Advertisement

Manipal: ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್‌ ಬಾಯಲ್‌

12:30 AM Sep 26, 2024 | Team Udayavani |

ಮಣಿಪಾಲ: ಸಾಲ ಮತ್ತು ಠೇವಣಿ ಅನುಪಾತ (ಸಿಡಿ ರೇಷಿಯೋ) ಹೆಚ್ಚಿಸಲು ಬ್ಯಾಂಕ್‌ಗಳು ಹೆಚ್ಚು ಶ್ರಮ ವಹಿಸಬೇಕು. ಎಲ್ಲ ಬ್ಯಾಂಕ್‌ಗಳು ಕಡ್ಡಾಯವಾಗಿ ಕನ್ನಡ ಸೂಚನಾ ಫ‌ಲಕಗಳನ್ನು ಅಳವಡಿಸಬೇಕು ಹಾಗೂ ಸ್ಥಳೀಯ ಗ್ರಾಹಕರ ಅನುಕೂಲಕ್ಕಾಗಿ ಕನ್ನಡ ತಿಳಿದಿರುವ ಸಿಬಂದಿಯೊಬ್ಬರನ್ನು ನಿಯೋಜಿಸಿಕೊಂಡಿರಬೇಕು ಎಂದು ಜಿಪಂ ಸಿಇಒ ಪ್ರತೀಕ್‌ ಬಾಯಲ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿ.ಪಂ.ನ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಬುಧವಾರ ಜರಗಿದ ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್‌ಗಳ ಮ್ಯಾನೇಜರ್‌, ಸಿಬಂದಿ ಜನಸಾಮಾನ್ಯರೊಂದಿಗೆ ಬ್ಯಾಂಕಿನ ವ್ಯವಹಾರಗಳ ಕುರಿತು ಕನ್ನಡ ಭಾಷೆಯಲ್ಲಿ ವ್ಯವಹರಿಸುವುದರಿಂದ ಬ್ಯಾಂಕಿನ ವ್ಯವಹಾರಗಳು ಮತ್ತಷ್ಟು ಹೆಚ್ಚಲಿದೆ. ಆಗ ಸಿಡಿ ರೇಷಿಯೋ ಹೆಚ್ಚಿ ಸಲು ಅನುಕೂಲವಾಗಲಿದೆ ಎಂದರು.

ಸಾರ್ವಜನಿಕರ ಜೀವನ ಸುಧಾರಣೆಗೆ ಸರಕಾರಗಳ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಕುರಿತು ಬ್ಯಾಂಕ್‌ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜನಸಾಮಾನ್ಯರಿಗೆ ವ್ಯವಹಾರ ಚಟುವಟಿಕೆಗಳ ಕುರಿತು ಅರಿವು ಮೂಡಿಸುವ ಮೂಲಕ ಹೆಚ್ಚಿನವರು ಯೋಜನೆಯ ಫಲಾನುಭವಿಗಳನ್ನಾಗಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯ ಬ್ಯಾಂಕ್‌ಗಳಲ್ಲಿ 2023ರ ಜೂನ್‌ ಅಂತ್ಯಕ್ಕೆ 52,676 ಕೋ. ರೂ. ವ್ಯವಹಾರ ನಡೆದಿದ್ದು, 2024ರ ಜೂನ್‌ ಅಂತ್ಯಕ್ಕೆ 58,352 ಕೋ. ರೂ.ವ್ಯವಹಾರ ನಡೆದು, 5,676 ಕೋ. ರೂ. ಹೆಚ್ಚಾಗಿ ಶೇ.10.78ರಷ್ಟು ಬೆಳೆವಣಿಗೆಯಾಗಿದೆ. ಆರ್ಥಿಕತೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಲು ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂಬ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಆದ್ಯತಾ ವಲಯಗಳಿಗೆ 2,703.09 ಕೋ. ರೂ. ಸಾಲ ವಿತರಿಸಿ ಶೇ. 30.74 ಹಾಗೂ ಆದ್ಯತೇತರ ವಲಯಗಳಿಗೆ 1,677.82 ಕೋ. ರೂ. ಸಾಲ ವಿತರಿಸಿ, ಶೇ. 43.65 ರಷ್ಟು ಸಾಧನೆ ಮಾಡಲಾಗಿದೆ. ಆದ್ಯತಾ ವಲಯಗಳಿಗೆ ಸಾಲ ನೀಡಿಕೆ ಹೆಚ್ಚಾಗಬೇಕು. ಆದ್ಯತೇತರ ವಲಯವೇ ಬ್ಯಾಂಕ್‌ ಆದ್ಯತೆ ಆಗಬಾರದು. ಸರಕಾರದ ಯೋಜನೆಗಳು ಹಾಗೂ ಆದ್ಯತ ವಲಯಗಳಿಗೆ ಹೆಚ್ಚೆಚ್ಚು ಸಾಲಸೌಲಭ್ಯ ಒದಗಿಸಬೇಕು ಎಂದರು.

Advertisement

ಕೆನರಾ ಬ್ಯಾಂಕ್‌ನ ರೀಜನಲ್‌ ಮ್ಯಾನೇಜರ್‌ ಶಿಬಾ ಸಹಜನ್‌ ಮಾತ ನಾಡಿ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಬ್ಯಾಂಕಿಂಗ್‌ ಸಾಲ-ಠೇವಣಿ ಅನುಪಾತ ಇಳಿಮುಖವಾಗಿದೆ. ಕಳೆದ ವರ್ಷ ಶೇ.46.94ರಷ್ಟಿದ್ದು, ಈ ಬಾರಿ ಅದು ಶೇ.46.92ರಷ್ಟಾಗಿದೆ. ಇದು ರಾಜ್ಯದಲ್ಲೇ ಕೆಳ ಹಂತದ್ದಾಗಿದೆ. ಉ.ಕ.ಜಿಲ್ಲೆ ಅಂತಿಮ ಸ್ಥಾನದಲ್ಲಿದ್ದು, ಅನಂತರ ಉಡುಪಿ ಇದೆ. ಸಿ.ಡಿ. ರೇಷಿಯೋ ಶೇ.50ಕ್ಕಿಂತ ಕಡಿಮೆ ಇರುವುದು ಕಳವಳಕಾರಿ ಸಂಗತಿ ಎಂದರು.

ಆರ್‌ಬಿಐ ಎಕ್ಸಿಕ್ಯುಟಿವ್‌ ಇಳಾ ಸಾಹು ಮಾತನಾಡಿ, ಆರ್‌ಬಿಐ ವಿದ್ಯಾರ್ಥಿಗಳಿಗೆ ಕ್ವಿಜ್‌ ಏರ್ಪಡಿಸು ತ್ತಿದ್ದು, ರಾಜ್ಯದ 20 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಉಡುಪಿಯ 600 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ಬ್ಯಾಂಕ್‌ಗಳು ಆರ್‌ಬಿಐನ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದರು.

ನಬಾರ್ಡ್‌ನ ಡಿಡಿಎಂ ಸಂಗೀತಾ ಕರ್ತಾ ನಬಾರ್ಡ್‌ ನೀಡುತ್ತಿರುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಎಸ್‌ಸಿಡಿಸಿಸಿ ಬ್ಯಾಂಕ್‌ನ ಎಜಿಎಂ ರಾಜೇಶ್‌ ಶೆಟ್ಟಿ ಹಾಗೂ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಹರೀಶ್‌ ಜಿ. ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next