ಕೊಪ್ಪಳ: ರೋಟಾ ವೈರಸ್ ಲಸಿಕೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಸ್ವಚ್ಛತೆ ಹಾಗೂ ರೋಟಾ ವೈರಸ್ ಲಸಿಕೆಯಿಂದಾಗುವ ಅನುಕೂಲತೆ ಮತ್ತು ಮರಣ ಪ್ರಮಾಣವನ್ನು ತಡೆಗಟ್ಟುವಲ್ಲಿ ಈ ಲಸಿಕೆ ವಹಿಸುವ ಪಾತ್ರದ ಕುರಿತು ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಎಡಿಸಿ ಸೈಯದಾ ಅಯಿಷಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಅಧಿಕಾರಿಗಳಿಗೆ ರೋಟಾ ವೈರಸ್ ಲಸಿಕೆಯ ಪರಿಚಯ ಕುರಿತು ನಡೆದ ಜಿಲ್ಲಾಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೋಟಾ ವೈರಸ್‌ನಿಂದಾಗುವ ಅತಿಸಾರ ಭೇದಿ ವಿರುದ್ಧ ಮಕ್ಕಳ ರಕ್ಷಣೆ ಮಾಡುವ ಸಲುವಾಗಿ ಭಾರತ ಸರ್ಕಾರವು ರೋಟಾ ವೈರಸ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಲಸಿಕೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಲು ವೈದ್ಯರು ಹಾಗೂ ಆರೋಗ್ಯ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರಿಗೆ ರೋಟಾ ವೈರಸ್ ಲಸಿಕೆ ತರಬೇತಿ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯ ಅಂಗನವಾಡಿಗಳ ಕಾರ್ಯಕರ್ತೆಯರಿಗೆ ಸೂಚನೆ ನೀಡಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಲಸಿಕಾ ವೇಳಾಪಟ್ಟಿಯನ್ನು ತಮ್ಮ ಅಂಗನವಾಡಿಗಳಲ್ಲಿ ಪ್ರದರ್ಶಿಸಬೇಕು. ಮಕ್ಕಳಿಗೆ 6ನೇ, 10ನೇ ಮತ್ತು 14ನೇ ವಾರದ ವಯಸ್ಸಿನಲ್ಲಿ ರೋಟಾ ವೈರಸ್ ಲಸಿಕೆ ಹಾಕಿಸುವಂತೆ ಪಾಲಕರಿಗೆ ತಿಳಿವಳಿಕೆ ನೀಡಿ ಅವರ ಮನವೊಲಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಿಜಿಸ್ಟರ್ 5 ಮತ್ತು 6ರಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪರಿಷ್ಕೃತ ವೇಳಾಪಟ್ಟಿಯನ್ನು ಅಳವಡಿಸಿ, ಮುದ್ರಣ ಮಾಡಿಸಬೇಕು ಎಂದರು.
ಶಾಲೆಯಲ್ಲಿ ಮುಖ್ಯೋಪಾಧ್ಯಾ ಯರು ಮತ್ತು ಒಬ್ಬರು ನೋಡಲ್ ಅಧ್ಯಾಪಕರನ್ನು ಗುರುತಿಸಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಲಸಿಕಾ ಕಾರ್ಯಕ್ರಮ ಜಾರಿ ಮಾಡಬೇಕು. ಮಕ್ಕಳ ವಿವರವನ್ನು ಸಿದ್ಧಪಡಿಸಿ 5ರಿಂದ 6 ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ವರ್ಧಕ ಲಸಿಕೆ ಹಾಗೂ 10 ವರ್ಷ ಮತ್ತು 16 ವರ್ಷದವರಿಗೆ ಟಿಡಿ ಲಸಿಕೆ ಪಡೆಯುವಂತೆ ಕ್ರಮವಹಿಸಿ, ಲಸಿಕೆ ನೀಡಿರುವ ಬಗ್ಗೆ ದಾಖಲಾತಿ ನಿರ್ವಹಿಸಬೇಕು. ಪ್ರತಿ ವರ್ಷ ಶಾಲಾ ದಾಖಲಾತಿ ವೇಳೆ ಮಗುವಿನ ಲಸಿಕಾ ವೇಳಾ ಪಟ್ಟಿಯನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಎಲ್ಲಾ ಶಾಲೆಗಳಿಗೆ ಆದೇಶ ಹೊರಡಿಸಬೇಕು. ತಾಲೂಕು ಮತ್ತು ಜಿಲ್ಲಾಮಟ್ಟದ ಶಿಕ್ಷಣಾಧಿಕಾರಿಗಳು ಮೇಲ್ವಿಚಾರಣೆ ನಡೆಸಿ ಜಿಲ್ಲೆಯ ಗುರಿ ಸಾಧನೆಯ ಬಗ್ಗೆ ವರದಿ ಸಲ್ಲಿಸಬೇಕು ಎಂದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ| ಲಿಂಗರಾಜ್ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|ಪ್ರಕಾಶ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕುಮಟ್ಟದ ಆರೋಗ್ಯಾಧಿಕಾರಿಗಳು ಹಾಗೂ ಇತರರಿದ್ದರು.