Advertisement

ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌ , ಬಂಟಿಂಗ್ಸ್ ಗಳಿಗೆ ಬೀಳಲಿ ಕಡಿವಾಣ

01:02 PM Aug 05, 2018 | |

ಮಂಗಳೂರು ನಗರ ಸ್ಮಾರ್ಟ್‌ ಸಿಟಿಯಾಗುತ್ತಿದೆ. ಸ್ಮಾರ್ಟ್‌ ಪರಿಕಲ್ಪನೆ ನಗರ ನಿರ್ವಹಣೆಯ ಎಲ್ಲ ವ್ಯವಸ್ಥೆಗಳಲ್ಲೂ ಅಳವಡಿಕೆಯಾದಾಗ ಇದರ ಉದ್ದೇಶ ಸಾಕಾರಗೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಗರಗಳ ಸುವ್ಯವಸ್ಥೆಗೆ ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌ , ಬಂಟಿಂಗ್ಸ್‌, ಜಾಹೀರಾತು ಫಲಕ, ಭಿತ್ತಿಪತ್ರಗಳು ಸವಾಲು ಆಗಿ ಪರಿಣಮಿಸುತ್ತಿವೆ. ಕರ್ನಾಟಕ ಹೈಕೋರ್ಟ್‌ ಕೂಡ ಬೆಂಗಳೂರಿನಲ್ಲಿ ಇದರ ವಿರುದ್ಧ ಕಾರ್ಯಾಚರಣೆಗೆ ಆದೇಶ ನೀಡಿದೆ. ಮಂಗಳೂರಿನಲ್ಲೂ ಇದರ ನಿಯಂತ್ರಣದ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳಾಗುವುದು ಅವಶ್ಯ.

Advertisement

ಹೈಕೋರ್ಟ್‌ನ ಕಟ್ಟುನಿಟ್ಟಿನ ಆದೇಶಕ್ಕೆ ಎಚ್ಚೆತ್ತುಕೊಂಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌ಗಳು, ಬಂಟಿಂಗ್ಸ್‌, ಜಾಹೀರಾತು ಫಲಕಗಳ ಹಾವಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಸಾರ್ವಜನಿಕ ಮತ್ತು ವೈಯುಕ್ತಿಕ ಜಾಹೀರಾತುಗಳು, ಶುಭಾಶಯಗಳು ಮತ್ತು ಸಭೆ ಸಮಾರಂಭಗಳ ಕುರಿತು ಜಾಹೀರಾತು/ ಪ್ರಕಟನೆಗಳ ಫ್ಲೆಕ್ಸ್‌ , ಬ್ಯಾನರ್, ಬಂಟಿಂಗ್ಸ್‌, ಭಿತ್ತಿಪತ್ರ, ಬಾವುಟಗಳ ಪ್ರದರ್ಶನಗಳನ್ನು ನಿಷೇಧಿಸಿ ಪ್ರಕಟನೆ ಹೊರಡಿಸಿದೆ. ಉಲ್ಲಂಘನೆ ವಿರುದ್ಧ ಸೂಕ್ತ ಕಾನೂನು ಕ್ರಮ ಸಹಿತ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿದೆ. ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್‌, ಫ್ಲೆಕ್ಸ್‌ಗಳು, ಬಂಟಿಂಗ್ಸ್‌, ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಆರಂಭಿಸಿದೆ. ಇದೇ ರೀತಿಯ ಕಟ್ಟುನಿಟ್ಟಿನ ಕ್ರಮಗಳು ಮಂಗಳೂರು ಮಹಾನಗರದಲ್ಲೂ ಅಪೇಕ್ಷೆಣೀಯವಾಗಿದೆ.

ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌ಗಳು, ಬಂಟಿಂಗ್ಸ್‌, ನಗರದಲ್ಲಿ ಸಂಚಾರ ವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುತ್ತಿವೆ. ಅಪಘಾತಗಳಿಗೂ ಕಾರಣವಾಗುತ್ತಿವೆ. ಕಾನೂನು ಸುವ್ಯವಸ್ಥೆಗೆ ಭಂಗತರುತ್ತಿವೆ. ಪರಿಸರಕ್ಕೆ ಮಾರಕವಾಗುತ್ತಿವೆ ಮಾತ್ರವಲ್ಲದೆ ನಗರದ ಸೌಂದರ್ಯವನ್ನು ಹಾಳುಗೆಡವುತ್ತಿವೆ. ಇವುಗಳ ನಿಯಂತ್ರಣಕ್ಕೆ ಈಗಾಗಲೇ ಕಾನೂನುಗಳು ಇವೆ. ಆದರೆ ಅವುಗಳ ಅನುಷ್ಠಾನದಲ್ಲಿ ವಿಫಲತೆ, ಪಾಲನೆಯ ನಿಟ್ಟಿನಲ್ಲಿ ಜಾಗೃತಿಯ ಕೊರತೆ, ಪ್ರಭಾವಿಗಳ ಹಸ್ತಕ್ಷೇಪದಿಂದ ಕಾನೂನು ಶಕ್ತಿಗುಂದಿದೆ.

ಯಾವುದೋ ಒಂದು ಸಂಘ, ಸಂಸ್ಥೆ, ರಾಜಕೀಯ ಪಕ್ಷಗಳ ಹುದ್ದೆಗಳಿಗೆ ಆಯ್ಕೆಯಾದರೆ, ಸಮ್ಮೇಳನ, ಸಮಾವೇಶ, ಕೂಟಗಳು ಆಯೋಜನೆಗೊಳ್ಳುತ್ತಿವೆಯಾದರೆ ಇವುಗಳ ಅಳೆತ್ತರದ ಫ್ಲೆಕ್ಸ್‌ಗಳು, ಹಲವು ಮೀಟರ್‌ಗಳ ಬ್ಯಾನರ್‌ಗಳು ನಗರದಾದ್ಯಂತ ತಲೆ ಎತ್ತುತ್ತವೆ. ರಾಜಕೀಯ ಪಕ್ಷಗಳ, ಸಂಘಟನೆಗಳ ಸಮಾವೇಶಗಳು ಆಯೋಜನೆಗೊಂಡರೆ ಕಿಲೋ ಮೀಟರ್‌ ಉದ್ದದ ಬಂಟಿಂಗ್ಸ್‌ಗಳು, ಪತಾಕೆಗಳು ರಸ್ತೆಗಳ ವಿಭಾಜಕಗಳಲ್ಲಿ, ಇಕ್ಕೆಲಗಳಲ್ಲಿ ಹಾಕಲಾಗುತ್ತಿದೆ. ಕಾರ್ಯಕ್ರಮ ಮುಗಿದ ಬಳಿಕವೂ ಬಹಳಷ್ಟು ಸಮಯ ಅಲ್ಲೇ ಉಳಿದು ಬಿಡುತ್ತವೆ. ಇವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆಗೊಮ್ಮೆ ಈಗೊಮ್ಮೆ ನಡೆಯುತ್ತೆ ಹೊರತು ಇದರ ನಿರಂತರ ಫಾಲೋಅಪ್‌ ಆಗುತ್ತಿಲ್ಲ. 

ಶಿಕ್ಷಾರ್ಹ ಅಪರಾಧ
ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌ಗಳು, ಬಂಟಿಂಗ್ಸ್‌, ಜಾಹೀರಾತು ಫಲಕ, ಭಿತ್ತಿಪತ್ರಗಳನ್ನು ಅಳವಡಿಸುವುದು ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಶನ್‌ ಕಾಯ್ದೆ 1976 ಮತ್ತು ಕರ್ನಾಟಕ ಓಪನ್‌ ಪ್ಲೇಸಸ್‌ ( ಪ್ರಿವೆನ್ಷನ್‌ ಆಫ್‌ ಡಿಸಿಫಿಗರ್‌ವೆುಂಟ್‌) ಆ್ಯಕ್ಟ್ 1981 ರ ಕಲಂ (3) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕರ್ನಾಟಕ ಸರಕಾರದ ಪರಿಸರ ( ಸಂರಕ್ಷಣೆ) ಕಾಯಿದೆ 1986 ರ ಸೆಕ್ಷನ್‌ 5 ರ ಅಡಿಯಲ್ಲಿ ಪ್ಲಾಸ್ಟಿಕ್‌ ಬಳಕೆಗೂ ನಿಷೇಧವಿದೆ. ಆದರೆ ಚುನಾವಣೆಗಳ ವೇಳೆ ನೀತಿ ಸಂಹಿತೆ ಜಾರಿಯಾದ ಸಂದರ್ಭಗಳಲ್ಲಿ ಮಾತ್ರ ಈ ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನವಾಗುತ್ತಿದೆ. ಉಳಿದ ಸಂದರ್ಭಗಳಲ್ಲಿ ಜಾಣ ಕುರುಡು ನೀತಿಯನ್ನು ಅನುಸರಿಸಲಾಗುತ್ತಿದೆ.

