ಹಲವಾರು ವರ್ಷಗಳಿಂದ ದ್ವಿಚಕ್ರ ವಾಹನ ದುರಸ್ತಿ ಮಳಿಗೆ ಇಟ್ಟುಕೊಂಡಿರುವ ರಾಜೇಶ ತನ್ನ ಹವ್ಯಾಸಿಯಾಗಿ ಬಿದಿರಿನ ಆಕಾಶಗೂಡು ತಯಾರಿಸುವ ಕಾರ್ಯ ಮಾಡಿ ತನ್ನ ಸ್ನೇಹಿತರಿಗೆ ಕೊಡುತ್ತಿದ್ದಾರೆ. ಬಿದಿರಿಗೆ ಗೋಂದು, ದಾರವನ್ನು ಪೋಣಿಸಿ ಆಕಾರವನ್ನಿತ್ತು ಅದಕ್ಕೆ ಬಣ್ಣದ ಹಾಳೆಗಳಿಂದ ಅಂದವನ್ನು ನೀಡುತ್ತಾರೆ. ಈ ಬಿದಿರಿನ ಆಕಾಶ ಗೂಡು ತಯಾರಿಸಲು ಮೂರು ತಾಸು ಸಮಯ ಹಿಡಿಯುತ್ತದೆ. ದಿಪಾವಳಿ ಸಮೀಪಿಸಿದಂತೆ ರಾಜೇಶ ಬೈಕ್ ರಿಪೇರಿ ನಡುವೆ ಆಕಾಶ ಗೂಡು ತಯಾರಿಸುತ್ತಿದ್ದಾರೆ.
ಹೀಗೆ ತಯಾರಿಸಿದ ಆಕಾಶ ಗೂಡನ್ನು ಮಾರಾಟ ಮಾಡದೆ ತನ್ನ ಸ್ನೇಹಿತರಿಗೆ ನೀಡಿದ್ದಾರೆ. ಈಗಾಗಲೆ 10ಕ್ಕೂ ಹೆಚ್ಚು ಆಕಾಶ ಗೂಡು ತಯಾರಿಸಿದ್ದಾರೆ.
ನಾನು ಗ್ಯಾರೇಜ್ ಕೆಲಸದ ಬಿಡುವಿನ ಸಮಯವನ್ನು ಬಿದಿರಿನಿಂದ ತಯಾರಿಸುವ ಆಕಾ ಬುಟ್ಟಿ ತಯಾರಿಕೆಗೆ ಮಿಸಲಿಡುತ್ತೇನೆ. ನಮ್ಮ ದೇಶಿಯ ವಸ್ತುಗಳನ್ನು ನಾವು ಬಳಕೆಗೆ ಅನುವು ಮಾಡಿಕೊಡಬೇಕು. ನಾನು ವ್ಯಾಪಾರಕ್ಕಾಗಿ ಮಾಡುವುದಿಲ್ಲ. ಮುಂದಿನ ದಿನದಲ್ಲಿ ಇಂತಹ ಗೂಡು ಮಾಡುವವರು ಮುಂದೆ ಬಂದು ದೇಶಿ ಉತ್ಪನ್ನ ತಯಾರಿಕೆಯಲ್ಲಿ ಕೈಜೊಡಿಸಿದರೆ ಹಲವಾರು ಜನರಿಗೆ ಉದ್ಯೋಗ ನೀಡಿದಂತಾಗುತ್ತದೆ. –
ರಾಜೇಶ, ಆದಿಶೇಷ ದ್ವಿಚಕ್ರ ವಾಹನ ರಿಪೇರಿ ಮಳಿಗೆ ಮಾಲಕ
–ಅರುಣ ಶೆಟ್ಟಿ