Advertisement

ಪೂರ್ಣ ನೀರಾವರಿ ಜಿಲ್ಲೆಯನ್ನಾಗಿಸುವೆ: ಶಾಸಕ

09:24 PM Oct 19, 2019 | Team Udayavani |

ಯಳಂದೂರು: ಚಾಮರಾಜನಗರ ಜಿಲ್ಲೆಯನ್ನು ಪೂರ್ಣ ನೀರಾವರಿ ಜಿಲ್ಲೆಯನ್ನಾಗಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಶಾಸಕ ಎನ್‌.ಮಹೇಶ್‌ ರೈತರಿಗೆ ಭರವಸೆ ನೀಡಿದರು. ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದ ಹಿಂಡಿ ಮಾರಮ್ಮ ದೇಗುಲದ ಆವರಣದಲ್ಲಿ ಶನಿವಾರ ಕೃಷಿ ಹಾಗೂ ಇತರೆ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ನಿಗದಿತ ಸಮಯಕ್ಕೆ ಕೃಷಿಗೆ ನೀರು: ಚಾಮರಾಜನಗರ ಜಿಲ್ಲೆ ಅರೆ ನೀರಾವರಿ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿಗೆ ಕಬಿನಿ ನಾಲೆಗಳ ಮೂಲಕ ನೀರು ಹರಿಸಲಾಗುತ್ತದೆ. ಆದರೆ ನಿಗದಿತ ಅವಧಿಯಲ್ಲಿ ರೈತರ ಬೆಳೆಗಳಿಗೆ ನೀರು ನೀಡದ ಕಾರಣ ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ಪೂರ್ಣ ನೀರಾವರಿ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ರೈತರಿಗೆ ಅನುಕೂಲವಾಗಲಿ: ದೇಶದಲ್ಲಿ ಶೇ.63 ಮಂದಿ ಒಕ್ಕಲುತನದಲ್ಲೇ ಇದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ.80ಕ್ಕೇರುತ್ತದೆ. ಇಲ್ಲಿ ಕೈಗಾರಿಕೆಗಳ ಪಾಲು ಶೇ.5 ರಷ್ಟು . ಹೀಗಾಗಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲಾಖೆಗಳು ಕೆಲಸ ಮಾಡಬೇಕು ಎಂದರು.

ಅ.24ಕ್ಕೆ ಪ್ರತಿಭಟನೆ: ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ನ.4 ರಂದು ಭಾರತ ಆರ್‌ಸಿಪಿ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದೆ. ಇದು ಗ್ಯಾಟ್‌ ಹಾಗೂ ಡಬ್ಲೂಟಿಒ ಒಪ್ಪಂದಕ್ಕಿಂತ ಅಪಾಯಕಾರಿ. ಇದರ ಬಗ್ಗೆ ಯಾವ ಮಾಧ್ಯಮಗಳೂ ಚಕಾರವೆತ್ತುತ್ತಿಲ್ಲ. ಇದರ ವಿರುದ್ಧ ಅ.24 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಿರಿಧಾನ್ಯ ಬೆಳೆಯಿರಿ: ಬೇರೆ ದೇಶದ ಹಾಲು ಬಂದರೆ ದೇಶದ ಹಾಲು ಕಡಿಮೆ ಬೆಲೆಗೆ ಮಾರಾಟವಾಗಲು ಆರಂಭಿಸುತ್ತದೆ. ಇಲ್ಲಿನ ಹೈನುಗಾರಿಕೆ ನೆಲಕಚ್ಚುತ್ತದೆ. ಕೃಷಿಗೂ ದೊಡ್ಡ ಹೊಡೆತ ಬೀಳಲಿದೆ. ಹೀಗಾಗಿ ಎಲ್ಲರೂ ಇದನ್ನು ವಿರೋಧಿಸಬೇಕು. ರೈತರು ಸಾಕಷ್ಟು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಸಿರಿಧಾನ್ಯ ಬೆಳೆಯಬೇಕು ಎಂದು ಸಲಹೆ ನೀಡಿದರು.

Advertisement

20 ಕೆರೆಗಳ ಅಭಿವೃದ್ಧಿಗೆ ಕ್ರಮವಹಿಸಿ: ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ ಮಾತನಾಡಿ, ಅಗರ ಕೆರೆ 999 ಎಕರೆ ವ್ಯಾಪ್ತಿಯ ವಿಸ್ತಾರ ಹೊಂದಿದೆ. ಕಬಿನಿ ಕಾಲುವೆಯಿಂದ ಪ್ರತ್ಯೇಕ ಪೈಪ್‌ಲೈನ್‌ ಮಾಡಿ ನೀರು ತುಂಬಿಸಬೇಕು. ಇದರಿಂದ ನೂರಾರು ರೈತರಿಗೆ ಅನುಕೂಲವಾಗಲಿದೆ. ತಾಲೂಕಿನ 20 ದೊಡ್ಡ ಕೆರೆಗಳ ಅಭಿವೃದ್ಧಿಗೆ ಶಾಸಕರು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಶೀಘ್ರ ರೈತರ ಖಾತೆಗೆ ವಿಮೆ ಹಣ: ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಮಾತನಾಡಿ, 2016 ರಲ್ಲಿ 13 ಕೋಟಿ ರೂ.,ವಿಮೆ ಬಾಕಿ ಇದೆ. 30 ಸಾವಿರ ರೈತರಿಗೆ ಹಣವನ್ನು ಖಾತೆಗಳಿಗೆ ನೇರವಾಗಿ ಜಮೆ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ತಾಪಂ ಅಧ್ಯಕ್ಷ ನಿರಂಜನ್‌ ಮಾತನಾಡಿದರು. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‌, ಗ್ರಾಪಂ ಅಧ್ಯಕ್ಷ ರಾಚಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್‌ ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಆತ್ಮ ಯೋಜನೆ ಮಹೇಂದ್ರ, ಕಿನಕಹಳ್ಳಿ ಪ್ರಭುಪ್ರಸಾದ್‌, ದೊಡ್ಡೇಗೌಡ, ತೋಟಗಾರಿಕಾ ಇಲಾಖೆ ಕೇಶವ, ಮೀನುಗಾರಿಕಾ ಇಲಾಖೆ ಶ್ವೇತಾ ಕೃಷಿ ವಿಜ್ಞಾನಿ ರಜತ್‌ ಇದ್ದರು.

ಭತ್ತ ಬೇರೆ ರಾಜ್ಯಗಳ ಪಾಲಾಗದಿರಲಿ: ಯಾವುದೇ ಕಾರಣಕ್ಕೂ ಈ ಬಾರಿ ರೈತರು ಕಟಾವು ಮಾಡುವ ಭತ್ತದ ಒಂದೂ ಕಾಳೂ ಬೇರೆ ರಾಜ್ಯಗಳ ಪಾಲಾಗಬಾರದು. ಕಂದಾಯ, ಆಹಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಕಟಾವಿಗಿಂತ ಮುಂಚೆ ಖರೀದಿ ಕೇಂದ್ರ ತೆರೆಯಬೇಕು. ಅಲ್ಲದೇ, ಕೆರೆಗಳ ಹೂಳೆತ್ತಲೂ ಕ್ರಮ ವಹಿಸಲಾಗುವುದು ಎಂದು ಶಾಸಕ ಮಹೇಶ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next