Advertisement

ಮೀಸಲಿರಿಸಿದ ಹಣ ಸಮರ್ಪಕ ಬಳಕೆ ಮಾಡಿ

10:03 AM Jun 16, 2019 | Team Udayavani |

ಬಾಗಲಕೋಟೆ: ವಿವಿಧ ಇಲಾಖೆಯ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳ ಕಾರ್ಯಕ್ರಮಗಳಿಗೆ ಮೀಸಲಿರಿಸಿದ ಹಣವನ್ನು ಸಮರ್ಪಕವಾಗಿ ಬಳಕೆಯಾಗದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಎಚ್ಚರಿಕೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜರುಗಿದ ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನೆ, ಜಿಲ್ಲಾ ಮಟ್ಟದ ಜಾಗೃತ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಅನುದಾನ ಕಡ್ಡಾಯವಾಗಿ ಖರ್ಚು ಮಾಡಬೇಕು. ಸಂಪೂರ್ಣವಾಗಿ ಖರ್ಚಾಗದೇ ಇದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ಹಿಂಜರಿಯುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರ ವಿಕಲಚೇತನರ ಸರ್ವೇ ಮಾಡಿ ಮಾಹಿತಿ ನೀಡುವಂತೆ ಆಯಾ ತಾಲೂಕಿನ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಬಾಗಲಕೋಟೆ ಮತ್ತು ಹುನಗುಂದ ತಾಲೂಕು ಹೊರತುಪಡಿಸಿ ಉಳಿದ ತಾಲೂಕಿನ ಮಾಹಿತಿ ನೀಡದ್ದನ್ನು ಕಂಡ ಜಿಲ್ಲಾಧಿಕಾರಿಗಳು ಶೀಘ್ರವಾಗಿ ಮಾಹಿತಿ ನೀಡಲು ಸೂಚಿಸಿದರು. ಅಲ್ಲದೇ ಜಿಲ್ಲೆಯಲ್ಲಿ ಈಗಾಗಲೇ 6ರಿಂದ 18 ವರ್ಷದೊಳಗಿನ 844 ಮಕ್ಕಳ ಪೈಕಿ 84 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲಾಗಿರುವ ವಿಷಯವನ್ನು ಸಭೆಗೆ ತಿಳಿಸಿದಾಗ ಶಾಲೆ ಬಿಟ್ಟ ಪ್ರತಿಯೊಂದು ಮಗು ಮರಳಿ ಶಾಲೆಗೆ ದಾಖಲಾಗಬೇಕು. ಪ್ರತಿಯೊಬ್ಬ ಬಿಇಓ ಪ್ರತಿನಿದ ಒಂದು ಮಗುವನ್ನಾದರು ಶಾಲೆಗೆ ದಾಖಲಿಸಲು ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ವಿವಿಧ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಲಾದ ಹಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಮೀಸಲಿರಿಸಲಾದ ಹಣ ಸಂಪೂರ್ಣ ಖರ್ಚಾಗಬೇಕು. ವಿನಾಕಾರಣ ಸಬೂಬು ಹೇಳಬಾರದು. ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಮಾತ್ರ ಸೂಕ್ತ ಉತ್ತರ ನೀಡಬೇಕು. ವಿನಾಕಾರಣ ಸಮಯ ಹಾಳು ಮಾಡಬಾರದು. ಕೆಲಸದಲ್ಲಿ ಬೇಜವಾಬ್ದಾರಿತನ ತೋರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ನಿಮ್ಮ ಮೇಲೆ ಪ್ರಕರಣ ದಾಖಲಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕೆಬಿಜಿಎನ್‌ಎಲ್ ಅವರು ಮೀಸಲಿರಿಸಿದ ಅನುದಾನದಲ್ಲಿ ಬೋರವೆಲ್ ಕೊರೆಯಲು ಅವಕಾಶ ಇದ್ದು, ನಾಮನಿರ್ದೇಶಿತ ಸದಸ್ಯ ಶಂಭುಗೌಡ ಪಾಟೀಲ ಸಭೆಗೆ ತಿಳಿಸಿದಾಗ ಬೋರ್‌ವೆಲ್ ಕೊರೆದ ಬಗ್ಗೆ ಕೆಬಿಜಿಎನ್‌ಎಲ್ ಅವರಿಂದ ಸಂಪೂರ್ಣ ಮಾಹಿತಿ ಪಡೆಯುವಂತೆ ಸೂಚಿಸಿದರು.

