Advertisement

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಿಸಿ: ಸುರೇಶ್‌

10:09 AM Jul 04, 2017 | Team Udayavani |

ತಿಪಟೂರು: ರಾಜ್ಯಾದ್ಯಂತ ಭೀಕರ ಬರಗಾಲವಿದ್ದು, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿ ರೈತರ ಪರವಾಗಿರುವ ಸರ್ಕಾರ ಎನ್ನುವ ಮಾತನ್ನು ನಿಜವಾಗಿಸಲಿ ಎಂದು ತಾಪಂ ಅಧ್ಯಕ್ಷ ಎಂ.ಎನ್‌.
ಸುರೇಶ್‌ ಆಗ್ರಹಿಸಿದರು.

Advertisement

ನಗರದ ಕಲ್ಪತರು ಕಾಲೇಜಿನ ಸಭಾಂಗಣದಲ್ಲಿ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಸಬಾ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ 2017-18 ಇಲಾಖೆಗಳ ನಡಿಗೆ ರೈತನ ಮನೆ ಬಾಗಿಲಿಗೆ ಎಂಬ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ರಾಜ್ಯದ ರೈತರಿಗೆ 50 ಸಾವಿರ ರೂ., ಸಾಲಮನ್ನಾ ಮಾಡಿ ಜನಪರ ಕಾಳಜಿ ಉಳ್ಳ ಸರ್ಕಾರ ಎಂದು
ತೋರಿಸಿದೆ. ಕೇಂದ್ರ ಸರ್ಕಾರ ಜನಪರ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಿಸಲಿ ಎಂದು ಹೇಳಿದರು.

ಜಿಪಂ ಸದಸ್ಯೆ ಮಮತಾ, ಪುರುಷರಿಗಿಂತ ಮಹಿಳೆಯರೇ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೆಚ್ಚಿನ ಮಹಿಳೆಯರು ವಾಣಿಜ್ಯ ಬೆಳೆ ಹಾಗೂ ಆರ್ಥಿಕ ಸಹಕಾರವನ್ನು ನೀಡುವಂತಹ ಬೆಳೆ ಬೆಳೆಯಲು
ಮುಂದಾಗಿದ್ದಾರೆ. ಇದಕ್ಕೆ ಪುರುಷರ ಸಹಕಾರ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಸಿರಿಧಾನ್ಯ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕ ಜಿ.ಎಸ್‌.ರಘು, ಈ ಹಿಂದಿನ ಜನತೆ ಸಿರಿಧಾನ್ಯಗಳನ್ನು ಬಳಸುತ್ತಿದ್ದರಿಂದಲೇ ನೂರಾರು ವರ್ಷಗಳ ಆರೋಗ್ಯವಾಗಿ ಜೀವನ ಸಾಗಿಸುತ್ತಿದ್ದರು. ಸಿರಿಧಾನ್ಯಗಳಿಗೆ ಒಳ್ಳೆಯ ಮಾರುಕಟ್ಟೆ ಸೌಲಭ್ಯವಿದ್ದು ರೈತರು ಬೆಳೆಯುವ ಮನಸ್ಸು ಮಾಡಬೇಕು ಎಂದು ತಿಳಿಸಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಸದಸ್ಯೆ ಭಾಗ್ಯಮ್ಮ, ಕೇಂದ್ರ-ರಾಜ್ಯ ಸರ್ಕಾರಗಳು ರೈತರಿಗಾಗಿ ಅನೇಕ ಉತ್ತಮ ಯೋಜನೆಗಳನ್ನು ರೂಪಿಸುತ್ತಿದ್ದು, ಇವುಗಳ ಸಂಪೂರ್ಣ ಬಳಕೆ ಮಾಡಿಕೊಳ್ಳುವ ಅವಶ್ಯಕತೆ ಜನರಿಗಿದೆ. ಆದರೆ,
ಇನ್ನೂ ಕೆಲವು ರೈತರು ಹಳೆಯ ಬೇಸಾಯ ಪದ್ದತಿಯನ್ನೇ ಅನುಸರಿಸುತ್ತಿದ್ದು ಇದರಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಡಿ.ರವಿಕುಮಾರ್‌, ಸದಸ್ಯರಾದ ಜಿ.ಮೀನಾಕ್ಷಿ, ಜಿ.ಎಸ್‌.ಶಿವಸ್ವಾಮಿ, ಜಿ.ಎನ್‌. ಅಂಬಿಕಾ, ಎಸ್‌.ಸುರೇಶ್‌ ಕುಮಾರ್‌, ಎಪಿ.ಎಂಸಿ ಅಧ್ಯಕ್ಷ ರವೀಶ್‌, ಉಪಾಧ್ಯಕ್ಷ ಬಜಗೂರು ಮಂಜುನಾಥ್‌, ಸದಸ್ಯರಾದ ಮಧುಸೂದನ್‌, ಚಿಕ್ಕಣ್ಣ, ಕಾಂತರಾಜು, ನಾಗಲಾಂಬಿಕ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್‌.ದೇವರಾಜು, ಜಿಲ್ಲಾ ಪ್ರತಿನಿಧಿ ಕೆ.ಎಸ್‌.ಸದಾಶಿವಯ್ಯ, ತಾಪಂ ಇಒ ಎ.ಸಿ.ಕುಮಾರಸ್ವಾಮಿ, ತಹಶೀಲ್ದಾರ್‌ ಮಂಜುನಾಥ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next