ಗದಗ: ಸರಕಾರಿ ಭೂಮಿಯಲ್ಲಿ ಅಕ್ರಮ ಸಾಗುವಳಿದಾರರುಫಾರ್‌ಂ 57ರಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಕಂದಾಯ ಇಲಾಖೆ ಅವಕಾಶ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಗುರುವಾರ ಪ್ರತಿಭಟನಾ ಧರಣಿ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ, ದೇಶದ ಸಂವಿಧಾನ ಅಪಾಯದ ಅಂಚಿನಲ್ಲಿದೆ. ದೇಶದಲ್ಲಿ ಕೋಮುವಾದ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ದಲಿತರು ಹಾಗೂ ಅಲ್ಪಸಂಖ್ಯಾತರು ಜೀವ ಭಯದಲ್ಲೇ ದಿನ ಕಳೆಯುವಂತಾಗಿದೆ. ಕಾಶ್ಮೀರದಲ್ಲಿ ಎಲ್ಲ ಮುಖಂಡರನ್ನು ಬಂಧನದಲ್ಲಿಟ್ಟು 370ನೇ ವಿಧಿ ಹೇಗೆ ರದ್ದು ಪಡಿಸಿದರೋ ಹಾಗೆ ಮುಂದೋಂದು ದಿನ ದಲಿತರ ಪರವಾದ ಕಾನೂನುಗಳನ್ನು, ಸಂವಿಧಾನವನ್ನು ಬದಲಾವಣೆ ಮಾಡುವುದರಲ್ಲಿ ಅನುಮಾನ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ದಲಿತರ ಪರ ಕಾನೂನುಗಳು ಸಡಿಲಗೊಳ್ಳುತ್ತಿದ್ದು, ಸಂವಿಧಾನ ಉಳಿಸಲು ದೇಶದ ದಲಿತರು ಒಂದಾಗಬೇಕಿದೆ ಎಂದರು. ದಲಿತರ ಹಿರಕ್ಷಣೆಗೆ ಬದ್ಧವಾಗಿದ್ದರೆ, ತಕ್ಷಣವೇ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಎಲ್ಲ ನಿಗಮ ಮಂಡಳಿಗಳಿಗೆ ಸಾಲ ಮತ್ತು ಭೂ ಒಡೆತನಕ್ಕಾಗಿ ಸಲ್ಲಿಸಿರುವ ಅರ್ಹ ಅರ್ಜಿಗಳಿಗೆ ಮಂಜೂರಾತಿ ನೀಡಬೇಕು. ಆಯಾ ಕ್ಷೇತ್ರದ ಶಾಸಕರು ನೇತೃತ್ವದ ಆಯ್ಕೆಯ ಸಮಿತಿಯನ್ನು ರದ್ದುಗೊಳಿಸಿ, ಎಲ್ಲ ಯೋಜನೆಗಳನ್ನು ಏಕಗವಾಕ್ಷಿ ಮೂಲಕ ಅನುಷ್ಠಾನಕ್ಕೆ ತರಬೇಕು. ಪಿಟಿಸಿಎಲ್ ಕಾಯ್ದೆಯಡಿ ಭೂ ಮರು ಮಂಜೂರು ಅರ್ಜಿ ಸಲ್ಲಿಸಲು ಕಾಲಮಿತಿಯ ಬಗ್ಗೆ ಸರ್ವೋತ್ಛ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು.
ಖಾಸಗಿ ಕ್ಷೇತ್ರದ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಉತ್ಛ ನ್ಯಾಯಾಲಯ ಹಾಗೂ ಸರ್ವೋತ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳಿಗೆ ಒತ್ತಾಯಿಸಿದರು. ದಸಂಸ ಪ್ರಮುಖರಾದ ಎಫ್.ವೈ. ದೊಡ್ಡಮನಿ, ಅನಿಲ ದೊಡ್ಡಮನಿ, ಪ್ರಕಾಶ ಕೆಲೂರ, ಬಸವರಾಜ ಹೊಸಮನಿ, ವಿಜಯ ಮುಳಗುಂದ, ಮುತ್ತು ಬಿಳೆಯಲಿ, ರವಿ ಪೂಜಾರ ಇದ್ದರು.