Advertisement

ಉಗ್ರರ ನಾಮಾವಶೇಷ ಮಾಡಿ

07:40 AM Feb 19, 2019 | Team Udayavani |

ರಾಮನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಾಮದಲ್ಲಿ ಉಗ್ರರ ಕೃತ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಉಗ್ರರ ನಾಮಾವಶೇಷಕ್ಕೆ ಒಕ್ಕೊರಲಿನಿಂದ ಆಗ್ರಹಿಸಿದರು. 

Advertisement

ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಎಸ್‌ಡಿಪಿಐ, ಟಿಪ್ಪು ಸುಲ್ತಾನ್‌ ಅಭಿಮಾನಿ ಬಳಗ, ವಿವಿಧ ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆಗಳ ಕಾರ್ಯಕರ್ತರು ಪುಲ್ವಾಮ ದುರಂತ ಖಂಡಿಸಿ ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ ನಡೆಸಿದರು.

ನಗರದ ರೈಲ್ವೇ ನಿಲ್ದಾಣ ವೃತ್ತದಿಂದ ಐಜೂರು ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಐಜೂರು ವೃತ್ತದಲ್ಲಿ ಕೆಲಕಾಲ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಹರಿಹಾಯ್ದರು. 

ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ:ಈ ವೇಳೆ ಮಾತನಾಡಿದ ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಉಗ್ರರ ದಾಳಿ ಖಂಡಿಸಿ, ದಾಳಿಯಲ್ಲಿ ಹುತಾತ್ಮರಾದ ಯೋಧರ ಬಗ್ಗೆ ನೋವು ವ್ಯಕ್ತಪಡಿಸಿದರು. ಪುಲ್ವಾಮ ಘಟನೆಗೆ ಪಾಕಿಸ್ತಾನವೇ ಕಾರಣ. ಉಗ್ರರ ಬೆಂಬಲಿಸುವ ನೆರೆಯ ದೇಶದ ವಿರುದ್ಧ ಜಾತಿ, ಮತ, ಧರ್ಮ ಬಿಟ್ಟು ಪûಾತೀತವಾಗಿ ಆಕ್ರೋಶ ಬುಗಿಲೆದ್ದಿದೆ. ಪದೇಪದೆ ತಂಟೆಗೆ ಬರುತ್ತಿರುವ ಪಾಕ್‌ಗೆ ಬುದ್ಧಿ ಕಲಿಸಬೇಕಾಗಿದೆ. ಭಾರತ ಸರ್ಕಾರ ಎಚ್ಚರಿಕೆ ನಡೆಯ ಇಟ್ಟು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. 

ಯೋಧರ ತ್ಯಾಗ-ಬಲಿದಾನ ವ್ಯರ್ಥವಾಗಲು ಬಿಡಬೇಡಿ – ಜಿಯಾವುಲ್ಲಾ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್‌ ಜಿಯಾವುಲ್ಲಾ ಮಾತನಾಡಿ, ಪುಲ್ವಾಮ ದುರಂತದಲ್ಲಿ ಮಡಿದ 44 ಸೈನಿಕರ ತ್ಯಾಗ ಬಲಿದಾನ ವ್ಯರ್ಥವಾಗಬಾರದು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಕಿಡಿಗೇಡಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಮೂಲಕ ಮೃತ ವೀರ ಯೋಧರ ಆತ್ಮಕ್ಕೆ ಶೀಘ್ರ ಶಾಂತಿ ದೊರಕಿಸಬೇಕು ಎಂದರು.

Advertisement

ಉಗ್ರರು ಈ ಪ್ರಮಾಣದಲ್ಲಿ ಅಟ್ಟಹಾಸ ಮೆರಿದಿರುವುದರ ಹಿಂದೆ ಬಲಾಡ್ಯ ಶಕ್ತಿಯ ಕೈವಾಡವಿದೆ. ಮೇಲಾಗಿ ದೇಶದ ಒಳಗಿರುವ ದೇಶದ್ರೋಹಿಗಳು ಸಹ ಸಹಕಾರ ನೀಡಿರುವ ಸಾಧ್ಯತೆಗಳಿವೆ. ಹೀಗಾಗಿ ಉಗ್ರರ ಜೊತೆಗೆ ದೇಶ ವಿರೋಧಿಗಳನ್ನು ಮಟ್ಟ ಹಾಕಬೇಕಾಗಿದೆ ಎಂದರು. 

