Advertisement

ಆಯುರ್ವೇದ ಪದ್ಧತಿಯ ಜಾಗೃತಿ ಮೂಡಿಸಿ

06:58 AM Feb 17, 2019 | |

ದಾವಣಗೆರೆ: ಗ್ರಾಮೀಣ ಪ್ರದೇಶದ ಜನರ ಕೊಂಡಿಯಾಗಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು ಪುರಾತನ ಆಯುರ್ವೇದಿಕ್‌ ಪದ್ಧತಿ ಬಗ್ಗೆ ಸೂಕ್ತ ತರಬೇತಿ ಪಡೆದು ಜನಸಾಮಾನ್ಯರಿಗೆ ಮಾಹಿತಿ ನೀಡಿದಾಗ ಮಾತ್ರ ತರಬೇತಿ ಪಡೆದಿದ್ದಕ್ಕೂ ಸಾರ್ಥಕ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಹೇಳಿದರು.

Advertisement

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆಯುಷ್‌ ಇಲಾಖೆ ಸಂಯುಕ್ತಾಶ್ರಯದಲ್ಲಿ 2018-19ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಆಯುಷ್‌ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದದ ಮನೆಮದ್ದಿನ ಆಯುಷ್‌ ಚಿಕಿತ್ಸೆ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರು ಪಡೆಯಬೇಕು. ಆ ಮೂಲಕ ಗ್ರಾಮೀಣ ಮಹಿಳೆಯರು, ಜನರಿಗೆ ಉತ್ತಮ ಸೇವೆ, ಅರಿವು ಮೂಡಿಸಬೇಕು. ಆಗ ನಿಜಕ್ಕೂ ಸರ್ಕಾರದಿಂದ ಮಾಡುವ ಇಂತಹ ಕಾರ್ಯಕ್ರಮಗಳ ಉದ್ದೇಶ ಈಡೇರುತ್ತದೆ ಎಂದರು.

ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ನಾಟಿ ವೈದ್ಯರೇ ಹೆಚ್ಚಾಗಿರುತ್ತಿದ್ದರು. ಜೊತೆಗೆ ಜನರಿಗೂ ಸಣ್ಣ ಪುಟ್ಟ ಕಾಯಿಲೆಗೆ ಎಂತಹ ಗಿಡಮೂಲಿಕೆ ಬಳಸಬೇಕು ಎಂಬ ಜ್ಞಾನವಿತ್ತು. ಇಂದು ಎಲ್ಲದಕ್ಕೂ ಮೆಡಿಸಿನ್‌ ಮೊರೆ ಹೋಗುತ್ತಿರುವುದು ಹೆಚ್ಚಾಗಿದ್ದು, ಈ ರೀತಿಯ ಚಿಕಿತ್ಸೆ ವೆಚ್ಚದಾಯಕವಾದುದು. ಹಾಗಾಗಿ ಕಡಿಮೆ ಖರ್ಚಿನ ಮನೆಮದ್ದಾದ ಆಯುರ್ವೇದಿಕ್‌ ಚಿಕಿತ್ಸೆ ಬಗ್ಗೆ ಆಶಾ ಕಾರ್ಯಕರ್ತೆಯರು ತಿಳಿದುಕೊಳ್ಳಬೇಕು. 

ಗೊಂದಲವಿದ್ದಲ್ಲಿ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಜನರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ಜಾಗೃತರನ್ನಾಗಿಸಬೇಕು. ಆಗ ಇಂತಹ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಹೇಳಿದರು.

Advertisement

ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಬಸವರಾಜ್‌ ಮಾತನಾಡಿ, ಬ್ರಿಟೀಷರಿಂದ ಅಲೋಪತಿ ಚಿಕಿತ್ಸೆಯ ಪರಿಚಯವಾಗಿದೆ. ಇಂತಹ ಅಲೋಪತಿ ಚಿಕಿತ್ಸೆಯಿಂದ ದೈಹಿಕವಾಗಿ ಸಕಾರಾತ್ಮಕ ಪರಿಣಾಮಗಳಿಗಿಂತ ನಕಾರಾತ್ಮಕ ಪರಿಣಾಮಗಳೇ ಹೆಚ್ಚು. ಆದರೆ, ಪಾರಂಪರಿಕ ಆಯುಷ್‌ ಚಿಕಿತ್ಸೆಯು ನಮ್ಮ ಭಾರತೀಯ ಮೂಲ ವೈದ್ಯಕೀಯ ಪದ್ಧತಿಯಾಗಿದೆ ಎಂದರು.

