ಚಿತ್ರದುರ್ಗ: ಜಿಲ್ಲೆಯ ಶಾಲೆಗಳಲ್ಲಿ ಸ್ಥಾಪಿಸಿರುವ ಇಕೋ ಕ್ಲಬ್ ಗಳ ಮೂಲಕ ಉತ್ತಮ ಪರಿಸರ, ಹಸಿರೀಕರಣ, ನೈರ್ಮಲ್ಯ, ಘನತ್ಯಾಜ್ಯ ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಇಕೋ ಕ್ಲಬ್ ಜಿಲ್ಲಾ ಅನುಷ್ಠಾನ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಶಾಲಾ ಹಂತದಲ್ಲಿ ಪರಿಸರ ನೈರ್ಮಲ್ಯ ಕಾಪಾಡಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈಗಾಗಲೆ 500 ಸರ್ಕಾರಿ ಹಾಗೂ ಖಾಶಗಿ ಪ್ರೌಢಶಾಲೆಗಳಲ್ಲಿ ಇಕೋ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಶಾಲೆಗೆ ವರ್ಷಕ್ಕೆ 5 ಸಾವಿರ ರೂ. ಅನುದಾನವನ್ನು ಇಕೋ ಕ್ಲಬ್ ನಿರ್ವಹಣೆಗಾಗಿ ನೀಡಲಾಗುತ್ತಿದೆ. ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಪರಿಸರ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕು ಎಂದರು.
ಘನ ತ್ಯಾಜ್ಯ ಕಸ ವಿಲೇವಾರಿ ಕುರಿತು ಹಸಿ ಕಸ ಮತ್ತುಒಣ ಕಸ ವಿಂಗಡಣೆಯಂತಹ ಮಾಹಿತಿಯನ್ನು ಶಾಲಾಮಕ್ಕಳಿಗೆ ಪರಿಣಾಮಕಾರಿಯಾಗಿ ನೀಡಿದಲ್ಲಿ, ಮಕ್ಕಳು ತಮ್ಮ ಮನೆಗಳಲ್ಲಿ ಇದನ್ನು ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಇಕೋ ಕ್ಲಬ್ ಶಾಲೆಗಳಿಗೆ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಗ್ಗೆ ವರದಿ ನೀಡಬೇಕು ಎಂದು ಹೇಳಿದರು.
ಡಿವೈಪಿಸಿ ಸಿ.ಎಂ. ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಸದ್ಯ 500 ಪ್ರೌಢಶಾಲೆಗಳಲ್ಲಿ ಇಕೋ ಕ್ಲಬ್ ಸ್ಥಾಪಿಸಲಾಗಿದ್ದು, ಹೊಸದಾಗಿ 250 ಶಾಲೆಗಳಲ್ಲಿ ಇಕೋ ಕ್ಲಬ್ ಸ್ಥಾಪಿಸಲಾಗುತ್ತಿದೆ, ಈಗಾಗಲೇ 120 ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಇಕೋ ಕ್ಲಬ್ ಗಳ ಮೂಲಕ ವರ್ಷ ಪೂರ್ತಿ ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆ, ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಉಪವಿಭಾಗಾಧಿಕಾರಿ ಪ್ರಸನ್ನ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ತಹಶೀಲ್ದಾರ್ ವೆಂಕಟೇಶಯ್ಯ, ಜಿಲ್ಲಾ ಅನುಷ್ಠಾನ ಮೇಲ್ವಿಚಾರಣಾ ಸಮಿತಿ ಸದಸ್ಯರಾದ ಎಚ್.ಎಸ್.ಟಿ ಸ್ವಾಮಿ, ಮಹೇಶ್ವರ ರೆಡ್ಡಿ, ನಾಗೇಂದ್ರಪ್ಪ, ಲೋಹಿತ್ ಇದ್ದರು.