Advertisement

ಮುಖ್ಯಮಂತ್ರಿ ಕಾರ್ಯಕ್ರಮ ಯಶಸ್ವಿಗೊಳಿಸಿ

05:11 PM Jun 02, 2022 | Team Udayavani |

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೂ. 4ರಂದು ಜಿಲ್ಲೆಗೆ ಆಗಮಿಸಲಿದ್ದು, ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೂಕ್ತ ಬಂದೋಬಸ್ತ್ ಹಾಗೂ ಶಿಷ್ಟಾಚಾರ ಪಾಲಿಸಿ ಸಿಎಂ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೂನ್‌ 4ರಂದು ಬೆಳಿಗ್ಗೆ 10:20ಕ್ಕೆ ವಿಶೇಷ ಹೆಲಿಕಾಪ್ಟರ್‌ ಮೂಲಕ ಹಿರಿಯೂರು ತಾಲೂಕಿನ ದೇವರಕೊಟ್ಟ ಗ್ರಾಮದ ಹೆಲಿಪ್ಯಾಡ್‌ಗೆ ಮುಖ್ಯಮಂತ್ರಿಗಳು ಆಗಮಿಸುವರು. ಹೆಲಿಪ್ಯಾಡ್‌ ಬಳಿ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಿ. ನಂತರ ರಸ್ತೆ ಮೂಲಕ ಹೊಸಹಳ್ಳಿ ಗ್ರಾಮಕ್ಕೆ ಬರುವ ಮುಖ್ಯಮಂತ್ರಿಗಳು, ಧರ್ಮಪುರ ಸೇರಿದಂತೆ ತಾಲೂಕಿನ ಏಳು ಪ್ರಮುಖ ಕೆರೆಗಳಿಗೆ ವೇದಾವತಿ ನದಿಯಿಂದ ನೀರು ತುಂಬಿಸುವ ಜಾಕ್‌ ವೆಲ್‌ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸುವರು. ನಂತರ ರಸ್ತೆ ಮೂಲಕ ಹರಿಯಬ್ಬೆ ಗ್ರಾಮಕ್ಕೆ ಆಗಮಿಸಿ ಹಿರಿಯೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು. ನಂತರ ಮರಳಿ ದೇವರಕೊಟ್ಟ ಹೆಲಿಪ್ಯಾಡ್‌ಗೆ ತೆರಳಿ ಹೆಲಿಕಾಪ್ಟರ್‌ ಮೂಲಕ ಮಧ್ಯಾಹ್ನ 2:30ಕ್ಕೆ ಹೊಸದುರ್ಗ ತಾಲೂಕಿನ ಮಧುರೆಗೆ ಆಗಮಿಸಿ ಭಗೀರಥ ಪೀಠ ಮಹಾಸಂಸ್ಥಾನದ ವತಿಯಿಂದ ಆಯೋಜಿಸಲಾದ ಭಗೀರಥ ಜಯಂತ್ಯುತ್ಸವ ಹಾಗೂ ಭಗೀರಥ ದೇವಸ್ಥಾನ ಲೋಕಾರ್ಪಣೆ ಹಾಗೂ ಉಪ್ಪಾರ ಸಮಾವೇಶದಲ್ಲಿ ಭಾಗವಹಿಸುವರು ಎಂದರು.

ನಂತರ ಹೊಸದುರ್ಗ ಕ್ಷೇತ್ರದ ಇಂಡಿದೇವರ ಹಟ್ಟಿ ಗ್ರಾಮದಲ್ಲಿ 136.50 ಕೋಟಿ ವೆಚ್ಚದಲ್ಲಿ ಹುಣಸೇಕಟ್ಟೆ ಇಂಡೇದೇವರಹಟ್ಟಿವರೆಗಿನ ವಾಣಿ ವಿಲಾಸ ಸಾಗರದ ಹಿನ್ನೀರಿನಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ, ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಹಾಗೂ ತುಮಕೂರು ಶಾಖಾ ಕಾಲುವೆ, ಹೊಸದುರ್ಗ ಕಸಬಾ, ಮಾಡದ ಕೆರೆ ಮತ್ತು ಶ್ರೀರಾಂಪುರ ಹೋಬಳಿಗಳ ವ್ಯಾಪ್ತಿಯ 36916 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ ಕಾಮಗಾರಿಗಳು ಹಾಗೂ 85 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಮುಖ್ಯಮಂತ್ರಿಗಳ ಕಾರ್ಯಕ್ರಮಗಳಿಗೆ ಅಡಚಣೆಯಾಗದಂತೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮಗಳು ಜರುಗುವ ಸ್ಥಳದಲ್ಲಿ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಕುರಿತು ವಸ್ತುಪ್ರದರ್ಶನ ಏರ್ಪಡಿಸುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಅಪರ ಜಿಲ್ಲಾ ಧಿಕಾರಿ ಇ. ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್‌. ಚಂದ್ರಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next