Advertisement

ಸಮನ್ವಯತೆಯಿಂದ ಚುನಾವಣೆ ಯಶಸ್ವಿಗೊಳಿಸಿ: ಮೈಸೂರು ಜಿಪಂ ಸಿಇಓ ಕೆ.ಎಂ.ಗಾಯತ್ರಿ

08:23 PM Apr 11, 2023 | Team Udayavani |

ಪಿರಿಯಾಪಟ್ಟಣ: ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಚುನಾವಣೆ ನಿಯಮಗಳನ್ನು ಅರಿತುಕೊಂಡು ಒಂದು ತಂಡದ ರೂಪದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಚುನಾವಣೆಯನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಕೆ.ಎಂ.ಗಾಯತ್ರಿ ತಿಳಿಸಿದರು.

Advertisement

ಪಟ್ಟಣ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಚುನಾವಣೆ ಸಂಬಂಧಿಸಿದಂತೆ ಸ್ಥಿರ ಕಣ್ಗಾವಲು ತಂಡ (ಎಸ್ಎಸ್ಟಿ), ಕ್ಷಿಪ್ರ ಕ್ರಿಯಾ ತಂಡ (ಎಫ್ಎಸ್ಟಿ) ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ನಡೆದ ಚುನಾವಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣಾ ಸಮಯದಲ್ಲಿ ಒಬ್ಬ ವ್ಯಕ್ತಿ ರೂ. 50 ಸಾವಿರ ಗಳನ್ನು ಮಾತ್ರ ಕೊಂಡೊಯ್ಯಲು ಅವಕಾಶವಿದೆ. ಅದರ ಹೊರತಾಗಿ, ದಾಖಲೆ ರಹಿತ ವಶಪಡಿಸಿಕೊಂಡ ರೂ. 50 ಸಾವಿರ ಗಳನ್ನು ಮೀರಿದ ಮೊತ್ತ ಹಾಗೂ ರೂ. 10 ಲಕ್ಷಗಳಿಗಿಂತ ಕಡಿಮೆ ಮೊತ್ತ ವನ್ನು ಜಿಲ್ಲಾ ಮಟ್ಟದ ಕ್ಯಾಶ್ ರಿಲೀಜ್ ಸಮಿತಿಗೆ ಕಳುಹಿಸತಕ್ಕದ್ದು ಎಂದರು.

ದಾಖಲೆ ರಹಿತ ರೂ. 10 ಲಕ್ಷ ಮೀರಿದ ಮೊತ್ತದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ನೀಡಬೇಕು. ಮತದಾನ ಕೇಂದ್ರದಲ್ಲಿ ಹಿರಿಯ ನಾಗರೀಕರಿಗೆ ತಂಗುದಾಣ,ಕಾಯ್ದಿರಿಸಿದ ಕೊಠಡಿ ವ್ಯವಸ್ಥೆ ಮಾಡುವುದು ಹಾಗೂ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು ಎಂದರು. ಮತದಾನ ಕೇಂದ್ರಕ್ಕೆ ಮತ ಚಲಾಯಿಸಲು ಬಂದವರಿಗೆ ಶುದ್ಧ ಕುಡಿಯುವ ನೀರಿನ ಜೊತೆಗೆ ಮತಗಟ್ಟೆಯಲ್ಲಿ ಮತಚಲಾಯಿಸಲು ಅನುಕೂಲಕರ ವಾತಾವರಣವನ್ನು ಸೃಷ್ಠಿಸುವಂತೆ ತಿಳಿಸಿದರು.

ಪ್ರಾಚ್ಯವಸ್ತು ಸಂಗ್ರಹಾಲಯದ ಆಯುಕ್ತರು ಹಾಗೂ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ದೇವರಾಜ್ ಮಾತನಾಡಿ, ಮತಗಟ್ಟೆ ವ್ಯಾಪ್ತಿಯಲ್ಲಿ ಬೂತ್ ಲೆವೆಲ್ ಅಧಿಕಾರಿಗಳಾದ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ಮಾಹಿತಿಯನ್ನು ಸಂಗ್ರಹಿಸಿ ಕೊಂಡು ಮತದಾರರ ಜಾಗೃತಿ ತಂಡ ರಚಿಸಿಕೊಂಡರೆ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದರು.

ಅಭ್ಯರ್ಥಿಗಳು ಚುನಾವಣೆಗೆ 40 ಲಕ್ಷದವರೆಗೂ ಖರ್ಚು ಮಾಡಬಹುದಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಅಭ್ಯರ್ಥಿಗಳ ವೆಚ್ಚದ ಬಗ್ಗೆ ನಿಗಾವಹಿಸಬೇಕು. ಅನುಮತಿ ಪಡೆದಿರುವ ವಾಹನಗಳ ಬಳಕೆಗಷ್ಟೆ ಅವಕಾಶ ನೀಡಬೇಕು. ಅನುಮತಿಯಿಲ್ಲದೇ ವಾಹನಗಳನ್ನು ಬಳಸಿದರೆ ಕೇಸ್ ದಾಖಲಿಸಿ, ವಶಪಡಿಸಿಕೊಳ್ಳಬೇಕು ಎಂದರು.

Advertisement

ಸಿಪಿಐ ಶ್ರೀಧರ್ ಮಾತನಾಡಿ, ಚಿಕ್‌ಪೋಸ್ಟ್‌ಗಳಲ್ಲಿ ಹಣ ಅಥವಾ ವಸ್ತುಗಳನ್ನು ವಶಪಡಿಸಿಕೊಂಡ ಸಂದರ್ಭ ಪಂಚನಾಮೆ ಮಾಡುವ ಕ್ರಮ ಹಾಗೂ ಎಫ್ಐಆರ್ ದಾಖಲಿಸುವ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಕುಂಇ ಅಹಮದ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಎ.ಎನ್.ಸುಬ್ರಹ್ಮಣ್ಯ ಶರ್ಮ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next