ಕುಮಟಾ: ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತವಾದ ಹಾಗೂ ಪ್ರಸಿದ್ಧ ಸಣ್ಣಕ್ಕಿಗೆ ಹೆಸರಾದ ತಾಲೂಕಿನ ಮೇದನಿ ಗ್ರಾಮಕ್ಕೆ ಸಾರ್ವಕಾಲಿಕ ರಸ್ತೆಯನ್ನಾದರೂ ತುರ್ತಾಗಿ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಕೋರಿದ್ದಾರೆ.
ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಮೇದನಿ ಗ್ರಾಮವು ಗುಡ್ಡದ ತುತ್ತತುದಿಯಲ್ಲಿದೆ. ತಾಲೂಕಿನಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ 40 ಮನೆಗಳಿದ್ದು, ಸುಮಾರು 250 ರಷ್ಟು ಜನಸಂಖ್ಯೆ ಹೊಂದಿದೆ. ಈ ಗ್ರಾಮಕ್ಕೆ ಕಳೆದ 10-12 ವರ್ಷದಿಂದೀಚಿಗೆ ಚಿಕ್ಕದಾದ ರಸ್ತೆ ಮಾಡಿಕೊಂಡಿದ್ದು, ಮಹೇಂದ್ರಾ ಜೀಪ್ ಹಾಗೂ ಬೈಕ್‌ಗಳು ಮಾತ್ರ ಈ ಗುಡ್ಡವನ್ನು ಏರುತ್ತವೆ. ಸರಿಯಾದ ರಸ್ತೆಯಿಲ್ಲದ ಕಾರಣ ಇನ್ನಿತರ ದೊಡ್ಡ ವಾಹನಗಳು ಈ ಗುಡ್ಡವನ್ನು ಏರಲು ಸಾಧ್ಯವಿಲ್ಲ. ಕಾಯ್ದಿಟ್ಟ ಅರಣ್ಯದ ಮಧ್ಯೆಯಿಂದ ಈ ರಸ್ತೆ ಹಾದು ಹೋಗಿರುವುದರಿಂದ ಹಾಗೂ ಬೆಲೆಬಾಳುವ ಸಾಕಷ್ಟು ಮರಗಳಿರುವುದರಿಂದ ಕಳ್ಳರಿಂದ ಅರಣ್ಯ ಲೂಟಿಯಾಗಬಾರದೆಂಬ ಉದ್ದೇಶದಿಂದ ಅರಣ್ಯ ಇಲಾಖೆಯವರು ಡಾಂಬರ್ ಅಥವಾ ಸಿಮೆಂಟ್ ರಸ್ತೆ ನಿರ್ಮಿಸಲು ಪರವಾನಗಿ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಮೇದನಿಯಲ್ಲಿ ಕರೆಒಕ್ಕಲು ಸಮಾಜದವರು ವಾಸವಾಗಿದ್ದು, ಬಹುತೇಕರು ಅನಕ್ಷರಸ್ಥರೇ. ಸರಕಾರಿ ನೌಕರಿಯಂತೂ ಒಬ್ಬರೂ ಪಡೆದಿಲ್ಲ. ಭತ್ತದ ಹುಲ್ಲು ಅಥವಾ ಅಡಕೆ ಸೋಗೆಯ ಮೇಲೊದಿಕೆಯ ಮನೆಗಳು. ಹೆಚ್ಚೇನೂ ಶಿಕ್ಷಣ ಪಡೆಯದೇ ಕೃಷಿಯನ್ನೇ ಜೀವಾಳವಾಗಿ ನಂಬಿ ಬದುಕು ಸಾಗಿಸುತ್ತಿದ್ದಾರೆ. ಈ ಗ್ರಾಮವು ಸಣ್ಣಕ್ಕಿಗೆ ಅತ್ಯಂತ ಹೆಸರುವಾಸಿಯಾಗಿದ್ದು, ಇತಿಹಾಸದ ಪುಟದಲ್ಲಿ ನಮೂದಾದ ಮೇದನಿ ಕೋಟೆಯೂ ಇಲ್ಲಿದೆ. ಇಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಹೊರತು ಪಡಿಸಿದರೆ ಯಾವುದೇ ಮೂಲ ಸೌಲಭ್ಯಗಳು ಸರಕಾರದಿಂದ ದೊರೆತಿಲ್ಲ. ಒಂದು ಅಂಗಡಿಯೂ ಇಲ್ಲ. ಗ್ರಾಮದ ಚಿಕ್ಕಪುಟ್ಟ ಸಭೆಗಳನ್ನು ಈಶ್ವರ ದೇವಾಲಯದಲ್ಲಿ ನಡೆಸಲಾಗುತ್ತದೆ ಎಂಬುದು ಗ್ರಾಮಸ್ಥರ ಅಳಲು.
