Advertisement

ಯೋಜನೆಗಳ ಸಮರ್ಪಕ ಬಳಕೆಯಾಗಲಿ; ಸಂಸದೆ ಮಂಗಲಾ

06:25 PM Mar 08, 2022 | Team Udayavani |

ಬೆಳಗಾವಿ: ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಸರ್ಕಾರದ ಯೋಜನೆಗಳು ಸಮರ್ಪಕ ಬಳಕೆ ಆಗಬೇಕು. ಜಿಲ್ಲೆಯಲ್ಲಿ ಬಾಕಿ ಇರುವ ಎಲ್ಲಾ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದೆ ಮಂಗಲಾ ಅಂಗಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಯ 2021-22ನೇ ಸಾಲಿನ ಮೂರನೇ ತ್ತೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಯೋಜನೆಗಳಿಗೆ ಸರ್ಕಾರ ನೀಡಿದ ಅನುದಾನವನ್ನು ಸಮರ್ಪಕ ಬಳಕೆ ಮಾಡಬೇಕು ಎಂದರು.

ಪ್ರತಿ ಗ್ರಾಮಗಳಿಗೆ ಕುಡಿಯುವ ನೀರಿನ ಟ್ಯಾಂಕ್‌ ಗಳ ವ್ಯವಸ್ಥೆ ಕಲ್ಪಿಸಬೇಕು ಹಾಗೂ ದುರಸ್ತಿ ಹಂತದಲ್ಲಿ ಇರುವ ನೀರಿನ ಟ್ಯಾಂಕ್‌ ಗಳ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಗ್ರಾಮದ ಪ್ರತಿ ಮನೆಗೆ ನೀರು ಸರಬರಾಜು ಮಾಡಲು ತೊಂದರೆ ಆಗಬಾರದು. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಎಲ್ಲಾ ಮನೆಗಳಿಗೂ ಕುಡಿಯುವ ನೀರು ದೊರಕಬೇಕು. ನೀರಿನ ಟ್ಯಾಂಕ್‌, ಪೈಪ್‌ ಲೈನ್‌ ಸೇರಿದಂತೆ ಬಾಕಿ ಇರುವ ದುರಸ್ತಿ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಎಲ್ಲಾ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಬ್ಸಿಡಿ ಸಿಲಿಂಡರ್‌ ಒದಗಿಸಬೇಕು. ಈಗಾಗಲೇ ಸಿಲಿಂಡರ್‌ ಪಡೆಯಲು ಸಾಕಷ್ಟು ಬೇಡಿಕೆಯಿದ್ದು, ಅರ್ಹ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಿಲಿಂಡರ್‌ ನೀಡಬೇಕು ಎಂದು ಮಂಗಲಾ ಅಂಗಡಿ ಸೂಚನೆ ನೀಡಿದರು.

ಸ್ಮಾರ್ಟ್‌ ಸಿಟಿ ಮಿಷನ್‌ ಅಡಿಯಲ್ಲಿ 930 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ 392 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 396.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿಗಳಿಗೆ ಒಟ್ಟು 647.53 ಕೋಟಿ ಅನುದಾನವನ್ನು ಖರ್ಚು ಮಾಡಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ವಿವರಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಸ್ಮಾರ್ಟ್‌ ಸಿಟಿ ಯೋಜನೆಯಡಿ ಒಟ್ಟು 104 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಒಟ್ಟು 213.31 ಕೋಟಿ ಮೊತ್ತದ 46 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 715.57 ಕೋಟಿ ಮೊತ್ತದ 57 ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ 1.12 ಕೋಟಿ ಮೊತ್ತದ 1 ಕಾಮಗಾರಿ ಟೆಂಡರ್‌ ಹಂತದಲ್ಲಿ ಬಾಕಿ ಇರುವದು ಗಮನಕ್ಕೆ ಬಂದಿದ್ದು ಈ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಶಾಲಾ ಕೊಠಡಿ ನಿರ್ಮಾಣ: ಸರ್ವ ಶಿಕ್ಷಣ ಅಭಿಯಾನದಡಿ ಶಾಲೆಗಳ ಕೊಠಡಿ ನಿರ್ಮಾಣ ಮಾಡಲಾಗುತ್ತಿದ್ದು, ಚಿಕ್ಕೋಡಿ ತಾಲೂಕಿನ ಅನೇಕ ಕಾಮಗಾರಿಗಳು ಬಾಕಿ ಇವೆ. ಈಗಾಗಲೇ ನಿಗದಿತ ಸಮಯ ಮೀರಿದ್ದು, ಪ್ರಾರಂಭ ಹಂತದಲ್ಲಿರುವ ಕೊಠಡಿ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಂಡು ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್‌ ಎಚ್‌.ವಿ ಮಾತನಾಡಿ, ನರೇಗಾ ಯೋಜನೆಯ ವ್ಯಾಪ್ತಿಯಲ್ಲಿ ಕೆರೆಗಳು, ಡಿಜಿಟಲ್‌ ಗ್ರಂಥಾಲಯಗಳ ಪ್ರಾರಂಭ, ಗ್ರಾಮ ಪಂಚಾಯಿತಿಗಳ ಹೊಸ ಕಟ್ಟಡ ನಿರ್ಮಾಣ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಟದ ಮೈದಾನ, ಕೊಠಡಿಗಳ ನಿರ್ಮಾಣ, ಹಾಗೂ ಕಿಚನ್‌ ಶೆಡ್‌ಗಳನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚಿಕ್ಕೋಡಿ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ನರೇಗಾ, ಫಸಲ್‌ ಬೀಮಾ, ಪಿಎಂ ಆವಾಸ್‌ ಯೋಜನೆ, ವಾಟರ್‌ ಟ್ಯಾಂಕ್‌ ನಿರ್ಮಾಣ, ಕೃಷಿ ಬೋರವೆಲ್‌, ವ್ಯವಸ್ಥಿತ ಶಾಲೆ, ರಸ್ತೆ, ಚರಂಡಿ ನಿರ್ಮಾಣ ಹಾಗೂ ಪೋಷಣ್‌ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಒದಗಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಶಿಕಾಂತ ಮುನ್ಯಾಳ, ಆಯುಷ್‌ ಅಧಿಕಾರಿ ಡಾ.ಸುಣಧೋಳಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next