Advertisement

School ಅಭಿವೃದ್ಧಿಗೆ ಯೋಜನೆ ರೂಪಿಸಿ: ಸಚಿವ ದಿನೇಶ್‌ ಗುಂಡೂರಾವ್‌

01:19 AM Aug 31, 2024 | Team Udayavani |

ಮಂಗಳೂರು: ಸರಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಉಳಿಸಲು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಪ್ರಯತ್ನಿಸ ಬೇಕು. ಕ್ರೌಡ್‌ ಸೋರ್ಸಿಂಗ್‌ ವಿಧಾನ ಅನುಸರಿಸಿ ದತ್ತು ಪಡೆದು ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಶುಕ್ರವಾರ ಜಿ.ಪಂ. ನೇತ್ರಾವತಿ ಸಭಾಂ ಗಣದಲ್ಲಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಮುಂದುವರಿದ ಸಭೆಯ ಅಧ್ಯ ಕ್ಷತೆ ವಹಿಸಿ ಮಾತನಾಡಿ, ಶಾಲೆಯ ಹಳೆ ವಿದ್ಯಾರ್ಥಿಗಳು, ದಾನಿಗಳು, ಕಂಪೆನಿಗಳ ಸಿಎಸ್‌ಆರ್‌ ನಿಧಿ ಬಳಸು ವುದೂ ಸಹಿತ “ಕ್ರೌಡ್‌ ಸೋರ್ಸಿಂಗ್‌’ ಮೂಲಕ ಮಾದರಿ ಕಾರ್ಯಕ್ರಮ ರೂಪಿಸಲು ಸೂಚಿಸಿದರು.

ಶಾಸಕರ ಅನುದಾನ
ಬಳಸಿ: ಬೋಜೇಗೌಡ
ಬಂಟ್ವಾಳದ ದಡ್ಡಲಕಾಡು ಹಾಗೂ ಬೆಳ್ತಂಗಡಿಯ ಶಿರ್ಲಾಲಿನಲ್ಲಿ ಸರಕಾರಿ ಶಾಲೆಗಳನ್ನು ಹಳೆ ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ದಾನಿಗಳು ದತ್ತು ಪಡೆದು ಅಭಿವೃದ್ಧಿಪಡಿಸುವ ಕಾರ್ಯ ನಡೆದಿದೆ. ಅದೇ ರೀತಿ ಉಳಿದ ಶಾಲೆಗಳನ್ನು ಕೂಡ ಶಾಸಕರ ಅನುದಾನವನ್ನೂ ಬಳಸಿಕೊಂಡು ಅಭಿವೃದ್ಧಿಪಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಬೋಜೇಗೌಡ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾತನಾಡಿ, ದಡ್ಡಲಕಾಡಿನಲ್ಲಿ 28 ಮಕ್ಕಳಿದ್ದ ಸರಕಾರಿ ಶಾಲೆಯಲ್ಲಿ ಈಗ 1,028 ಮಕ್ಕಳಿದ್ದು, ಆದ್ದರಿಂದ ಶಾಲೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಶಾಲೆಗಳನ್ನು ಅಭಿವೃದ್ಧಿಪಡಿಸಲು ಜಿಲ್ಲಾಡಳಿತದಿಂದ ಕ್ರೌಡ್‌ ಸೋರ್ಸಿಂಗ್‌ ಪೋರ್ಟಲ್‌ ವಿನ್ಯಾಸಪಡಿಸಲಾಗುತ್ತಿದೆ ಎಂದರು.

ಆರೋಗ್ಯ ಉಪ
ಕೇಂದ್ರಗಳಿಗೆ ನಿವೇಶನ
ದ.ಕ. ಜಿಲ್ಲೆಯಲ್ಲಿ ಒಟ್ಟು 430 ಆರೋಗ್ಯ ಉಪಕೇಂದ್ರಗಳಿದ್ದು, 186 ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ. 73 ಕಟ್ಟಡಗಳಿಗೆ ನಿವೇಶನ ದೊರಕಿದ್ದು, ಉಳಿದ 113 ಉಪ ಕೇಂದ್ರಗಳಿಗೆ ಜಾಗದ ಹುಡುಕಾಟ ನಡೆಯುತ್ತಿದೆ ಎಂದು ಸಭೆಯಲ್ಲಿ ಆರೋಗ್ಯ ಇಲಾಖೆ ಕುರಿತ ಚರ್ಚೆ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಮಾಹಿತಿ ನೀಡಿದರು.

