Advertisement
ಪಪಂ ವ್ಯಾಪ್ತಿಯ ಪ್ರಮುಖ ವಾಣಿಜ್ಯ ಸ್ಥಳಗಳು ಹಾಗೂ ಅನೇಕ ವಾರ್ಡ್‌ಗಳಲ್ಲಿರುವ ಉದ್ಯಾನವನ ಸಿ.ಎ ನಿವೇಶನಗಳ ಕಬಳಿಕೆ ಮತ್ತು ಒತ್ತುವರಿಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿದ್ದು, ಇದಕ್ಕೆ ಪುಷ್ಟಿಯಂತೆ 1976-77 ರಲ್ಲಿ ಕೊಳಚೆ ನಿರ್ಮೂಲನ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀಕಂಠಯ್ಯನವರು ಪಟ್ಟಣದಲ್ಲಿ ವಾಸಕ್ಕೂ ಸ್ಥಳವಿಲ್ಲದ ಪರಿಸ್ಥಿತಿಯಲ್ಲಿದ್ದ ಜನರ ಸ್ಥಿತಿಯನ್ನ ಅವಲೋಕಿಸಿ ಅಂದು 13 ಎಕರೆ ಪ್ರದೇಶವನ್ನ ಬಡಕುಟುಂಬಗಳಿಗೆ ನಿವೇಶನ ನಿರ್ಮಿಸಲು ಮೀಸಲಿಟ್ಟಿದ್ದರು. ಆದರೆ, ಈ ನಿವೇಶನಗಳು 1979 ರಿಂದ 1989 ರವರೆಗೂ ಹಂಚಿಕೆ ಕಾರ್ಯ ನಡೆಯುತ್ತಲೇ ಬರುತ್ತಿತ್ತು. ಈ ಸ್ಥಳದಲ್ಲಿ ಬಹುತೇಕ 285ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಲಾಯಿತು.
Related Articles
Advertisement
ಪ್ರಭಾವಿಗಳ ಕೈವಶವಾಗಿರುವ ಸ್ಥಳಗಳು: ಬಹುತೇಕ ಪ್ರಮುಖ ರಸ್ತೆಗಳಾದ ಹಾಸನ ರಸ್ತೆಯಲ್ಲಿ ಈಗಾಗಲೇ ಹಿಂದಿನ ಬಸ್ ನಿಲ್ದಾಣ, ಐತಿಹಾಸಿಕ ಕೊಳವೆ ಭಾವಿಗಳ ಸ್ಥಳಗಳಲ್ಲಿ ಈಗಾಗಲೇ ಪ್ರಭಾವಿಗಳು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಾರ್ವಜನಿಕರ ಆಸ್ತಿಯನ್ನು ಕಾಪಾಡಬೇಕಾದ ಅಧಿಕಾರಿಗಳೇ ಹಣವಂತರೊಂದಿಗೆ ಕೈಜೋಡಿಸಿರುವುದು ದುಸ್ಥಿತಿಯಾಗಿದೆ.
ಐತಿಹಾಸಿಕ ನೆಲಬಾವಿ ಮುಚ್ಚಿ ಅಂಗಡಿ ನಿರ್ಮಾಣ: ಐತಿಹಾಸಿಕ ಪಾಳೇಗಾರ ಕಾಲದಲ್ಲಿ ಪಟ್ಟಣದ ಜನತೆಗೆ ಕುಡಿವ ನೀರಿಗೋಸ್ಕರ ತೆರೆಯಲಾಗಿದ್ದ ನೆಲಬಾವಿಗಳನ್ನು ಈಗಾಗಲೇ ಮುಚ್ಚಿ ಅ ಸ್ಥಳಗಳಲ್ಲಿ ಕೆಲ ಪ್ರಭಾವಿಗಳು ಅಂಗಡಿ ಮಳಿಗೆಗಳನ್ನ ನಿರ್ಮಿಸಿ ಕೊಂಡಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಪಪಂ ನೌಕರನಿಗೆ ಕ್ವಾರ್ಟಸ್ ಖಾತೆ: ಪಪಂ ಗೊರೂರಿನಲ್ಲಿರುವ ಪಂಪ್‌ಹೌಸಿನ ಪಕ್ಕದಲ್ಲಿ ನೌಕರರಿಗೆಂದು ನಿರ್ಮಾಣಗೊಂಡಿದ್ದ ಕ್ವಾರ್ಟಸ್‌ಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ತನ್ನ ಪತ್ನಿಯ ಹೆಸರಿಗೆ ಖಾತೆ ಮಾಡಿಸಿಕೊಂಡಿರುವುದು ಮತ್ತೂಂದು ಸಾಕ್ಷಿಯಾಗಿದೆ.
ಶಾಸಕರೇ ಸರ್ಕಾರಿ ಆಸ್ತಿ ಉಳಿಸಿ
ಶಾಸಕ ಎ.ಟಿ. ರಾಮಸ್ವಾಮಿ ರಾಜ್ಯಾದ್ಯಂತ ಭೂ ಕಬಳಿಕೆಯ ಬಗ್ಗೆ ಧ್ವನಿ ಎತ್ತಿ ಭೂ ಕಬಳಿಸಿದವರ ಪಾಲಿಗೆ ಸಿಂಹ ಸ್ವಪ್ನರಾಗಿದ್ದಾರೆ. ಇಂತಹ ಪ್ರಾಮಾಣಿಕ ಶಾಸಕರ ಕ್ಷೇತ್ರದಲ್ಲೇ ಇಂಥ ಅವ್ಯವಸ್ಥೆಗಳು ಹಾಗೂ ಪಟ್ಟಣದಲ್ಲಿರುವ ಸರ್ಕಾರಿ ಆಸ್ತಿಗಳನ್ನು ಕಬಳಿಸುತ್ತಿರುವವರ ವಿರುದ್ಧ ಹೋರಾಟಕ್ಕೆ ಮುಂದಾಗಿ ಆಸ್ತಿಗಳನ್ನು ರಕ್ಷಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ತಿಗಳೇ ಕಣ್ಮರೆಯಾಗುವುದರಲ್ಲಿ ಸಂಶಯವಿಲ್ಲ. ಆದುದರಿಂದ ಶಾಸಕರು ಇತ್ತ ಗಮನ ಹರಿಸಿ ಸಾರ್ವಜನಿಕರ ಆಸ್ತಿಯನ್ನ ರಕ್ಷಣೆ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
“ಪಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳ ಕಬಳಿಕೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಎಂಎಲ್‌ಸಿ ಚುನಾವಣೆಯ ನಂತರ ಪಪಂ ಆಸ್ತಿಯನ್ನು ಕಬಳಿಸಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜು ತೋರಿಸದೆ ಕಾನೂನು ಕ್ರಮ ಜರುಗಿಸಿ ಆಸ್ತಿಯನ್ನು ಹಿಂಪಡೆಯಲಾಗುವುದು.” – ಹೂವಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ
“ಆಸ್ತಿ ಉಳಿಸುವುದೇ ನಮ್ಮಗಳ ಉದ್ದೇಶ. ಈಗಾಗಲೇ ಈ ವಿಷಯ ತಿಳಿದು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರು ಮತ್ತು ಶಾಸಕರುಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವುದು.” – ಶಿವಕುಮಾರ್, ಅರಕಲಗೂಡು ಪಪಂ ಮುಖ್ಯಾಧಿಕಾರಿ