ಮೇದನಿ ಗ್ರಾಮದಲ್ಲಿ ಅನಾರೋಗ್ಯ ಪೀಡಿತ ರಾಗಿ ಹಾಸಿಗೆ ಹಿಡಿದವರನ್ನು ವಾಹನದ ಮೇಲೆ ಕರೆದುಕೊಂಡು ಹೋಗುವಂತಿಲ್ಲ. ಅನಾರೋಗ್ಯ ಪೀಡಿತರನ್ನು ಹಾಗೂ ಗರ್ಭಿಣಿಯರನ್ನು ಕಂಬಳಿ ಕಟ್ಟಿ ಹೊತ್ತು ಆಸ್ಪತ್ರೆ ಸೇರಿಸುವುದೊಂದೇ ದಾರಿ. ಸಮೀಪವೆಂದರೆ 20 ಕಿ.ಮೀ ದೂರದ ಸಂತೇಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರ. ಅಲ್ಲಿ ತುರ್ತು ಚಿಕಿತ್ಸೆ ಒದಗಿಸಿ, ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಇನ್ನೂ 25 ಕಿ.ಮೀ ಅಂದರೆ ಒಟ್ಟು 45 ಕಿ.ಮೀ ಕ್ರಮಿಸಿ ಕುಮಟಾ ಆಸ್ಪತ್ರೆಗೆ ಬರಬೇಕು.
ಮೇದನಿ ಗ್ರಾಮದಲ್ಲಿ ಇತ್ತೀಚೆಗಷ್ಟೇ 4-5 ಯುವಕರು ಮಾತ್ರ ಬೈಕ್ ಖರೀದಿಸಿದ್ದು, ಸಣ್ಣಪುಟ್ಟ ಕೆಲಸಕ್ಕೆ ಅವರ ಬೈಕ್‌ಗಳು ಉಪಯೋಗಕ್ಕೆ ಬರುತ್ತವೆ. ಹಳ್ಳಿಯಾಗಿರುವುದರಿಂದ ಎಲ್ಲರೂ ಹೊಂದಿಕೊಂಡು, ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಮಳೆಗಾಲ ಬಂತೆಂದರೆ ಬೈಕ್ ಕೂಡ ಈ ಗುಡ್ಡವನ್ನು ಏರುವುದಿಲ್ಲ. ಹೀಗಾಗಿ ಇಲ್ಲಿನ ಯುವಕರು ಬೈಕ್‌ನ್ನು ಮನೆಗೆ ಒಯ್ಯದೇ ಮೇದಿನಿ ಗುಡ್ಡದ ಕೆಳಗಿನ ಹುಲಿದೇವರ ಕೊಡ್ಲದ ಪರಿಚಯಸ್ಥರ ಮನೆಯಲ್ಲಿಯೇ ಬೈಕ್ ಬಿಟ್ಟು ಪಾದಾಚಾರಿಗಳಾಗುತ್ತಾರೆ. ಬೈಕ್ ಇದ್ದರೂ ಮೇದನಿ ಗ್ರಾಮದ ಜನತೆಗೆ ನಡೆಯುವುದು ತಪ್ಪಲ್ಲ. ತುರ್ತಾಗಿ ಈ ಭಾಗಕ್ಕೆ ಒಂದು ಉತ್ತಮ ರಸ್ತೆ ಸೌಲಭ್ಯವನ್ನಾದರೂ ಒದಗಿಸಿ ಎಂಬುದು ಈ ಭಾಗದ ಜನತೆಯ ಬೇಡಿಕೆಯಾಗಿದೆ.