Advertisement
ರಾಜ್ಯದ 28 ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಸಂಪೂರ್ಣ ಮುಗಿದಿದ್ದು, ಫಲಿತಾಂಶಕ್ಕಾಗಿ ಇಡೀ ರಾಜ್ಯವೇ ಕಾದು ಕುಳಿತಿದೆ. ಈ ನಡುವೆ ಲೋಕಸಭಾ ಚುನಾವಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳುತ್ತಿದ್ದಂತೆ ಅಭಿವೃದ್ಧಿ ಕಾರ್ಯದತ್ತ ದೃಷ್ಟಿ ಹರಿಸಬೇಕಿದ್ದ ಆಡಳಿತಯಂತ್ರ ಬಹುತೇಕ ಇನ್ನೂ ಜಡಾವಸ್ಥೆಯಲ್ಲಿದ್ದರೆ, ಹಲವು ಸಚಿವರು, ಆಡಳಿತ- ಪ್ರತಿಪಕ್ಷ ಶಾಸಕರು ರಾಜಕೀಯ ಜಂಜಾಟದಲ್ಲಿ ದಿನಕಳೆಯುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಗತಿಯಲ್ಲಿದ್ದ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕಾಮಗಾರಿಗೆ ಮತ್ತೆ ಚಾಲನೆ ದೊರಕಿಲ್ಲ. ಇನ್ನೊಂದೆಡೆ ಚುನಾವಣಾ ಪ್ರಚಾರ, ಕಾರ್ಯತಂತ್ರದಲ್ಲೇ ನಿರತರಾಗಿದ್ದ ಸಚಿವರು, ಶಾಸಕರು, ಸಂಸದರು ಮತದಾನ ಮುಗಿದರೂ ಚುನಾವಣಾ ಗುಂಗಿನಿಂದ ಹೊರಬಂದಿಲ್ಲ. ರಾಜ್ಯದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತದಲ್ಲಿ ತಲಾ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಬಹುತೇಕ ಸಚಿವರು, ಜನಪ್ರತಿನಿಧಿಗಳು ವಿಶ್ರಾಂತಿ ಮೊರೆ ಹೋಗಿದ್ದರೆ, ಇನ್ನೂ ಕೆಲವರು ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವತ್ತ ಬಹುತೇಕರು ಈವರೆಗೆ ಚಿತ್ತ ಹರಿಸಿಲ್ಲ.
ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗುವುದು ಬಾಕಿಯಿರುವುದನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಚುನಾವಣೆ ಪ್ರಕ್ರಿಯೆಗಳು ಬಹುತೇಕ ಮುಗಿದಿದೆ. ಇನ್ನು ಒಂದು ತಿಂಗಳು ಫಲಿತಾಂಶಕ್ಕಾಗಿ ಕಾಯಬೇಕಿದೆ. ಇನ್ನಾದರೂ ಸಚಿವರು, ಶಾಸಕರು ರಾಜಕೀಯ ಲಾಭ- ನಷ್ಟದ ಲೆಕ್ಕಾಚಾರ, ಆರೋಪ- ಪ್ರತ್ಯಾರೋಪಗಳನ್ನು ಬದಿಗಿಟ್ಟು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿ ರಾಜ್ಯದ ಜನರ ಸಮಸ್ಯೆಗೆ ಪರಿಹಾರ ನೀಡಲು ಖುದ್ದು ಧಾವಿಸುವ ಅಗತ್ಯವಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಮೇಲಾಟಗಳೇ ಜೋರಾಗಿದೆ.
Related Articles
Advertisement
ನೀತಿ ಸಂಹಿತೆ ಜಾರಿಯಲ್ಲಿದೆಯಾದರೂ, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಅನುಷ್ಠಾನ ಮಾಡಬಹುದಾದ ಹತ್ತಾರು ಅಭಿವೃದ್ಧಿ ಕಾರ್ಯಗಳು ಹಾಗೇ ಉಳಿದುಕೊಂಡಿದೆ. ಇನ್ನಾದರೂ ಆ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ನೀತಿ ಸಂಹಿತೆ ತರೆವಾದ ನಂತರ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸುವ ಪ್ರಯತ್ನದ ಕುರುಹೂ ಕಾಣುತ್ತಿಲ್ಲ. ಮಳೆಗಾಲ ಸಮೀಪಿಸುತ್ತಿದ್ದು, ರಸ್ತೆ, ಕಾಲುವೆ, ಹೆದ್ದಾರಿಗಳ ದುರಸ್ತಿ, ಅಭಿವೃದ್ಧಿಗೆ ಆದ್ಯತೆ ಕಾಣುತ್ತಿಲ್ಲ. ಇನ್ನಾದರೂ ಜನ ಪ್ರತಿನಿಧಿಗಳು, ಅಧಿಕಾರಶಾಹಿ ಒಟ್ಟಿಗೆ ರಾಜ್ಯದ ಜನರಿಗೆ ಸ್ಪಂದಿಸುವ ತುರ್ತು ಅಗತ್ಯವಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.