ಜಿಲ್ಲಾ ಪಂಚಾಯತಿ ಸದಸ್ಯ ಓಬಳೇಶಪ್ಪ ಮಾತನಾಡಿ, ಸರ್ಕಾರ ಆಶಾ ಕಾರ್ಯಕರ್ತೆಯರ ಅಭಿವೃದ್ಧಿಗೆ ಈ ಬಾರಿ ಬಜೆಟ್‌ನಲ್ಲಿ ಸಹಾಯಧನವನ್ನು ಹೆಚ್ಚಿಸಿದೆ. ಹಾಗಾಗಿ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಉತ್ತಮ ಪಾತ್ರ
ವಹಿಸಬೇಕು ಎಂದರು. 

ಈಚೆಗೆ ವ್ಯಾಪಕವಾಗಿ ಆಶಾ ಕಾರ್ಯಕರ್ತೆಯರಲ್ಲೇ ಒಳಜಗಳ ನಡೆಯುತ್ತಿರುವ ಬಗ್ಗೆ ಸಾಕಷ್ಟು ಮಾಹಿತಿ ಕೇಳಿ ಬರುತ್ತಿದೆ. ಅದನ್ನು ಬಿಟ್ಟು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಆಯುಷ್‌ ಅಧಿಕಾರಿ ಡಾ| ಯು. ಸಿದ್ದೇಶ್‌ ಮಾತನಾಡಿ, ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಆಶಾ ಕಾರ್ಯಕರ್ತೆಯರು ಕೊಂಡಿ ಇದ್ದಂತೆ. ಆಯುರ್ವೇದ ಚಿಕಿತ್ಸೆ ಕುರಿತು ಜನರಿಗೆ ಸಮರ್ಪಕ ಮಾಹಿತಿ ನೀಡಿದರೆ ಅದನ್ನು ಜನರು ಒಪ್ಪಿಕೊಳ್ಳಲಿದ್ದಾರೆ. ಆಯುಷ್‌ ವೈದ್ಯಕೀಯ ಪದ್ಧತಿಯ ಪರಿಣಾಮಕಾರಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಸಚಿವರನ್ನೇ ನೇಮಿಸಿದೆ. ಎಲ್ಲಾ ರಾಜ್ಯಗಳು ಸಹ ಆಯುಷ್‌ ಇಲಾಖೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಹಾಯ ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌, ಸಂಪನ್ಮೂಲ ವ್ಯಕ್ತಿಗಳಾದ ಡಾ| ಸಿದ್ದೇಶ್‌ ಬಿಸ್ನೇಹಳ್ಳಿ, ಡಾ| ಶಂಕರಗೌಡ, ಡಾ| ಎಸ್‌.ಎಸ್‌. ಸುಚಿತ್ರ, ಡಾ| ಗಿರೀಶ್‌, ಡಾ| ರವಿರಾಜ್‌, ಡಾ| ಸೈಯದ್‌ ಸಂಶುದ್ದೀನ್‌, ಆರ್‌ಸಿಎಚ್‌ಓ ಈ. ಶಿವುಕುಮಾರ್‌, ಪಾಟೀಲ್‌ ಸೇರಿದಂತೆ 70ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಆಯುಷ್‌ ಇಲಾಖೆಯ ಈ ಯೋಜನೆ ಯಶಸ್ವಿಯಾಗುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ. ಇಲ್ಲಿ ತರಬೇತಿ ಪಡೆದು ತಮ್ಮ ಕ್ಷೇತ್ರದಲ್ಲಿನ ಜನರನ್ನು ಜಾಗೃತರನ್ನಾಗಿ ಮಾಡಿದಾಗ ಮಾತ್ರ ಈ ತರಬೇತಿ ಸಾರ್ಥಕವಾಗಲಿದೆ.
 ಡಾ| ತ್ರಿಪುಲಾಂಭ, ಡಿಎಚ್‌ಒ

Advertisement

Udayavani is now on Telegram. Click here to join our channel and stay updated with the latest news.

Next