ದೇವನಹಳ್ಳಿ: ರಾಜ್ಯದಲ್ಲಿ ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ನೇಮಕಾತಿ ರೀತಿಯಲ್ಲಿ ಹಗರಣ ಸೃಷ್ಟಿಯಾಗದಂತೆ ಪಾರದರ್ಶಕವಾಗಿ ನಡೆದು ಅರ್ಹ ಫಲಾನುಭವಿಗಳಿಗೆ ದೊರೆಯುವಂತಾಗಲಿ ಎಂದು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಹನುಮಂತಪ್ಪ ತಿಳಿಸಿದರು.
ತಾಲೂಕಿನ ಬೀರಸಂದ್ರ ಬಳಿಯ ಜಿಲ್ಲಾಡಳಿತ ಭವನದ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರ ಮೂಲದಾಖಲೆ ಪರಿಶೀಲನೆ ಪ್ರಕ್ರಿಯೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ(5ರಿಂದ 8ನೇ ತರಗತಿ)ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಂದರೆ ಕರ್ನಾಟಕ ಶಿಕ್ಷಣ ಇಲಾಖೆ ಸೇವೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅಭ್ಯರ್ಥಿಗಳು ವೈಯಕ್ತಿಕ ಅಂಕಗಳು ಮತ್ತು ಮೆರಿಟ್‌ನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಅದರಂತೆ ಇಲಾಖಾ ವೆಬ್‌ಸೈಟ್‌ನಲ್ಲಿ 1:2 ಅನುಪಾತದ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
ತಮ್ಮ ಜಿಲ್ಲೆಗೆ ಸಂಬಂಧಿಸಿದ ಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವುದು, ಪಟ್ಟಿಯಲ್ಲಿನ ವಿವರ ತಮ್ಮ ಜಿಲ್ಲೆಯ ಅಧಿಸೂಚಿತ ಹುದ್ದೆಗಳಿಗೆ ಅನುಗುಣವಾಗಿ ಕೂಲಂಕಷವಾಗಿ ಅಧಿಕಾರಿಗಳ ತಂಡದಲ್ಲಿ ಪರಿಶೀಲಿಸಿ, ಅರ್ಥೈಸಿಕೊಂಡು ಏನಾದರೂ ವ್ಯತ್ಯಾಸಗಳಿದ್ದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕದ ಗಮನಕ್ಕೆ ತರಲಾಗುವುದು ಎಂದರು.
ಲೋಪಗಳಿಲ್ಲದಂತೆ ಪರಿಶೀಲಿಸಿ: ಜಿಪಿಟಿಆರ್ 2022ರ ಸಂಬಂಧ 1:2 ಪರಿಶೀಲನಾ ಪಟ್ಟಿಯಲ್ಲಿ ಪರಿಗಣಿಸಲ್ಪಟ್ಟಿರುವ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಯಾವುದೇ ಲೋಪಗಳಿಲ್ಲದಂತೆ ಪರಿಶೀಲಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು. ಆಯಾ ಜಿಲ್ಲೆಯ ಉಪನಿರ್ದೇಶಕರ ಹಾಗೂ ನೇಮಕಾತಿ ಪ್ರಾಧಿಕಾರ ಅವರ ಜವಾಬ್ದಾರಿ ಆಗಿರುತ್ತದೆ ಎಂದು ಹೇಳಿದರು.
ತಾತ್ಕಾಲಿಕ ಪರಿಶೀಲನಾ ಪಟ್ಟಿ ಪ್ರಕಟ: ಅ.14ರವರೆಗೆ ನಡೆಯುವ ನಾಲ್ಕು ದಿನಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ 6ರಿಂದ 8 ನೇ ತರಗತಿ ಗಳಿಗೆ ನೇಮಕಾತಿ 2022ರ 1:2 ಅನುಪಾತದ ತಾತ್ಕಾಲಿಕ ಪರಿಶೀಲನಾ ಪಟ್ಟಿ ಪ್ರಕಟವಾಗಿದ್ದು, ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲಿಸಲಾಯಿತು. ಕಳೆದ ಮೇ ತಿಂಗಳಲ್ಲಿ ಪರೀಕ್ಷೆ ನಡೆದಿದ್ದು, ಅದರಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಲ್ಲಿ ಅನುಪಾತ 1:2 ರಂತೆ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದು, ನಂತರ ಪರಿಶೀಲನೆಯಾಗಿರುವುದನ್ನು ಆನ್‌ಲೈನ್‌ನಲ್ಲೇ ದಾಖಲಿಸಿ ಕೇಂದ್ರದಲ್ಲೆ ಅಂತಿಮ ಪಟ್ಟಿ ಬಿಡುಗಡೆ ಮಾಡುತ್ತಾರೆ. 161 ಖಾಲಿಯಿರುವ ಹುದ್ದೆ ಭರ್ತಿ ಮಾಡುತ್ತಿರುವುದಾಗಿ ತಿಳಿಸಿದರು. ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕ ಅಭ್ಯರ್ಥಿಗಳು ಹಾಗೂ ಮತ್ತಿತರರು ಇದ್ದರು.