ಭಾರತ  ವೈವಿದ್ಯತೆಯಲ್ಲಿ ಏಕತೆಯನ್ನು ಕಂಡಿರುವ ದೇಶ. ದೇಶದಲ್ಲಿನ ಶಾಂತಿ ಮತ್ತು ಕೋಮುವ ಸೌಹಾರ್ಧತೆಯನ್ನು  ನಾಶಗೊಳಿಸುವ ಕುತಂತ್ರ ಬುದ್ದಿ ನೆರೆರಾಷ್ಟ್ರ  ಪಾಕಿಸ್ತಾನದಿಂದ ಪ್ರಚೋಧಿರತಾಗಿರುವ ಉಗ್ರರು ಹೀನ ಕೃತ್ಯಕ್ಕೆ ಮುಂದಾಗಿದ್ದಾರೆ. ರಣಹೇಡಿಗಳಂತೆ ವರ್ತಿಸಿದ್ದಾರೆ.  

ಆದರೆ ಅವರ ಈ ದುರುದ್ದೇಶವನ್ನು ಈಡೇರಿಸಲು ಸರ್ಕಾರ ಬಿಡಬಾರದು ಎಂದರು.  120 ಕೋಟಿ ಭಾರತೀಯರಲ್ಲಿ ಆಕ್ರೋಶ ಮಡುಗಟ್ಟಿದೆ. ಉಗ್ರರ ಧಮನಕ್ಕೆ ಇಡೀ ಭಾರತ ಒತ್ತಾಯಿಸುತ್ತಿದೆ. ಉಗ್ರರ ಕೃತ್ಯದಿಂದಾಗಿ ದೇಶದಲ್ಲಿರುವ ಎಲ್ಲಾ ಕೋಮುಗಳು ಒಂದಾಗಿವೆ. ಒಕ್ಕೊರಿಲಿನಿಂದ ಉಗ್ರರ ದಾಳಿಯನ್ನು ಕಟು ಮಾತುಗಳಿಂದ ಖಂಡಿಸುತ್ತಿದ್ದಾರೆ, ಸರ್ಕಾರ ದೇಶವಾಸಿಗಳ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
 
ಈ ವೇಳೆ ಪಾಕ್ತಿಸ್ಥಾನದ ವಿರುದ್ದ ಹರಿಹಾಯ್ದ ಅವರು ಆ ರಾಷ್ಟ್ರ ಉಗ್ರಗಾಮಿಗಳನ್ನು ಪೋಷಿಸುತ್ತಿದೆ. ತಕ್ಷಣದಿಂದಲೇ ಇಡೀ ವಿಶ್ವದ ಎಲ್ಲಾ ರಾಷ್ಟ್ರಗಳು ಒಂದಾಗಿ  ಪಾಪಿ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲೇ ಬೇಕಾಗಿದೆ ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು. 

ಪಾಕ್‌ ವಿರುದ್ಧ ಉಗ್ರ ಕ್ರಮಕ್ಕೆ ಕೆ.ಶೇಷಾದ್ರಿ ಆಗ್ರಹ: ಮೈಸೂರು ಎಲೆಕ್ಟ್ರಿಕಲ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಹೇಡಿ ಪಾಕಿಸ್ತಾನ ಉಗ್ರರ ಮೂಲಕ 40 ಯೋಧರನ್ನು ಬಲಿ ಪಡೆದಿದೆ. ಆ ರಾಷ್ಟ್ರ ವಿಕೃತ ಸಂತಸವನ್ನು ಮೆರೆಯುತ್ತಿದೆ.

ಉಗ್ರರನ್ನು ಪೋಷಿಸಿ ದೇಶದಲ್ಲಿ ದಾಳಿ ಮಾಡುವಂತೆ ಪ್ರಚೋದಿಸುತ್ತಿರುವ ಆ ದೇಶದ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವ ಮತ್ತು ಉಗ್ರ ಚಟುವಟಿಕೆಗಳನ್ನು ಇದೀಗ ನಿರ್ನಾಮ ಮಾಡುವ ಅನಿವಾರ್ಯತೆಯೂ ಸೃಷ್ಟಿಯಾಗಿದೆ. ಪುಲ್ವಾಮ ಘಟನೆಯನ್ನು ರಾಮನಗರದಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಪ್ರತಿಭಟನೆ ಮಾಡುವುದರ ಮೂಲಕ ಸೌಹಾರ್ದತೆಯನ್ನು ಮುಂದುವರಿಸಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ್‌, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌, ನಗರಸಭೆ ಸದಸ್ಯ ಫ‌ವೀರ್ಜ್‌ ಪಾಷ, ಸಾಹುಕಾರ್‌ ಅಮ್ಜದ್‌, ಧರ್ಮಗುರುಗಳು ಮಾತನಾಡಿದರು. ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜು, ಸಿಎನ್‌ಆರ್‌ ವೆಂಕಟೇಶ್‌, ದೊಡ್ಡಿಸುರೇಶ್‌, ಅಬ್ದುಲ್‌ ಬಾಸಿದ್‌, ನರಸಿಂಹಯ್ಯ, ಪುಟ್ಟರಾಜು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ವೇಳೆ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next