ಪಿರಿಯಾಪಟ್ಟಣ: ಕೃಷಿ ಪ್ರೋತ್ಸಾಹ ಯೋಜನೆಗೆ ರಾಜ್ಯ ಸರ್ಕಾರದಿಂದ 100 ರೂ. ಇದ್ದರೆ ಕೇಂದ್ರ ಸರ್ಕಾರದಿಂದ 250 ರೂ. ಪ್ರೋತ್ಸಾಹವನ್ನು ರೈತರು ಸದುಪಯೋಗ ಪಡೆಯಬೇಕೆಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಸಿ.ಹೆಚ್.ವಿಜಯಶಂಕರ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಎಲ್‌ಎ-2 ಹಾಗೂ ಸ್ಥಾನಿಯ ಸಮಿತಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭ ರೈತರು ತಮ್ಮ ಜಮೀನಿಗಳಲ್ಲಿ ಮರಗಳನ್ನು ಬೆಳೆಸಿ ಪ್ರಾಕೃತಿಕ ಸಮತೋಲನ ಕಾಪಾಡುವ ಸಲುವಾಗಿ ಪ್ರೋತ್ಸಾಹ ನೀಡುವ ಯೋಜನೆ ತಂದಿದ್ದು, ಅದು ರೈತರಿಗೆ ಆದಾಯ ತಂದು ಕೊಡುವುದಾಗಿತ್ತು. ಈಗಿನ ಸರ್ಕಾರ ಕೆಲವು ಜಾತಿಗೆ ಮರಗಳಿಗೆ ಪ್ರೋತ್ಸಾಹಿಸುವುದನ್ನು ನಿಲ್ಲಿಸಿದ್ದು ಶೀಘ್ರವೇ ಪುನರ್‌ಪರಿಶೀಲಿಸಿ ಎಲ್ಲಾ ಪ್ರಭೇದದ ಸಸಿಗಳಿಗೂ ನೀಡಬೇಕೆಂದು ಒತ್ತಾಯಿಸಿದರು.
ಹಿತ ಕಾಪಾಡಿ: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್‌ವಿಮಾ ಯೋಜನೆ ಅನುಷ್ಠಾನದಲ್ಲಿ ಹಿಂದೆ ಉಳಿದಿದ್ದು ಕೃಷಿ ಅಧಿಕಾರಿಗಳು ಕಚೇರಿಗೆ ಬರುವ ರೈತರನ್ನು ಯೋಜನೆಯ ಬಗ್ಗೆ ಮಾಹಿತಿ ನೀಡಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಿ ರೈತ ಹಿತ ಕಾಪಾಡಬೇಕೆಂದು ತಿಳಿಸಿದರು.
ಕೆಲಸಗಳನ್ನು ಸರಿಯಾಗಿ ನಿರ್ವಹಿಸಿ: ಬಿಜೆಪಿ ಜಿಲ್ಲಾ ಪ್ರಭಾರಿಗಳಾದ ಫಣೀಶ್ ಮಾತನಾಡಿ, ಬಿಎಲ್‌ಎ-2 ಎಂಬುದು ಜವಾಬ್ದಾರಿಯುತ ಸ್ಥಾನವಾಗಿದ್ದು ಇವರಿಗೆ ತಮ್ಮ ಬೂತ್‌ನಲ್ಲಿನ ಹೊಸ ಸೇರ್ಪಡೆ, ಕ್ಷೇತ್ರದಲ್ಲಿ ಇಲ್ಲದಿರುವವರನ್ನು ಪಟ್ಟಿಯಿಂದ ತೆಗೆಸುವುದು ಸೇರಿದಂತೆ ಹೆಚ್ಚಿನ ಅಧಿಕಾರವಿರುತ್ತದೆ. ಸ್ಥಾನಿಯ ಸಮಿತಿಯ ಸದಸ್ಯರು ತಮಗೆ ಪಕ್ಷ ಸೂಚಿಸುವ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ತಾಲೂಕಿನಲ್ಲಿ ಬಿಜೆಪಿ ಶಾಸಕರನ್ನು ಕಾಣುವ ಎಲ್ಲಾ ಲಕ್ಷಣಗಳಿವೆ ಎಂದರು.
ಅಧಿಕೃತ ಕಚೇರಿ ಒಂದೇ: ಹೊಸದಾಗಿ ಪಕ್ಷಕ್ಕಾಗಿ ಸೇರ್ಪಡೆಯಾದ ವ್ಯಕ್ತಿಯೊಬ್ಬ ತನ್ನದೊಂದು ಕಾರ್ಯಾಲಯ ತೆರೆದಿರುವುದು ಸಂಘಟನೆಗೆ ಹಿನ್ನೆಡೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಕಾರ್ಯಕರ್ತರಿಗೆ, ಜಿಲ್ಲಾ ಪ್ರ. ಕಾರ್ಯದರ್ಶಿ ಮಾರ್ಬಳ್ಳಿ ಮೂರ್ತಿ ಮಾತನಾಡಿ, ಈ ಬಗ್ಗೆ ಜಿಲ್ಲಾ ಸಮಿತಿಗೆ ವರದಿ ಮಾಡಿ ಶೀಘ್ರ ಇಂತಹ ಗೊಂದಲಗಳಿಗೆ ತೆರೆ ಎಳೆದು ಅನಧೀಧಿಕೃತ ಕಾರ್ಯಾಲಯವನ್ನು ಮುಚ್ಚಿಸುವುದಾಗಿ ಭರವಸೆ ನೀಡಿದರು.
ಮಂಡಲ ಅಧ್ಯಕ್ಷ ಪಿ.ಜೆ.ರವಿ, ಮುಖಂಡರಾದ ಆರ್.ಟಿ. ಸತೀಶ್, ಕೆ.ಕೆ.ಶಶಿ, ಬೆಮ್ಮತ್ತಿಕೃಷ್ಣ, ರಾಜೇಗೌಡ, ಟಿ.ರಮೇಶ್, ಭಾಗ್ಯ, ಆಶಾ, ವಿವಿಧ ಮೋರ್ಚಾ ಅಧ್ಯಕ್ಷರಾದ ಕೃಷ್ಣಪ್ರಸಾದ್, ಲಕ್ಷ್ಮೀ ನಾರಾಯಣ, ವೀರಭದ್ರ, ಷಣ್ಮುಖ, ಮಹದೇವ್, ನಳಿನಿ ಶಕ್ತಿ ಕೇಂದ್ರಗಳ ಅಧ್ಯಕ್ಷರಾದ ರಾಮೇಗೌಡ, ನಾಗೇಶ್, ಸುಂದರ್, ಶರವಣ, ಪ್ರಭಾಕರಾಧ್ಯ ಸೇರಿದಂತೆ 220 ಬೂತ್‌ಗಳ ಬಿಎಲ್‌ಎ-2ಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.