Advertisement

ಬಾದಾಮಿ ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಕಳೆದ 2ವರ್ಷಗಳಿಂದ ಅನುದಾನ ಬಿಡುಗಡೆ ಮಾಡಿದರೂ ಸಹ ಕೆಆರ್‌ಐಡಿಎಲ್ನವರು ಕಾಮಗಾರಿ ಪ್ರಾರಂಭಿಸದಿಲ್ಲ. ಸಂಬಂಧಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ನೋಟಿಸ್‌ ಜಾರಿ ಮಾಡಿ ಬಿಡುಗಡೆ ಮಾಡಿದ ಹಣವನ್ನು ವಾಪಸ್‌ ಪಡೆದು ಇನ್ನು ಮುಂದೆ ಕೆಆರ್‌ಐಡಿಎಲ್ನವರಿಗೆ ಯಾವುದೇ ರೀತಿಯ ಕಾಮಗಾರಿ ನೀಡದಂತೆ ಸೂಚಿಸಲಾಯಿತು.

ನಿರ್ಮಿತಿ ಕೇಂದ್ರದಿಂದ ಒಟ್ಟು 40 ವಿವಿಧ ಭವನ ಹಾಗೂ ಸಮುದಾಯಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಿಸಿದರು. ಇಲಾಖೆಯಿಂದ 2.13 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದಾಗಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಸಭೆಗೆ ತಿಳಿಸಿದರು. ಬಾಕಿ ಹಣ ನೀಡಲು ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕಳೆದ ಸಾಲಿನಲ್ಲಿ ಮೀನುಗಾರಿಕೆ, ಅರಣ್ಯ, ಸಹಕಾರ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ಭಾರಿ ನೀರಾವರಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಇಲಾಖೆಗಳು ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಿದ್ದಕ್ಕೆ ಸಭೆಯಲ್ಲಿ ಸಂತಸ ವ್ಯಕ್ತಪಡಿಸಿದರು.

ಕಡಿಮೆ ಪ್ರಗತಿ ಸಾಧಿಸಿದ ಆರೋಗ್ಯ, ನಗರಾಭಿವೃದ್ದಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯಿಂದ ಅಸಮಾದಾನಗೊಂಡರು. ಅಧಿಕಾರಿಗಳು ಮುತುವರ್ಜಿ ವಹಿಸಿ ಕಾಳಜಿ ವಹಿಸಿ ಹಾಗೂ ಕಾನೂನಾತ್ಮಕವಾಗಿ ಕೆಲಸ ಮಾಡುವಂತೆ ಸೂಚಿಸಿದರು.

ನಗರಾಭಿವೃದ್ದಿ ಇಲಾಖೆಯಲ್ಲಿ ವಿವಿಧ ಯೋಜನೆಗಳಿಗೆ ಸಂಪೂರ್ಣ ಖರ್ಚು ಮಾಡಿ ಉಳಿದ ಹಣಕ್ಕೆ ಇತರೆ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆಯುವಂತೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು ಎಸ್‌ಸಿಪಿ ಯೋಜನೆಯಡಿ 97.12 ಕೋಟಿ ರೂ. ಖರ್ಚು ಮಾಡುವ ಮೂಲಕ ಶೇ.95.23 ಪ್ರಗತಿ ಸಾಧಿಸಿದರೆ, ಟಿಎಸ್‌ಪಿ ಯೋಜನೆಯಡಿ 37.13 ಕೋಟಿ ರೂ. ವೆಚ್ಚ ಮಾಡಿ ಶೇ.94.50 ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ, ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಜಿಪಂ ಉಪ ಕಾರ್ಯದರ್ಶಿ ಎಸ್‌.ಎಸ್‌. ಹಿರೇಮಠ, ಉಪ ವಿಭಾಗಾಧಿಕಾರಿ ಎಚ್. ಜಯಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next