Advertisement

ಕಾನೂನು ಸುವ್ಯವಸ್ಥೆಗೂ ಭಂಗ
ನಗರದಲ್ಲಿ ಅಧಿಕೃತ ಅನುಮತಿ ಪಡೆಯದೆ ಮನಸೋಇಚ್ಛೆ ಫ್ಲೆಕ್ಸ್‌ , ಬ್ಯಾನರ್‌, ಬಂಟಿಂಗ್ಸ್‌ಗಳು ಅಳವಡಿಕೆ ಅನೇಕ ಬಾರಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿರುವಂತಹ ಹಲವು ಘಟನೆಗಳು ಸಂಭವಿಸಿವೆ. ಕೆಲವು ಬಾರಿ ಫ್ಲೆಕ್ಸ್‌ , ಬ್ಯಾನರ್‌ಗಳ ಅಳವಡಿಕೆಗೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತವೆ. ಸಂಘರ್ಷಗಳು ನಡೆದು ಅಹಿತಕಾರಿ ಘಟನೆಗಳಿಗೂ ಕಾರಣವಾಗಿವೆ.

ಪ್ರಸ್ತುತ ಡಿಜಿಟಲ್‌ ಯುಗ. ಪ್ರಚಾರ ಹಾಗೂ ಮಾಹಿತಿ ಪ್ರಸಾರಕ್ಕೆ ವಿದ್ಯುನ್ಮಾನ ವ್ಯವಸ್ಥೆಗಳಿವೆ. ಸಾಮಾಜಿಕ ಜಾಲತಾಣಗಳು ಪ್ರಚಾರಕ್ಕೆ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿ ಈಗಾಗಲೇ ರೂಪುಗೊಳ್ಳುತ್ತಿದೆ. ಈ ಹಿಂದಿನಂತೆ ಫ್ಲೆಕ್ಸ್‌, ಬ್ಯಾನರ್‌ ಗಳನ್ನು ನೆಚ್ಚಿಕೊಳ್ಳುವ ಅನಿವಾರ್ಯತೆ ಇಲ್ಲ. ಹಾಕಲೇ ಬೇಕಾದ ಅನಿವಾರ್ಯತೆ ಇದ್ದರೆ ಸಮಾವೇಶಗಳು, ಸಮಾರಂಭಗಳು ನಡೆಯುವ ತಾಣಗಳಲ್ಲಿ ನಿಯಮಿತ ಸಂಖ್ಯೆಗಳಲ್ಲಿ ಅಳವಡಿಸಬಹುದಾಗಿದೆ. 

ರಾಶಿ ಹಾಕಿರುವ ಫ್ಲೆಕ್ಸ್‌, ಬಂಟಿಂಗ್ಸ್‌, ಬ್ಯಾನರ್‌ ಗಳು
ಅನಧಿಕೃತ ಬ್ಯಾನರ್‌, ಫ್ಲೆಕ್ಸ್‌ , ಬಂಟಿಂಗ್ಸ್‌, ಜಾಹೀರಾತು ಫಲಕ, ಭಿತ್ತಿಪತ್ರಗಳ ಅಳವಡಿಕೆ ವಿರುದ್ಧ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಶನ್‌ ಕಾಯ್ದೆ 1976ರ ಮತ್ತು ಕರ್ನಾಟಕ ಓಪನ್‌ ಪ್ಲೇಸಸ್‌ ( ಪ್ರಿವೆನ್ಷ ನ್‌ ಆಫ್‌ ಡಿಸಿಫಿಗರ್‌ವೆುಂಟ್‌) ಆ್ಯಕ್ಟ್ 1981 ರ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿ 6 ತಿಂಗಳವರೆಗೆ ಕಾರಾಗೃಹ ವಾಸ ಅಥವಾ 1000 ರೂ. ವರೆಗೆ ದಂಡ ವಿಧಿಸಲು ಅಥವಾ ಕಾರಾಗೃಹವಾಸದೊಂದಿಗೆ ದಂಡ ವಿಧಿಸಲು ಅವಕಾಶವಿದೆ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next