ಚಿಕ್ಕಬಳ್ಳಾಪುರ: ರೈತರ ಅನುಕೂಲಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳ ಮುಖಾಂತರ ಬಿಡುಗಡೆ ಮಾಡುವ ಸಹಾಯಧನವನ್ನು ನೇರವಾಗಿ ರೈತರ ಖಾತೆಗೆ ತಲುಪುವಂತೆ ಮಾಡುವ ಹೊಣೆಗಾರಿಕೆ ಬ್ಯಾಂಕುಗಳದ್ದಾಗಿದೆ ಎಂದು ಜಿಪಂ ಸಿಇಒ ಬಿ. ಫೌಝೀಯಾ ತರುನ್ನುಮ್ ತಿಳಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ನಡೆದ ಬ್ಯಾಂಕ್‌ಗಳ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ” ಹಾಗೂ “ಹವಾಮಾನ ಆಧಾರಿತ ಬೆಳೆಗಳ ವಿಮಾ ಯೋಜನೆ” ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರಗಳು ಸಮರ್ಪಕವಾಗಿ ನಡೆಯುವಲ್ಲಿ ಬ್ಯಾಂಕ್ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಬೇಕು. ಜಿಲ್ಲೆಯಲ್ಲಿ ನಡೆಯುವ ಹಣಕಾಸಿನ ವ್ಯವಹಾರವು ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ವಾಗುವಂತೆ ಕೃಷಿ ಸಂಬಂಧಿತ ಯೋಜನೆಗಳಲ್ಲಿ ಇಲ್ಲಿಯೇ ಹೂಡಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ವರದಿ ನೀಡಿ: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್, ದೇವರಾಜ್ ಅರಸು ಯೋಜನೆ, ರಾಜೀವ್‌ಗಾಂಧಿ ಚೈತನ್ಯ ಯೋಜನೆ ಸೇರಿ ದಂತೆ 2019-20ನೇ ಸಾಲಿನ ಅನೇಕ ಸರ್ಕಾರದ ಯೋಜನೆಗಳಿಗೆ ಸಾಲ ಸೌಲಭ್ಯ ನೀಡದೆ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದ್ದು, ಇದರಿಂದ ರೈತರಿಗೆ ತೊಂದರೆ ಆಗಿದೆ. ಈ ಬಗ್ಗೆ ಸಮರ್ಪಕ ವರದಿ ಸಂಬಂಧಪಟ್ಟ ಬ್ಯಾಂಕ್‌ಗಳು ನೀಡಬೇಕೆಂದು ಹೇಳಿದರು.
ಪ್ರಧಾನ್ ಮಂತ್ರಿ ಗರೀಬ್ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಬೆಳೆ ವಿಮೆ ಹಾಗೂ ರೂ 2,000 ರೂ. ಗಳಲ್ಲದೇ ಸಾಧ್ಯವಾದರೆ ಈ ಯೋಜನೆಗಳಡಿಯಲ್ಲಿ ನರೇಗಾ ಯೋಜನೆ ಅಳವಡಿಸಲು ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ ಹಣಕಾಸಿನ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್‌ಗಳು ಮುಂದಾಗಬೇಕು. ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲಾದ್ಯಂತ ಎಲ್ಲಾ ಬ್ಯಾಂಕ್‌ಗಳಲ್ಲಿ ಉಳಿದ ಯೋಜನೆಗಳ ಅರ್ಜಿಗಳನ್ನು ಸಕಾಲಕ್ಕೆ ಜಾರಿಗೊಳಿಸಬೇಕೆಂದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಬಸವ ರಾಜ್, ಕೆನರಾ ಬ್ಯಾಂಕ್ ಎ.ಜಿ.ಎಮ್. ಸತ್ಯನಾರಾಯಣ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿ.ಬಿ.ಆರ್.ಎಸ್.ಇ.ಟಿ. ಐ ವೆಂಕಟಸ್ವಾಮಿ, ಜಂಗಮಪ್ಪ ಇದ್ದರು.