ಬೆಳ್ತಂಗಡಿ: ತಾಲೂಕಿನಲ್ಲಿ ಪ್ರಕೃತಿ ವಿಕೋಪದಿಂದ ಭಾರೀ ಅನಾಹುತವಾಗಿದ್ದು, ಅಪಾರ ಕಷ್ಟನಷ್ಟಗಳಾಗಿವೆ. ತಾಲೂಕಿನ ಮಿತ್ತಬಾಗಿಲು, ಮಲವಂತಿಗೆ, ಚಾರ್ಮಾಡಿ, ಮುಂಡಾಜೆ ಮೊದಲಾದ ಗ್ರಾ.ಪಂ. ವ್ಯಾಪ್ತಿ ನೆರೆಯಿಂದ ತತ್ತರಿಸಿದೆ. ಸಂತ್ರಸ್ತರು ಆತಂಕ ಪಡಬೇಕಾಗಿಲ್ಲ.
ಮಂಜುನಾಥಸ್ವಾಮಿ ನಮ್ಮನ್ನು ರಕ್ಷಿಸಿದ್ದಾನೆ. ಆಪತ್ತು ಸಹಜ, ಮುಂದಿನ ಭವಿಷ್ಯ ರೂಪಿಸಲು ಸನ್ನದ್ಧರಾಗಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನೆರೆ ಸಂತ್ರಸ್ತರಿಗೆ ಧೈರ್ಯ ಹೇಳಿದರು.
ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರಿಗೆಅವರು ಅಭಯದ ಮಾತುಗಳನ್ನಾಡಿ ದರು. ಹಗಲು ಹೊತ್ತು ಈ ಅನಾಹುತ ಸಂಭವಿಸಿದ್ದು, ಜೀವ ಹಾನಿ ಆಗದಿರುವುದು ನೆಮ್ಮದಿ ತಂದಿದೆ. ಪ್ರಕೃತಿಯನ್ನು ದೇವಸ್ವರೂಪದಲ್ಲಿ ಕಾಣುವ ನಮಗೆ ನಮಗೆ ಭಗವಂತನೇ ರಕ್ಷಕ ಎಂದರು.
ಈಗಾಗಲೇ ಕಾಳಜಿ ಕೇಂದ್ರವನ್ನು ರಚಿಸಿ ಸಂತ್ರಸ್ತರಿಗೆ ಊಟೋಪಾಹಾರ ನೀಡುವಲ್ಲಿ ಸರಕಾರ, ಧ. ಗ್ರಾಮಾಭಿವೃದ್ಧಿ ಯೋಜನೆ, ವಿವಿಧ ಸಂಘ ಸಂಸ್ಥೆಗಳು ತೊಡಗಿವೆ. ಗ್ರಾಮಾಭಿವೃದ್ಧಿ ಯೋಜನೆಯ ಸಿಬಂದಿ ಮತ್ತುಕಾರ್ಯಕರ್ತರು ಪ್ರವಾಹ ಪ್ರದೇಶಗಳ ನಷ್ಟದ ಅಂದಾಜು ಸಂಗ್ರಹಿಸುತ್ತಿವೆ. ಶೀಘ್ರವೇ ಯೋಜನೆಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇನೆ ಎಂದ ಅವರು, ಸರಕಾರ, ಜಿಲ್ಲಾ ಆಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಎಲ್ಲರೂ ಶ್ರಮದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.