ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಅರ್ಧದಷ್ಟು ಮಂದಿಗೆ ಸೂಕ್ತ ಚಿಕಿತ್ಸೆ ಸೌಲಭ್ಯಗಳನ್ನು ನೀಡದೇ ಅಲೆದಾಡಿಸುತ್ತಾರೆ ಎಂಬ ಆರೋಪವಿದ್ದು, ಇನ್ನು ಮುಂದಾದರೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಶ್ರದ್ಧೆ ಹಾಗೂ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವಿಕ್ಟೋರಿಯ ಆಸ್ಪತ್ರೆಯ ಆವರಣದಲ್ಲಿ ಬುಧವಾರ ನಡೆದ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಒಳರೋಗಿ ಕಟ್ಟಡದ ಶಂಕು ಸ್ಥಾಪನೆ ಹಾಗೂ ವಿವಿಧ ನೂತನ ಘಟಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಬಹುತೇಕ ಬಡ ಮತ್ತು ಮಧ್ಯಮ ವರ್ಗವು ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದು, ಅವರಿಗೆ ಗುಣಮಟ್ಟದ ಚಿಕಿತ್ಸೆ ಅವಶ್ಯಕತೆ ಇದೆ. ಆದರೆ, ಸರ್ಕಾರಿ ಆಸ್ಪತ್ರೆಗೆ ಬಂದು ಹೋಗುವವರಿಗೆ ಪ್ರಶ್ನೆ ಮಾಡಿದಾಗ ನೂರಕ್ಕೆ ಐವತ್ತು ಮಂದಿ ಒಂದಲ್ಲ ಒಂದು ರೀತಿ ಕಿರುಕುಳ ಅನುಭವಿಸಿ, ಸೌಲಭ್ಯ ಸಿಗದಿರುವ ಕುರಿತು ದೂರುತ್ತಾರೆ. ಒಟ್ಟಾರೆ ಸರ್ಕಾರಿ ಆಸ್ಪತ್ರೆಯಲ್ಲಿ ಹಣ ಇಲ್ಲದೇ ಏನು ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಗೆ ಬಂದಿದ್ದು, ಈ ವಿದ್ಯಮಾನ ಯಾರಿಗೂ ಶೋಭೆ ತರುವುದಿಲ್ಲ. ಇನ್ನು ಮುಂದಾದರೂ ಆಸ್ಪತ್ರೆ ಸಿಬ್ಬಂದಿ ವರ್ಗವು ಚಿಕಿತ್ಸೆಗಾಗಿ ಬರುವವರಿಗೆ ಕಿರುಕಳ ಕೊಡದೇ ಸೂಕ್ತ ಚಿಕಿತ್ಸೆ ಸೌಲಭ್ಯ ನೀಡಿ, ಸರ್ಕಾರಿ ಆಸ್ಪತ್ರೆಗೆ ಬಂದಿದಕ್ಕೆ ಸಾರ್ಥಕವಾಯಿತು ಎಂಬ ಭಾವ ಮೂಡುವಂತೆ ಕಾರ್ಯನಿರ್ವಹಿಸಿ ಎಂದರು.
