ಹಾವೇರಿ: ವಾರದೊಳಗಾಗಿ ನಗರದ ಒಳಾಂಗಣ ಕ್ರೀಡಾಂಗಣವನ್ನು ಕ್ರೀಡಾಪಟುಗಳ ಬಳಕೆಗೆ ಮುಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ವಿವಿಧ ನವೀಕರಣ ಕಾಮಗಾರಿಗಳ ಪ್ರಗತಿ ಪರಿವೀಕ್ಷಿಸಿದರು.
ಒಳಾಂಗಣ ಕ್ರೀಡಾಂಗಣದಲ್ಲಿ ನಾಲ್ಕು ಬ್ಯಾಡ್ಮಿಂಟನ್ ಅಂಕಣಗಳು ಸಿದ್ಧಗೊಳ್ಳುತ್ತಿವೆ. ಅಂತಿಮ ಪಾಲಿಶ್ ಹಾಕುವ ಕಾಮಗಾರಿ ನಡೆಸಲಾಗುತ್ತಿದೆ. ಲೈನಿಂಗ್ ಕಾರ್ಯಪೂರ್ಣಗೊಂಡಿದೆ. ಒಳಾಂಗಣ ಗೋಡೆಗಳಿಗೆ ಬಣ್ಣದ ಲೇಪನ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಮೂರ್‍ನಾಲ್ಕು ದಿನ ಅಂಕಣದ ಮರದ ನೆಲಹಾಸಿಗೆ ಹಾಕಿರುವ ಪಾಲಿಶ್ ಒಣಗಲು ಬಿಟ್ಟು ಕ್ರೀಡಾಪಟುಗಳ ಬಳಕೆಗೆ ಮುಕ್ತಗೊಳಿಸಲು ಎಂದು ಸೂಚನೆ ನೀಡಿದರು.
ಪೆವಿಲಿಯನ್ ಕಟ್ಟಡಕ್ಕೆ ಅಳವಡಿಸಿದ ಮೇಲ್ಛಾವಣಿ ಸೀಟುಗಳು ಹಾಗೂ ಕ್ರೀಡಾಂಗಣ ಕಟ್ಟಡಕ್ಕೆ ಪೇಂಟ್ ಮಾಡುವ ಕಾಮಗಾರಿಗಳನ್ನು ವೀಕ್ಷಿಸಿ ಕ್ರೀಡಾಂಗಣದ ಸುತ್ತಲಿನ ಮೆಟ್ಟಲಿನ ಮೇಲೆ ಶೆಲ್ಟರ್ ನಿರ್ಮಾಣಕ್ಕೆ ಸೂಚನೆ ನೀಡಿದರು. ಬಾಸ್ಕೆಟ್ ಬಾಲ್, ಸ್ಕೇಟಿಂಗ್, ಟೆನ್ನಿಸ್ ಅಂಕಣ, ಜಿಮ್ ನವೀಕರಣ ಕಾಮಗಾರಿ ತ್ವರಿತವಾಗಿ ಆರಂಭಿಸಲು ಸೂಚನೆ ನೀಡಿದರು.
ಜಿಲ್ಲಾ ಕ್ರೀಡಾಂಗಣದ ಸಮಗ್ರ ನವೀಕರಣ ವಿವಿಧ 14 ಕಾಮಗಾರಿಗಳನ್ನು ಕೈಗೊಳ್ಳಲು 83.83 ಲಕ್ಷ ರೂ. ವೆಚ್ಚದ ಅಂದಾಜು ಪತ್ರಿಕೆ ಈಗಾಗಲೇ ಕ್ರೀಡಾ ಇಲಾಖೆ ಆಯುಕ್ತರಿಗೆ ಸಲ್ಲಿಸಲಾಗಿದೆ. ತ್ವರಿತ ಮಂಜೂರಾತಿ ಪಡೆಯಲು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಾಕೀರ ಅಹ್ಮದ್ ಅವರಿಗೆ ಸೂಚಿಸಿದರು.
ಹೊಸ ಪ್ರಸ್ತಾವನೆಯಂತೆ 400 ಮೀಟರ್ ಅಥ್ಲೆಟಿಕ್ ಟ್ರ್ಯಾಕ್ ನವೀಕರಣ ಹಾಗೂ ಪೇಂಟ್ ಮಾಡುವುದು. ಅಥ್ಲೆಟಿಕ್ ಟ್ರ್ಯಾಕ್ ಸುತ್ತಲೂ ಬಾಸ್ಕೆಟ್ ಬಾಲ್, ಟೆನ್ನಿಸ್ ಅಂಕಣಗಳು ಹಾಗೂ ಜಿಮ್ ಕಟ್ಟಡ ನವೀಕರಣ, ಫ್ಲಡ್‌ಲೈಟ್ ಅಳವಡಿಕೆ, ಧ್ವಜಸ್ತಂಬ ಹಾಗೂ ಪೋಡಿಯಂ ವಿಸ್ತರಣೆ ಮಾಡಿ ನವೀಕರಿಸುವುದು ಕ್ರೀಡಾಂಗಣಕ್ಕೆ ನೀರು ಸಿಂಪಡಿಸಲು ಸಂಪ್ ಹಾಗೂ ಸ್ಪಿಕ್ಲಿಂಗ್ ವ್ಯವಸ್ಥೆ, ಸ್ಕೇಟಿಂಗ್ ಮತ್ತು ಟೆನ್ನಿಸ್ ಅಂಕಣಗಳ ಸುತ್ತಲೂ ಗ್ರೀಲ್ ಪೇಟಿಂಗ್, ಕ್ರೀಡಾಂಗಣದ ಮುಖ್ಯ ದ್ವಾರ ಹಾಗೂ ಸೆಕ್ಯೂರಿಟಿ ಕೊಠಡಿ ದುರಸ್ತಿ ಕಾಮಗಾರಿಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಾಕೀರ್ ಅಹ್ಮದ್ ಹಾಗೂ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ತಿಮ್ಮೇಶ್ ಇದ್ದರು.