ಹಾವೇರಿ: ರಾಜ್ಯ ಸರ್ಕಾರದ ಸಾಲಮನ್ನಾ ಘೋಷಣೆಯಿಂದ ಜಿಲ್ಲೆಯ ಬಹುತೇಕ ರೈತರಿಗೆ ಏನೂ ಪ್ರಯೋಜನವಾಗಿಲ್ಲ. ಸರ್ಕಾರ ಕೂಡಲೇ ಸಾಲಮನ್ನಾ ಫಲಾನುಭವಿ ರೈತರ ಖಾತೆಗೆ ಹಣ ಜಮೆ ಮಾಡಬೇಕು. ಇಲ್ಲದಿದ್ದರೆ ಆಗಸ್ಟ್ 19ರಂದು ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ದುರಾಡಳಿತದಿಂದ ಜನತೆ ಭ್ರಮ ನಿರಸನಗೊಂಡಿದ್ದಾರೆ. ಹಿಂದೆಂದೂ ಕಂಡರಿಯದ ಭೀಕರ ಬರಗಾಲದಿಂದ ತತ್ತರಿಸಿ ರೈತರು ಹತಾಶರಾಗಿದ್ದಾರೆ. ರೈತರಿಗೆ ವರವಾಗಬೇಕಿದ್ದ ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆ ರೈತರಿಗೆ ಶಾಪವಾಗಿ ಪರಿಣಮಿಸಿದೆ ಎಂದರು.
ಸಾಲಮನ್ನಾದ ಗೊಂದಲದಿಂದಾಗಿ ರೈತರನ್ನು ಪ್ರಪಾತಕ್ಕೆ ನೂಕಿದಂತಾಗಿದೆ. ಸಾಲಮನ್ನಾದ ಮಾಹಿತಿ ಯಾವ ಅಧಿಕಾರಿಗಳಿಂದಲೂ ಸಿಗುತ್ತಿಲ್ಲ, ಬ್ಯಾಂಕ್ ವ್ಯವಸ್ಥಾಪಕರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಬಳಿಯೂ ಸಿಗುತ್ತಿಲ್ಲ, ನಮ್ಮ ಸಾಲಮನ್ನಾ ಆಗುತ್ತದೆಯೋ ಇಲ್ಲವೋ ಎಂಬುದು ರೈತರಿಗೆ ಗೊತ್ತಾಗುತ್ತಿಲ್ಲ, ಅವರಿಗೆ ಹೊಸ ಸಾಲವೂ ಸಿಗುತ್ತಿಲ್ಲ. ಹೀಗಾಗಿ ರೈತರು ಮಾಹಿತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕೂಡಲೇ ರೈತರಿಗೆ ಸರಿಯಾದ ಮಾಹಿತಿ ನೀಡಿ ಗೊಂದಲ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.
ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಒಂದು ತಿಂಗಳು ತಡವಾಗಿ ಬಿತ್ತನೆಯಾಗಿದೆ. ಮುಂದೆ ಸರಿಯಾಗಿ ಬೆಳೆ ಬರುತ್ತದೆಯೋ ಇಲ್ಲವೋ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಇನ್ನೂ ಹಳ್ಳಿಗಳಲ್ಲಿ ಕುಡಿಯಲು ಸಮರ್ಪಕ ನೀರು, ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಕೆರೆಗಳಲ್ಲಿ ನೀರು ತುಂಬಿಲ್ಲ. ಅಧಿಕಾರಿಗಳು ಸಹ ಜನರಿಗೆ ಸ್ಪಂದಿಸುತ್ತಿಲ್ಲ, ಜಿಲ್ಲಾಡಳಿತ ಸಂಪೂರ್ಣ ನಿಷ್ಕ್ರೀಯವಾಗಿದೆ.
Advertisement
ನಗರದ ಪ್ರವಾಸಿಗೃಹದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
Related Articles
Advertisement
ಉಸ್ತುವಾರಿ ಸಚಿವರು ಜಿಲ್ಲೆಯನ್ನು ಮರೆತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ರೇಸಾರ್ಟ್ ರಾಜಕಾರಣ ಮಾಡುತ್ತಿದ್ದು, ಜನರ ಗೋಳು ಕೇಳುವವರಿಲ್ಲದಾಗಿದೆ ಎಂದು ಕೆಂಚಳ್ಳೇರ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಗೆ 158ಕೋಟಿ ರೂ., ಬೆಳೆವಿಮೆ ಮಂಜೂರಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಯಾವ ರೈತರಿಗೆ, ಯಾವ ಬೆಳೆಗೆ ಎಷ್ಟು ವಿಮೆ ಬಂದಿದೆ ಎಂಬ ಮಾಹಿತಿ ಸಿಗುತ್ತಿಲ್ಲ, ಕೂಡಲೇ ಯಾವ ಬೆಳೆಗೆ ಎಷ್ಟು ಹಣ ಬಂದಿದೆ ಎಂಬ ಮಾಹಿತಿ ಕೊಟ್ಟು ತಕ್ಷಣ ರೈತರ ಖಾತೆಗೆ ವಿಮಾ ಹಣ ಜಮೆ ಮಾಡಬೇಕು. ಸಾಲಮನ್ನಾ ಯೋಜನೆಯನ್ನು ಒಮ್ಮೆ ಕೈಗೆತ್ತಿಕೊಂಡಿದ್ದು, ಹೆಚ್ಚು ದಿನದೂಡದೇ ಅದನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಪ್ರಮುಖರಾದ ಪ್ರಭುಗೌಡ ಪ್ಯಾಟಿ, ಸುರೇಶ ಚಲವಾದಿ ಸುದ್ದಿಗೋಷ್ಠಿಯಲ್ಲಿದ್ದರು.
ಸಾಲ ಮನ್ನಾವೂ ಇಲ್ಲ, ಹೊಸ ಸಾಲವೂ ಇಲ್ಲ:
ಜಿಲ್ಲೆಯ ಸುಮಾರು ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ 1.12ಲಕ್ಷ ರೈತರ 2025 ಕೋಟಿ ರೂ., ಸಾಲ ಮನ್ನಾ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ, ಕೇವಲ 425ಕೋಟಿ ರೂ., ಹಣ ಬಿಡುಗಡೆ ಮಾಡಿ ಕೈತೊಳೆದುಕೊಂಡಿದೆ. ಸಹಕಾರಿ ಸಂಘಗಳ 21621 ರೈತರಿಗೆ 70.58ಕೋಟಿ ರೂ., ಸಾಲ ಮನ್ನಾ ಹಣ ಬರಬೇಕಿತ್ತು. ಅದರಲ್ಲೂ 25 ಕೋಟಿ ರೂ. ಹಣ ಬಾಕಿ ಉಳಿದುಕೊಂಡಿದೆ. ರೈತರು ಬ್ಯಾಂಕ್‌ಗೆ ಹೋಗಿ ವಿಚಾರಿಸಿದರೆ ಅವರಿಂದಲೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಸರ್ಕಾರದಿಂದ ಇನ್ನೂ ಹಣ ಬಂದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ರೈತರ ಸಾಲ ಮನ್ನಾವೂ ಆಗದೇ; ಹೊಸ ಸಾಲವೂ ಸಿಗದೇ ಬೀಜ, ಗೊಬ್ಬರ ಖರೀದಿಗೆ ಪರದಾಡುವಂತಾಗಿದೆ ಎಂದು ರಾಮಣ್ಣ ಕೆಂಚಳ್ಳೇರ ದೂರಿದರು.