ಮೈಸೂರು: ಜಿಲ್ಲೆಯನ್ನು ಬಯಲು ಮುಕ್ತ ಶೌಚಾಲಯವಾಗಿಸಲು ಶೇ.100 ಸಾಧನೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ನಡೆದ ಸ್ವತ್ಛ ಭಾರತ್ ಕಾರ್ಯಕ್ರಮಗಳ ಪರಿಶೀಲನಾ ಮತ್ತು ನಗರ ಸಭೆಗಳಲ್ಲಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಕುರಿತ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯನ್ನು ಬಯಲು ಮುಕ್ತ ಶೌಚಾಲಯವಾಗಿಸುವ ನಿಟ್ಟಿನಲ್ಲಿ ಸ್ಥಳಾವಕಾಶವಿರುವವರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಹಾಗೂ ಸ್ಥಳದ ಸಮಸ್ಯೆ ಇರುವವರಿಗೆ ಅನುಕೂಲವಾಗುವಂತೆ ಸೂಕ್ತ ಜಾಗದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಬೇಕಿದೆ. ಆ ಮೂಲಕ ಬಯಲು ಮುಕ್ತ ಶೌಚಾಲಯವಾಗಿಸುವಲ್ಲಿ ಶೇ.100 ಸಾಧನೆ ಮಾಡಲು ಮುಂದಾಗಬೇಕಿದೆ ಎಂದು ಹೇಳಿದರು.
ಇದಕ್ಕಾಗಿ ಸರ್ಕಾರ ನೀಡುತ್ತಿರುವ ಅನುದಾನ ಬಳಸಿಕೊಂಡು ಬಯಲು ಶೌಚ ಮುಕ್ತ ನಗರವನ್ನಾಗಿ ಮಾಡುವ ಜತೆಗೆ ನಗರಸಭೆ ಹಾಗೂ ಪುರಸಭೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಸ್ವತ್ಛತೆಗೆ ಆದ್ಯತೆ ನೀಡಿ, ಮತ್ತೂಮ್ಮೆ ಸ್ವತ್ಛನಗರಿ ಪ್ರಶಸ್ತಿ ಪಡೆಯಲು ಪ್ರಯತ್ನಿಸಬೇಕೆಂದು ಸೂಚಿಸಿದರು.
ಮೈಸೂರು ನಗರ ಬಯಲು ಶೌಚಮುಕ್ತ ಎಂದು ಘೋಷಣೆ ಆಗಿದ್ದು, ಅದರಂತೆ ಇತರೆ ನಗರಗಳೂ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಇದಕ್ಕಾಗಿ ಉಚಿತ ಸಹಾಯವಾಣಿ ತೆರೆಯಬೇಕು, ಜಾರಿಯಾಗಿರುವ ಸ್ವತ್ಛತಾ ಆ್ಯಪ್ ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ಹಾಗೂ ಸಂಘಸಂಸ್ಥೆಗಳಿಗೆ ತಿಳಿಸುವ ಕೆಲಸವಾಗಬೇಕು.
ಜತೆಗೆ ನಗರಗಳಲ್ಲಿ ಕಂಡುಬರುವ ತ್ಯಾಜ್ಯಗಳನ್ನು ಒಂದೆಡೆ ಸಂಗ್ರಹಿಸುವುದು ಹಾಗೂ ಜಿಲ್ಲೆಯ ನಗರಸಭೆ ವ್ಯಾಪ್ತಿಯಲ್ಲಿ ಬಾಕಿಯಿರುವ ಶೌಚಾಲಯ ನಿರ್ಮಿಸಿ ಮುಂದಿನ ಡಿಸೆಂಬರ್ ಒಳಗೆ ಎಲ್ಲಾ ನಗರಗಳು ಬಯಲು ಮುಕ್ತ ಬಹಿರ್ದಸೆ ಮುಕ್ತವಾಗುವಂತೆ ಮಾಡಬೇಕಿದೆ ಎಂದು ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆರ್.ಲೋಕನಾಥ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಪೌರಾಯುಕ್ತರು ಇದ್ದರು.