ಕರ್ನಾಟಕದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ವಿದೇಶದಲ್ಲಿ ಹೆಸರು ಮಾಡಿವೆ. ಆ ಪೈಕಿ ಬೆಂಗಳೂರು ವೈದ್ಯಕೀಯ ವಿವಿಯ ಸಂಸ್ಥೆ ಒಂದಾಗಿದೆ. ವಿಕ್ಟೋರಿಯಾವು ರಾಜ್ಯದ ಹಳೆ ಆಸ್ಪತ್ರೆ ಎಂಬ ಖ್ಯಾತಿ ಪಡೆದಿದ್ದು, ಜತೆಗೆ ಆಧುನಿಕ ಕ್ಯಾನ್ಸರ್ ಚಿಕಿತ್ಸಾ ಘಟಕ, ಚರ್ಮ ಕಸಿ ಬ್ಯಾಂಕ್ ಸ್ಥಾಪಿಸಲಾಗಿದೆ. ಮಿಟೋ ಕಣ್ಣಿನ ಆಸ್ಪತ್ರೆಯಲ್ಲಿ ಲ್ಯಾಸಿಕ್ ಸರ್ಜರಿಯಂತಹ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯ ಲಭ್ಯವಿದೆ. ಇನ್ನಷ್ಟು ರೋಗಿಗಳಿಗೆ ಅನುಕೂಲವಾಗಲಿದೆ ಎಂದು 68.53 ಕೋಟಿ ರೂ.ವೆಚ್ಚದಲ್ಲಿ ಒಂದು ಸಾವಿರ ಹಾಸಿಗೆಯುಳ್ಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, 2021ಕ್ಕೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದರು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕೂಡಲೇ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಎರಡೂವರೆ ಸಾವಿರ ಕೋಟಿ ಮಂಜೂರು ಮಾಡಿದ್ದಾರೆ. ರಾಜ್ಯದಲ್ಲಿ ನಾಲ್ಕು ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಿದ್ದಾರೆ. ಜತೆಗೆ ಕಾರವಾರ, ಮೈಸೂರು, ಕೊಡಗು, ತುಮಕೂರು, ರಾಯಚೂರು ಜಿಲ್ಲಾಸ್ಪತ್ರೆಗಳಿಗೆ ಸಾಕಷ್ಟು ಅನುದಾನ ನೀಡುವ ಮೂಲಕ ಉನ್ನತೀಕರಿಸಿದ್ದಾರೆ ಎಂದರು.
ನಗರದ ಜನತೆಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ವಿಕ್ಟೋರಿಯಾ ಆವರಣದಲ್ಲಿ ಒಂದು ಸಾವಿರ ಹಾಸಿಗೆಗಳನ್ನು ಕಟ್ಟಡದ ಶಂಕುಸ್ಥಾಪನೆ ಮಾಡಲಾಗಿದೆ. ಕ್ರೀಡಾ ವೈದ್ಯಕೀಯ ವಿಧಾನ ವಿಭಾಗ ಸೇರಿದಂತೆ ವಿವಿಧ ರೀತಿಯ ಹೊಸ ವಿಭಾಗಗಳನ್ನು ಆರಂಭಿಸಲಾಗಿದೆ. ವಿಕ್ಟೋರಿಯ ಸಮುತ್ಛಯ ಆಸ್ಪತ್ರೆಗಳು ಮುಂದಿನ ಒಂದು ವರ್ಷದಲ್ಲಿ ಎನ್‌ಎಬಿಎಚ್‌ಯಿಂದ (ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಪೂರೈಕೆದಾರರ ರಾಷ್ಟ್ರೀಯ ಮಾನ್ಯತಾ ಸಂಸ್ಥೆ) ಮಾನ್ಯತೆ ಪಡೆಯುವ ಮೂಲಕ ಮಾದರಿಯಾಬೇಕು.
ಈ ನಿಟ್ಟಿನಲ್ಲಿ ಆಸ್ಪತ್ರೆ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಉನ್ನತ ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು. ಶಾಸಕ ಉದಯ್ ಗರುಡಾಚಾರ್, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ವಿಧಾನಪರಿಷತ್ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಆರೋಗ್ಯ ಇಲಾಖೆ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ್ ಗಾಂಧಿ ವಿವಿ ಕುಲಪತಿ ಡಾ.ಸಚ್ಚಿದಾನಂದ ಮತ್ತಿತರಿದ್ದರು.
ವೇದಿಕೆ ಏರದ ಜಮೀರ್: ಮೊದಲು ಶಂಕು ಸ್ಥಾಪನೆ ವೇಳೆ ಇದ್ದ ಜಮೀರ್ ಅವರು ವೇದಿಕೆಗೆ ಆಗಮಿಸದೆ ಕಾರ್ಯಕ್ರಮದಿಂದ ತೆರಳಿದರು. ಇದಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಯಾವುದೇ ಜಾಹೀರಾತು ಫಲಕಗಳಲ್ಲಿ ತಮ್ಮ ಭಾವಚಿತ್ರ ಹಾಕಿರಲಿಲ್ಲ ಎಂದು ಸಿಟ್ಟಾಗಿ, ಜಮೀರ್ ಅಹ್ಮದ್ ಖಾನ್ ಹೊರ ನಡೆದರು ಎಂದು ತಿಳಿದುಬಂದಿದೆ.