ಧಾರವಾಡ: ಇಂದಿನ ಆಧುನಿಕತೆಯ ಜೀವನದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ಮಾನಸಿಕ, ದೈಹಿಕ ಸದೃಢತೆ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರಲಾಲ ಆರ್ಯ ಹೇಳಿದರು. ನಗರದ ಚರಂತಿಮಠ ಗಾರ್ಡನ್ ದಲ್ಲಿರುವ ಬನಶಂಕರಿ ಭವನದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಂಡ ಪೂರ್ವ ಯೋಗ ಶಿಬಿರವನ್ನು ಯೋಗ ಕಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ನಿತ್ಯ ಯೋಗಾಸನ ಮಾಡಲೇಬೇಕು. ಹೀಗಾಗಿ ಪತಂಜಲಿ ಸಮಿತಿ ವತಿಯಿಂದ ಉಚಿತವಾಗಿ ಯೋಗಾಸನ ಹೇಳಿ ಕೊಡಲಾಗುತ್ತಿದ್ದು, ಆಸಕ್ತರು ಕಲಿತು ತಮ್ಮ ಜೀವನದಲ್ಲಿ ಯೋಗ ಅಳವಡಿಸಿಕೊಂಡು ಆರೋಗ್ಯದಿಂದ ಜೀವನ ಸಾಗಿಸಬೇಕು ಎಂದರು.
ಪಾಲಿಕೆ ಸದಸ್ಯ ಶಂಕರ ಶೇಳಕೆ ಮಾತನಾಡಿ, ಪ್ರತಿಯೊಬ್ಬರು ನಿತ್ಯ ಆಹಾರ ವಿಹಾರದ ಕ್ರಮ ಅನುಸರಿಸಿ ರೋಗದಿಂದ ದೂರವಿದ್ದರೆ ಅದೇ ಒಂದು ಸುಯೋಗವಾಗಲಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ 25ಕ್ಕೂ ಹೆಚ್ಚು ಜನ ಯುವಕ-ಯುವತಿಯರನ್ನು ಹರಿದ್ವಾರಕ್ಕೆ ಕಳುಹಿಸಿತ್ತು. ಅಲ್ಲಿ ಅವರು ಯೋಗ ಕಲಿತು ಇಲ್ಲಿನ ಜನಕ್ಕೆ ಯೋಗಾಭ್ಯಾಸ ಹೇಳಿಕೊಡಲು ಇದೀಗ ಸಜ್ಜಾಗಲಿದ್ದಾರೆ ಎಂದರು.
ಬನಶಂಕರಿ ಭವನ ಅಧ್ಯಕ್ಷ ಶಿವಾನಂದ ಲೋಲೆನವರ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಜಿಲ್ಲಾ ಪ್ರಭಾರಿ ರಮೇಶ ಸುಲಾಖೆ, ಮಹಿಳಾ ಪ್ರಭಾರಿ ಶೈಲಜಾ ಮಾಡಿಕ, ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಜಿಲ್ಲಾ ಪ್ರಚಾರಕ ಬಸವರಾಜ ಹಿರೇಮಠ, ಸವಿತಾ ಅಮರಶೆಟ್ಟಿ, ಭಾರತ ಸ್ವಾಭಿಮಾನ ಟ್ರಸ್ಟ್, ಧಾರವಾಡ ಜಿಲ್ಲಾ ಪ್ರಭಾರಿ ಎಂ.ಡಿ.ಪಾಟೀಲ, ಬಸವರಾಜ ಮುಮ್ಮಿಗಟ್ಟಿ, ವೀರಣ್ಣ ಗಟಿಗೆಣ್ಣವರ, ತನುಜಾ ಪಾಟೀಲ, ಛಾಯಾ ಸುರೇಬಾನ, ನಾಗರತ್ನಾ ಸುಲಾಖೆ, ಸುಮಂಗಲಾ ಹೊನ್ನಾಪುರಮಠ ಇದ್ದರು.