ಮೂಡಿಗೆರೆ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಮತ್ತು ಪ್ರಗತಿ ಕುರಿತು ಗಂಭೀರ ಚರ್ಚೆ ನಡೆಯಿತು.
ಎಂಜಿಎಂ ಸಾರ್ವಜನಿಕ ಸರಕಾರಿ ಆಸ್ಪತ್ರೆಯೊಳಗೆ ಸಮಾಜ ಸೇವಕರೆಂದು ಹೇಳಿಕೊಂಡು ಬಿಳಗುಳದ ಇಬ್ಬರು ವ್ಯಕ್ತಿಗಳು
ಬೆಳಗ್ಗೆಯಿಂದ ಸಂಜೆಯವರೆಗೂ ಆಸ್ಪತ್ರೆಯಲ್ಲಿ ಬೀಡುಬಿಟ್ಟು, ವಸೂಲಿ ದಂಧೆಗಿಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯೊಳಗೆ ಸಾಕಷ್ಟು ಸಿಬ್ಬಂದಿಗಳಿದ್ದಾರೆ. ಸಮಾಜ ಸೇವಕರು ಬಂದು ಮಾಡುವುದಾದರೂ ಏನಿದೆ. ಆರೋಗ್ಯ ಸರ್ಟಿಫಿಕೇಟ್ ಮತ್ತಿತರೇ ಕೆಲಸಗಳಿಗೆ ರೋಗಿಗಳಿಂದ ವಸೂಲಿ ಮಾಡುತ್ತಿದ್ದಾರೆಂದು ಸಭೆಯಲ್ಲಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಒಕ್ಕೊರಲಿನಿಂದ ಪ್ರಭಾರ ಆರೋಗ್ಯಾಧಿಕಾರಿ ಡಾ| ಸುನೀಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿ 26 ಮಂದಿ ಸಿಬ್ಬಂದಿಗಳಿದ್ದಾರೆ.
ಇನ್ನು ಮುಂದೆ ಯಾವುದೇ ಸಮಾಜ ಸೇವಕರನ್ನು ಆಸ್ಪತ್ರೆಯೊಳಗೆ ಸೇರಿಸಬಾರದು. ಅವರಿಂದಾಗಿಯೆ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಉಂಟಾಗಿದೆ. ಇದನ್ನು ಸರಿಪಡಿಸಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಯಿತು. ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳಿಗೆ ಪ್ರತಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ವಿದ್ಯುತ್ ಸಂಪರ್ಕವಿದ್ದು, ಇದರ ಬಿಲ್ ಪಾವತಿಗೆ ಸರಕಾರದಿಂದ ನೇರವಾಗಿ ಗ್ರಾ.ಪಂ. ಮೂಲಕ
ಹಣ ಸಂದಾಯವಾಗುತ್ತಿದೆ. ಉಳಿಕೆ ಬಿಲ್ ಹಣಕ್ಕೆ ಬಡ್ಡಿ ವಿ ಧಿಸಲಾಗುತ್ತಿದೆ. ಈ ಹಣವನ್ನು ಗ್ರಾ.ಪಂ. ಗಳು ಪಾವತಿಸಲು ಸಾಧ್ಯವಿಲ್ಲ. ಹಾಗಾಗಿ ಬಡ್ಡಿ ಹಣವನ್ನು ಮನ್ನಾ ಮಾಡಿ, ಉಳಿಕೆ ಬಿಲ್ ಬಾಬ್ತು ಹಣವನ್ನು ಮಾತ್ರ ಗ್ರಾ.ಪಂ.ಗಳಿಂದ ಪಡೆದುಕೊಳ್ಳಿ ಎಂದು ಮೆಸ್ಕಾಂ ಅಧಿಕಾರಿಗೆ ಅಧ್ಯಕ್ಷ ಕೆ.ಸಿ.ರತನ್ ಸೂಚಿಸಿದರು.
ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಈ ಬಾರಿಯ ಬೇಸಿಗೆಯಲ್ಲಿ ಹೊಳೆ, ಕೆರೆಕಟ್ಟೆಗಳೆಲ್ಲಾ ಬತ್ತಿ ಹೋದ ಕಾರಣ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗುವ ಭೀತಿಯಿದೆ. ಯಾವ ಭಾಗದ ಕಾಮಗಾರಿ ಬಾಕಿ ಉಳಿದಿದೆಯೆಂದು ತಿಳಿದು ಅಂತಹ ಕಾಮಗಾರಿಯನ್ನು ತುರ್ತಾಗಿ ಮುಗಿಸಬೇಕು ಎಂದು ಜಿ.ಪಂ. ಎಇಇಗೆ ರತನ್ ಸೂಚಿಸಿದರು.
ಪಟ್ಟಣದ ಬಸ್ ನಿಲ್ದಾಣದ ಶೌಚಾಲಯದಿಂದ ತ್ಯಾಜ್ಯಯುಕ್ತ ಕೊಳಚೆ ನೀರು ಪೈಪ್ ಮೂಲಕ ಉಳಿಗೆ ಹಳ್ಳಕ್ಕೆ ಹರಿಯಬಿಟ್ಟಿದ್ದರಿಂದ ತತ್ಕೊಳ ಕುಂದೂರು ಸಹಿತ ಅನೇಕ ಭಾಗದ ಜನರಿಗೆ ಕುಡಿಯುವ ನೀರು ಕಲುಷಿತಗೊಂಡು ದುರ್ವಾಸನೆಯಿಂದ ಕೂಡಿದೆ. ಹೊಯ್ಸಳ ಕ್ರೀಡಾಂಗಣಕ್ಕೂ ತ್ಯಾಜ್ಯ ಹರಿಯುತ್ತಿದೆ. ಬಸ್ ನಿಲ್ದಾಣದ ಸುತ್ತಮುತ್ತಲಿನ ಮನೆ ವಾಸಿಗಳಿಗೆ ದುರ್ವಾಸನೆ ಹರಡಿದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವ ಕಾರಣ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಅನುಪಾಲನ ವರದಿ ನೀಡಿ ತೆರಳಿದ ಹಾಗೂ ಸಭೆಗೆ ಹಾಜರಾಗದ ಅಧಿ ಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಾ.ಪಂ. ಕಾರ್ಯನಿರ್ವಹಕ ಅಧಿಕಾರಿಗೆ ಸೂಚಿಸಲಾಯಿತು. ಉಪಾಧ್ಯಕ್ಷೆ ಸವಿತಾ ರಮೇಶ್, ಸದಸ್ಯರಾದ ರಂಜನ್ ಅಜಿತ್ ಕುಮಾರ್, ರಾಜೇಂದ್ರ ಹಿತ್ತಲಮಕ್ಕಿ, ಬಿ.ಎಲ್.ದೇವರಾಜು, ಭಾರತೀ ರವೀಂದ್ರ, ಪ್ರಮೀಳಾ, ವೀಣಾ ಉಮೇಶ್, ವೇದಾವತಿ ಲಕ್ಷ್ಮಣ, ಮೀನಾಕ್ಷಿ, ತಾ.ಪಂ. ಇಒ ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದರು.