ಉಳ್ಳಾಲ : ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಇಂದಿನಿಂದಲೇ ಪಣ ತೊಡುವ ಮೂಲಕ ಸ್ವಚ್ಛ ಭಾರತದ ರಾಯಭಾರಿಗಳಾಗಬೇಕು ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.
ಅವರು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ 5ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜೀವನ ಶಿಕ್ಷಣದ ಅಂಗವಾಗಿ ನೂತನವಾಗಿ ಪರಿಚಯಿಸುತ್ತಿರುವ ಸಾವಯವ ಕೃಷಿ ಅಧ್ಯಯನ ಪಠ್ಯಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ನಾವು ನಿತ್ಯ ಜೀವನದಲ್ಲಿ ಪ್ರತಿಯೊಂದು ಕಾರ್ಯಕ್ಕೆ ಪ್ಲಾಸ್ಟಿಕ್‌ಗೆ ಜೋತು ಬಿದ್ದಿದ್ದೇವೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಯೋಮಿತಿಯವರು ಪ್ಲಾಸ್ಟಿಕ್ ಬಳಕೆ ಮಾಡಿ ಎಲ್ಲೆಂದರಲ್ಲಿ ಬಿಸಾಡುವ ಪರಿಪಾಠ ಬೆಳೆಸಿಕೊಂಡಿದ್ದು ಇದರಿಂದ ಪರಿಸರ ನಾಶಕ್ಕೆ ಕಾರಣವಾಗುತ್ತಿದೆ ಎಂದರು. ಸಕಟ ಸೀಡ್ಸ್ ಇಂಡಿಯಾ ಪ್ರೈ. ಲಿ. ಕೃಷಿ ವಿಜ್ಞಾನಿ ಸರಸ್ವತಿ ನಾಗೇಶ್ ಮಾತನಾಡಿ, ಪರಿಸರ ದಿನಾಚರಣೆ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುತ್ತಿದ್ದು, ಇದು ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗದೆ ನಮ್ಮ ದೈನಂದಿನ ಜೀವನದಲ್ಲಿ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು. ಬೆಂಗಳೂರಿನ ನೇತ್ರ ಕ್ರಾಪ್ ಸೈನ್ಸ್ ಪ್ರೈ.ಲಿ. ಕೃಷಿವಿಜ್ಞಾನಿ ಪ್ರಖ್ಯಾತ್ ಕುಮಾರ್ ಕೆ.ವಿ. ಮುಖ್ಯ ಅತಿಥಿಯಾಗಿದ್ದರು.
ಶಾರದಾ ವಿದ್ಯಾನಿಕೇತನದ ಮುಖ್ಯ ಆಡಳಿತಾಧಿಕಾರಿ ವಿವೇಕ್ ತಂತ್ರಿ, ಪ್ರಾಂಶುಪಾಲೆ ಸುಷ್ಮಾ ದಿನಕರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿನಾಯಕ ಬಿ.ಜಿ., ಉಪ ಪ್ರಾಂಶುಪಾಲ ಮೋಹನದಾಸ್, ಡೇ ಸ್ಕೂಲ್‌ನ ಪ್ರಾಂಶುಪಾಲೆ ಲತಾ ರೈ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ಉಪನ್ಯಾಸಕಿ ದೇವಿಶ್ರೀ ಸ್ವಾಗತಿಸಿದರು. ದೀಪಾ ಪರಿಸರ ದಿನಾಚರಣೆಯ ಮಹತ್ವ ತಿಳಿಸಿದರು. ವಿದ್ಯಾರ್ಥಿನಿ ಶ್ರೀಯಾ ನಿರ್ವಹಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಲಿಜಿ ವಂದಿಸಿದರು.