Advertisement
ಯೋಜನೆಗೆ ಚಾಲನೆ ನೀಡಿದ ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ್, ವಿದ್ಯಾರ್ಥಿ ದೆಸೆ ಯಿಂದಲೇ ಮಕ್ಕಳನ್ನು ಪ್ರಜ್ಞಾವಂತ ಪ್ರಜೆ ಗಳನ್ನಾಗಿ ರೂಪಿಸುವ ಉದ್ದೇಶದಿಂದ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ದಿ| ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕನಸಿನಂತೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪ್ರಸ್ತಾವನೆಗೈದ ಮಂಗಳೂರಿನ ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್ ಕಮಾಂಡೆಂಟ್ ಹಾಗೂ ಯೋಜನೆಯ ಮಂಗಳೂರು ನೋಡಲ್ ಅಧಿಕಾರಿ ಜನಾರ್ದನ ಆರ್., ಈ ಯೋಜನೆ ಕೇರಳದಲ್ಲಿ ಪ್ರಥಮವಾಗಿ ಜಾರಿಗೆ ಬಂದಿದ್ದು, ರಾಜ್ಯದಲ್ಲಿ ಬೆಂಗಳೂರು ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ 2015ರಲ್ಲಿ ಆರಂಭವಾಗಿದೆ. ಈಗ ರಾಜ್ಯದ 97 ಶಾಲೆಗಳಲ್ಲಿ ಅನುಷ್ಠಾನದಲ್ಲಿದೆ. ದ.ಕ. ಜಿಲ್ಲೆಯಲ್ಲಿ ಕಳೆದ ವರ್ಷ 3 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಯೋಜನೆ ಅನುಷ್ಠಾನಿಸಲಾಯಿತು. ಈ ಸಾಲಿನಲ್ಲಿ ಜಿಲ್ಲೆಯಲ್ಲಿ 10 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಒಟ್ಟು 300 ಶಾಲೆಗಳಲ್ಲಿ ಈ ಯೋಜನೆ ಈ ವರ್ಷ ಜಾರಿಗೊಳ್ಳುತ್ತಿದೆ ಎಂದು ಹೇಳಿದರು.
Related Articles
ಬೈಕಂಪಾಡಿಯ ಕೇಂದ್ರೀಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ ನಂ-2 ಮಂಗಳೂರು, ಪುತ್ತೂರು ಕೊಂಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜು, ಸರಕಾರಿ ಪ.ಪೂ. ಕಾಲೇಜು ಸವಣೂರು, ಬಂಟ್ವಾಳ ತಾಲೂಕಿನ ಮಂಚಿ ಕೋಳ್ನಾಡು ಸರಕಾರಿ ಪ್ರೌಢಶಾಲೆ, ಸರಕಾರಿ ಪ.ಪೂ. ಕಾಲೇಜು ಕುರ್ನಾಡು, ಸುಳ್ಯ ತಾಲೂಕಿನ ಸರಕಾರಿ ಪ್ರೌಢ ಶಾಲೆ ಎಲಿಮಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಸರಕಾರಿ ಪ್ರೌಢಶಾಲೆ ಅಳಿಯೂರು ಮೂಡುಬಿದಿರೆಯಲ್ಲಿ ಸ್ಟೂಡೆಂಟ್ ಕೆಡೆಟ್ ಯೋಜನೆ ಆರಂಭಗೊಳ್ಳುತ್ತಿದೆ ಎಂದರು.
ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ| ವಿಕ್ರಂ ಅಮ್ಟೆ ಅವರು ವಿದ್ಯಾರ್ಥಿಗಳಿಗೆ ಕಿಟ್‌ಗಳನ್ನು ವಿತರಿಸಿದರು. ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎನ್.ಎಸ್. ಯಾದವ ಸ್ವಾಗತಿಸಿದರು.
Advertisement
ಮಂಗಳೂರಿನ ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್ ಸಹಾಯಕ ಕಮಾಂಡೆಂಟ್‌ಗಳಾದ ಶರತ್, ರಾಜು, ಅಧಿಕಾರಿಗಳಾದ ರಾಜು, ಪ್ರಮೋದ್ ಕುಮಾರ್, ಗಣೇಶ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ಅಧಿಕಾರಿ ರಾಜರಾಮ್ ಭಟ್ ವಂದಿಸಿದರು.
ಒಟ್ಟು 23 ತರಗತಿಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯಲ್ಲಿ ಹೊರಾಂಗಣ ಮತ್ತು ಒಳಾಂಗಣ ವಿಷಯಗಳ ಕುರಿತು ಪ್ರತಿತಿಂಗಳು ಮೂರು ತರಗತಿಗಳಂತೆ ಒಟ್ಟು 23 ತರಗತಿಗಳನ್ನು ನಡೆಸಲಾಗುತ್ತಿದೆ. ಶನಿವಾರ ತರಗತಿ ನಡೆಯುತ್ತದೆ. ಅಪರಾಧ ತಡೆಗಟ್ಟುವಿಕೆ ಮತ್ತು ನಿಯಂತ್ರಣ, ರಸ್ತೆ ಸುರಕ್ಷತೆ ಮತ್ತು ಸಂಚಾರ ಅರಿವು, ವಿಪತ್ತು ನಿರ್ವಹಣೆ, ತಾಳ್ಮೆ, ಸಹಿಷ್ಣುತೆ, ಹಿರಿಯರ ಬಗ್ಗೆ ಗೌರವ, ಭಾರತದ ಸಂವಿಧಾನ, ಬಾಲ ನ್ಯಾಯ ಕಾಯ್ದೆ-2000, ಸಮುದಾಯ ಪೊಲೀಸಿಂಗ್ ಮತ್ತು ವಿದ್ಯಾರ್ಥಿಗಳು, ಮಾನವ ಹಕ್ಕುಗಳು ಮತ್ತು ಸಂರಕ್ಷಣೆ, ನೈತಿಕ ಮೌಲ್ಯಗಳು, ಪ್ರಥಮ ಚಿಕಿತ್ಸೆ, ಸಾಮಾಜಿಕ ಪಿಡುಗುಗಳು, ದುಶ್ಚಟಗಳ ವಿರುದ್ದ ಹೋರಾಟ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.