Advertisement

ಜನವಿಕಾಸ್‌ ಯೋಜನೆ ಸದ್ಬಳಕೆಯಾಗಲಿ

02:46 PM Oct 06, 2019 | Team Udayavani |

ಕೋಲಾರ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನವಿಕಾಸ್‌ ಯೋಜನೆಯಡಿ ಸಾಕಷ್ಟು ಸೌಕರ್ಯ ಕಲ್ಪಿಸುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸ ಆಗಬೇಕಾಗಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್‌ ವರ್ಗೀಸ್‌ ಕುರಿಯನ್‌ ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಅಲ್ಪಸಂಖ್ಯಾತರ ಇಲಾಖೆಯ ಸ್ಥಿತಿಗತಿಗಳ ಬಗ್ಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನ ಮಂತ್ರಿ ಜನವಿಕಾಸ್‌ ಯೋಜನೆಯನ್ನು ದೇಶದಲ್ಲಿ ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಇದನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಹೇಳಿದರು.

ಅಲ್ಪಸಂಖ್ಯಾತರ ಇಲಾಖೆಯಿಂದ ನಡೆಸಲಾಗುತ್ತಿರುವ ಶಾಲಾ ಕಾಲೇಜುಗಳಿಗೆ ಅವಶ್ಯಕವಾದ ಕಾಂಪೌಂಡ್‌, ಮೈದಾನ, ಸ್ಮಾರ್ಟ್‌ ತರಗತಿ ಸೇರಿದಂತೆ ವಿವಿಧ ಅವಶ್ಯಕ ಅನುಕೂಲ ಪಡೆದುಕೊಳ್ಳಲು ಅವಕಾಶವಿದೆ. ಹಾಗಾಗಿ ಇಲ್ಲಿನ ಅವಶ್ಯಕತೆಗಳ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟರೆ ಅದನ್ನು ಪರಿಶೀಲಿಸಿ ಅನುದಾನ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಸೂಕ್ತ ಮಾಹಿತಿ ನೀಡಿ: ಅಲ್ಪಸಂಖ್ಯಾತರು ಶೇ.25ಕ್ಕೂ ಹೆಚ್ಚು ಇರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಅವಶ್ಯಕವಾದ ಸೌಲಭ್ಯಗಳ ಕುರಿತು ಪಟ್ಟಿಯನ್ನು ಗ್ರಾಮ ಮಟ್ಟದಲ್ಲಿ ತಯಾರಿಸಿ ನಂತರ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಮೂಲಕ ರಾಷ್ಟ್ರಕ್ಕೆ ತಲುಪಿಸಬೇಕು. ಈ ಯೋಜನೆಯ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಾಗೃತಿ ಮೂಡಿಸಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಲ್ಪಸಂಖ್ಯಾತರ ಇಲಾಖೆಯಿಂದ ವಿದ್ಯಾರ್ಥಿ ವೇತನಗಳನ್ನು ನೀಡಲಾಗುತ್ತಿದೆ. ಅದರಂತೆ ದೇಶದಲ್ಲಿ 1 ಕೋಟಿ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ. ಕೆಲವರು ಸೂಕ್ತವಾಗಿ ಅರ್ಜಿಗಳನ್ನು ಹಾಕದೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಇಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಮುದಾಯದವರು ಹಾಗೂ ಅಧಿಕಾರಿಗಳು ಮಾಡಬೇಕೆಂದರು.

Advertisement

ಪ್ರಾಮಾಣಿಕ ಕೆಲಸ ಮಾಡಿ: ವಿವಿಧ ಇಲಾಖೆಗಳಲ್ಲಿ ಅಲ್ಪಸಂಖ್ಯಾತರಿಗೆ ಅನ್ವಯವಾಗುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಲಾಗುತ್ತಿರುವ ಯೋಜನೆಗಳು ಮತ್ತು ಅನುದಾನ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉದ್ಯೋಗಾಧಾರಿತ ತರಬೇತಿ ನೀಡಿ: ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಮಾತನಾಡಿ, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಯುವ ಸಮುದಾಯದವರಿಗೆ ಉದ್ಯೋಗಾಧಾರಿತ ತರಬೇತಿ ನೀಡುವ ಕಡೆ ಹೆಚ್ಚು ಗಮನಹರಿಸಬೇಕೆಂದು ಹೇಳಿದರು.

ಸಾರ್ವಜನಿಕರಿಗೆ ತಲುಪಿಸಿ: ಶ್ರೀನಿವಾಸಪುರ ಶಾಸಕ ಕೆ.ಆರ್‌. ರಮೇಶ್‌ಕುಮಾರ್‌ ಮಾತನಾಡಿ, ಸಮುದಾಯಗಳ ಅಭಿವೃದ್ಧಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಮೂಲಕ ಯಾವ ಅನುಕೂಲಗಳು, ಯೋಜನೆಗಳು ಹಾಗೂ ಅನುದಾನಗಳು ದೊರೆಯುತ್ತವೆಯೋ ಅವುಗಳನ್ನು ಪಡೆದುಕೊಂಡು ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.

ಹೆಚ್ಚು ಕಾಳವಹಿಸಿ: ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಅಲ್ಪಸಂಖ್ಯಾತರ ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದನ್ನು ಮೊಟಕುಗೊಳಿಸುತ್ತಾರೆ. ಇದರಿಂದ ಅವರಲ್ಲಿನ ಪ್ರತಿಭೆಗಳು ಹೊರ ಬರುತ್ತಿಲ್ಲ. ಹಾಗಾಗಿ ಇಂತಹ ಹೆಣ್ಣು

ಮಕ್ಕಳಿಗೆ ಶಿಕ್ಷಣವನ್ನು ನೀಡುವ ಕುರಿತು ಹೆಚ್ಚು ಕಾಳಜಿ ವಹಿಸಬೇಕಾಗಿದೆ ಎಂದು ವಿವರಿಸಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಯಶೋದಾ ಕೃಷ್ಣಮೂರ್ತಿ, ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಮಹಮದ್‌ಸುಜೀತಾ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next