Advertisement

ಕೃಷಿ ಅಭಿಯಾನ ಸದ್ಬಳಕೆ ಮಾಡಿಕೊಳ್ಳಿ

05:07 PM Jul 13, 2022 | Team Udayavani |

ನಾಗಮಂಗಲ: ಜು.12ರಿಂದ ಜು.26ರವರೆಗೆ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ನಡೆಯುವ ಕೃಷಿ ಅಭಿಯಾನದಲ್ಲಿ ರೈತರು, ಕೃಷಿಕರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿ ಕೃಷಿ ಮತ್ತು ಬೇಸಾಯಸಂಬಂಧಿತ ಪರಿಪೂರ್ಣ ಮಾಹಿತಿ ಪಡೆದು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಸುರೇಶ್‌ಗೌಡ ತಿಳಿಸಿದರು.

Advertisement

ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿತಾಲೂಕು ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇತರೆಇಲಾಖೆಗಳು ಮಂಗಳವಾರ ಆಯೋಜಿಸಿದ್ದ ಸಮಗ್ರಕೃಷಿ ಅಭಿಯಾನದ ಕೃಷಿ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರಿಗೆ ಸಮಗ್ರ ಕೃಷಿ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ರೈತರಿಗೆ ಮಾಹಿತಿ: ವಿವಿಧ ಇಲಾಖೆಗಳಲ್ಲಿ ಸರ್ಕಾರದ ಅನೇಕ ಸೌಲಭ್ಯ ರೈತರಿಗೆ ಲಭ್ಯವಿವೆ. ಆದರೆ, ಅವುಗಳ ಮಾಹಿತಿ ಸರಿಯಾಗಿ ರೈತರಿಗೆ ತಲುಪುತ್ತಿಲ್ಲ. ಇಲಾಖೆಗಳಲ್ಲಿ ರೈತರಿಗೆ ಸಿಗುವ ಉಚಿತ ಸವಲತ್ತು, ಸಾಲ ಸೌಲಭ್ಯ, ಸಹಾಯ ಧನ, ಬಿತ್ತನೆ ಬೀಜ, ತಳಿ, ಮಾರ್ಕೆ ಟಿಂಗ್‌ ವ್ಯವಸ್ಥೆ ಬಗ್ಗೆ, ಬೆಳೆ ಬೆಳೆಯುವ ಹಾಗೂ ಹೆಚ್ಚು ಉತ್ಪಾದಿಸುವ ತಾಂತ್ರಿಕತೆ, ಭೂಮಿ ಸತ್ವವನ್ನೊಳಗೊಂಡ ಸಮಗ್ರ ಮಾಹಿತಿ ಕುರಿತು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.

ಬೆಳೆ ವಿಮೆ ಮಾಡಿಸಿಕೊಳ್ಳಿ: ಪ್ರಸಕ್ತ ಸಾಲಿನಲ್ಲಿ ಈವರೆಗೂ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಮುಂದಿನ ಮೂರು ತಿಂಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ರೈತರು ಕೃಷಿ ಸಂಬಂಧಿತ ಇಲಾಖೆಯಲ್ಲಿ ದೊರಕುವ ಅಗತ್ಯ ಪರಿಕರ ಪಡೆದುಕೊಂಡು ಆಧುನಿಕ ಕೃಷಿತಂತ್ರಜ್ಞಾನ ಪದ್ಧತಿ ಅನುಸರಿಸಬೇಕು. ಅಲ್ಲದೇ, ಅಧಿಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಸೂಕ್ತ ಬೆಳೆ ಬೆಳೆಯಲು ಮುಂದಾಗಬೇಕು. ಜತೆಗೆ ಪ್ರತಿಯೊಬ್ಬ ರೈತರೂ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ತಾಲೂಕಿನ ವಿವಿಧ ಗ್ರಾಮಗಳ ಅರ್ಹ ರೈತ ಫ‌ಲಾನುಭವಿಗಳಿಗೆ ರಿಯಾಯ್ತಿ ದರದಲ್ಲಿ ಟಾರ್ಪಲ್‌, ಔಷಧಿ ಸಿಂಪರಣಾ ಯಂತ್ರ ಮತ್ತು ಬಿತ್ತನೆ ರಾಗಿ ವಿತರಣೆ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ತಹಶೀಲ್ದಾರ್‌ ನಂದೀಶ್‌, ಜಂಟಿ ಕೃಷಿ ನಿರ್ದೇಶಕ ಅಶೋಕ್‌, ಪಾಂಡವಪುರ ಉಪ ಕೃಷಿ ನಿರ್ದೇಶಕಿ ಎಚ್‌.ಎನ್‌.ಮಮತಾ, ತಾಪಂ ಇಒ ಚಂದ್ರಮೌಳಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಯರಾಮು, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಶಾಂತಾ, ಸಿಡಿಪಿಒ ಎಚ್‌.ಕೆ.ರಾಜನ್‌, ಎಲ್ಲಾ ಹೋಬಳಿಯ ಕೃಷಿ ಅಧಿಕಾರಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು, ಮುಖಂಡರು ಉಪಸ್ಥಿತರಿದ್ದರು.

ಸಮಸ್ಯೆಗೆ ಪರಿಹಾರ :

ಪ್ರಸ್ತುತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೃಷಿಅಭಿಯಾನ ನಡೆಯುತ್ತಿದೆ. ಕೃಷಿ ಮಾಹಿತಿಅಭಿಯಾನ ರಥ ಎಲ್ಲಾ ಹೋಬಳಿಯ ಎಲ್ಲಾ  ಗ್ರಾಪಂಗಳಲ್ಲಿ ಸಂಚರಿಸಿ, ರೈತರಿಗೆ ಸಮಗ್ರಮಾಹಿತಿ ನೀಡುವುದಲ್ಲದೆ ಸ್ಥಳದಲ್ಲೇ ಕೆಲವುಸಮಸ್ಯೆ ಪರಿಹರಿಸಲಾಗುವುದು. ಇದೇ ಸಂದರ್ಭಗಳಲ್ಲಿ ವಿಚಾರ ಸಂಕಿರಣ ನಡೆಯಲಿದ್ದು, ರೈತರು ಉದಾಸೀನ ಮಾಡದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಲಾಖೆಗಳುನೀಡುವ ಮಾಹಿತಿಯನ್ನು ಕೃಷಿಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಸುರೇಶ್‌ ಗೌಡ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next