Advertisement

ಆರೋಗ್ಯ ಹಾಗೂ ಶಿಕ್ಷಣ ಅತಿ ಮುಖ್ಯವಾದ ಅಂಗವಾಗಿದ್ದು, ಇವು ಗಳಿಗೆ ನಿವೇಶನ, ಕಟ್ಟಡದ ಕೊರತೆ ಆಗ ಬಾರದು. ಯಾಕಾಗಿ ನಿವೇಶನ ದೊರೆ ತಿಲ್ಲ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬೋಜೇಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಡಿ.ಸಿ. ಪ್ರತಿಕ್ರಿಯಿಸಿ, ಮುಂದಿನ ಮೂರು ತಿಂಗಳೊಳಗೆ ಲಭ್ಯ ಇರುವಲ್ಲಿ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವೇತನ ನೇರ ಪಾವತಿಗೆ ಚಿಂತನೆ
ಗುತ್ತಿಗೆದಾರ ಸಂಸ್ಥೆಗಳಿಂದ ನೌಕರರಿಗೆ ವೇತನ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ನೇರ ಪಾವತಿಗೆ ಕ್ರಮ ಕೈಗೊಳ್ಳಲು ರಾಜ್ಯ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದರು.

ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ 186 ಡಿ ಗ್ರೂಪ್‌ ನೌಕರರಿಗೆ ಎರಡು ತಿಂಗಳಿನಿಂದ ವೇತನವಾಗಿಲ್ಲ ಎಂದು ಜಿ.ಪಂ. ನಾಮ ನಿರ್ದೇಶಿತ ಸದಸ್ಯ ಸಂತೋಷ್‌ ಕುಮಾರ್‌ ಹೇಳಿದರು.

ಜೂನ್‌ ವರೆಗೆ ವೇತನ ಪಾವತಿ ಯಾಗಿದೆ. ಗುತ್ತಿಗೆ ವಹಿಸಿಕೊಂ ಡಿರು ವವರ ಅವಧಿ ಮುಗಿದಿದ್ದು, ಹೊಸ ಗುತ್ತಿಗೆದಾರರು ಮುಂದೆ ಬಂದಿಲ್ಲ ಎಂದು ವೆನ್‌ಲಾಕ್‌ ಅಧೀಕ್ಷಕಿ ಡಾ| ಜೆಸಿಂತಾ ಮಾಹಿತಿ ನೀಡಿದರು. ಗುತ್ತಿಗೆದಾರರಿಗೆ 3 ತಿಂಗಳು ಅವಧಿ ವಿಸ್ತರಿಸಲು ಸೂಚನೆ ನೀಡಲಾಗಿದೆ. ಆ ರೀತಿ ಬಿಟ್ಟು ಹೋದಲ್ಲಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಅವಕಾಶವಿದೆ ಎಂದು ಡಿಸಿ ತಿಳಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಜಿ.ಪಂ. ಸಿಇಒ ಡಾ| ಆನಂದ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಎಸ್ಪಿ ಯತೀಶ್‌, ಮೆಸ್ಕಾಂ ಎಂಡಿ ಪದ್ಮಾವತಿ, ಡಿಸಿಎಫ್‌ ಆ್ಯಂಟನಿ ಮರಿಯಪ್ಪ ಉಪಸ್ಥಿತರಿದ್ದರು.

ಪಾಲನೆಯಾಗದ ಶಿಷ್ಟಾಚಾರ: ಬೋಜೇಗೌಡ ಅಸಮಾಧಾನ
ಕೆಡಿಪಿ ತ್ರೈಮಾಸಿಕ ಸಭೆಯ ವೇಳೆ ಆಸನ ವ್ಯವಸ್ಥೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬೋಜೇಗೌಡ ಅವರು ರೇಗಾಡಿದ ಪ್ರಸಂಗವೂ ಇದೇ ವೇಳೆ ನಡೆಯಿತು. ಶಿಷ್ಟಾಚಾರ ಬಗ್ಗೆ ಮಾಹಿತಿ ಇದೆಯಾ? ಯಾಕಾಗಿ ಬೇರೆಯವರನ್ನು ವೇದಿಕೆಯಲ್ಲಿ ಕುಳ್ಳಿರಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಪದ್ಧತಿ ಪ್ರಕಾರವೇ ಅವರನ್ನು ಕೂರಿಸಲಾಗಿದೆ ಎಂದು ಡಿಸಿ ಸಮಜಾಯಿಸಿ ನೀಡಿದರೂ ತೃಪ್ತರಾಗದ ಗೌಡರು, ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ಬಳಿಕ ತಣ್ಣಗಾದರು.

Advertisement

Udayavani is now on Telegram. Click here to join our channel and stay updated with the latest news.

Next