ಬೀದರ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮಕ್ಕೆ ಜೂ. 27ರಂದು ಭೇಟಿ ನೀಡಿ ಗ್ರಾಮ ವಾಸ್ತವ್ಯ ನಡೆಸಲ್ಲಿದ್ದು, ಬರುವ ಮುನ್ನ ಗ್ರಾಮದ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು ಎಂದು ಗ್ರಾಮದ ರೈತರು ಆಗ್ರಹಿಸುತ್ತಿದ್ದಾರೆ.
ಉಜಳಂಬ ಗ್ರಾಮದಲ್ಲಿ ಒಟ್ಟು 413 ರೈತರಿದ್ದು, 1.36 ಕೋಟಿ ಬೆಳೆಸಾಲ ಪಡೆದುಕೊಂಡಿದ್ದಾರೆ. ಈ ಪೈಕಿ ಸರ್ಕಾರದ ವಿವಿಧ ಷರತ್ತುಗಳ ಅನ್ವಯ 236 ರೈತರು ಮಾತ್ರ ಸಾಲಮನ್ನಾ ಯೋಜನೆಗೆ ಅರ್ಹರಾಗಿದ್ದಾರೆ. 236 ರೈತರ ಒಟ್ಟು 87 ಲಕ್ಷ ರೂ. ಸಾಲ ಮನ್ನಾ ಆಗಬೇಕಿದ್ದು, ಈವರೆಗೆ 69 ರೈತರು 32 ಲಕ್ಷ ರೂ. ಸಾಲಮನ್ನಾ ಯೋಜನೆಯ ಲಾಭ ಪಡೆದುಕೊಂದ್ದಾರೆ ಎಂದು ಸಹಕಾರ ಇಲಾಖೆಯ ಅಧಿಕಾರಿ ಕಲಪ್ಪ ಮಾಹಿತಿ ನೀಡಿದ್ದಾರೆ. 167 ರೈತರ 55 ಲಕ್ಷ ರೂ. ಸಾಲಮನ್ನಾ ಆಗಬೇಕಿದ್ದು, ಮುಖ್ಯಮಂತ್ರಿಗಳು ಬರುವ ಮುನ್ನ ಗ್ರಾಮದ ಎಲ್ಲಾ ರೈತರ ಸಾಲಮನ್ನಾ ಮಾಡುವ ಮೂಲಕ ‘ಸಾಲಮನ್ನಾ ಮಾದರಿ ಗ್ರಾಮ’ ಎಂದು ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಎಲ್ಲಾ ರೈತರಿಗೆ ಯೋಜನೆ ಲಾಭ ನೀಡಿ: ಸಾಲಮನ್ನಾ ಯೋಜನೆಯಡಿ ಹಾಕಲಾದ ವಿವಿಧ ಷರತ್ತುಗಳನ್ನು ಸರ್ಕಾರ ಸಡಿಲಿಕೆ ಮಾಡುವ ಮೂಲಕ ಬೆಳೆ ಬೆಳೆಯುವ ಎಲ್ಲಾ ರೈತರಿಗೆ ಯೋಜನೆಯ ಲಾಭ ನೀಡಬೇಕು ಎಂದು ಯೋಜನೆಯಿಂದ ದೂರ ಉಳಿದ ರೈತರು ಆಗ್ರಹಿಸುತ್ತಿದ್ದಾರೆ.
ರೈತರು ಎಂದರೆ ಭೂಮಿಯಲ್ಲಿ ಉಳುಮೆ ಮಾಡುವವರು. ಭೂಮಿ ಉಳುಮೆ ಮಾಡುವ ಪ್ರತಿಯೊಬ್ಬರಿಗೆ ಸರ್ಕಾರದ ಯೋಜನೆಯ ಲಾಭ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕು. ಗ್ರಾಮದಲ್ಲಿ ವಾಸ್ತವ್ಯ ಮಾಡುವ ದಿನದಂದು ಯೋಜನೆಯಿಂದ ದೂರ ಉಳಿದ ರೈತರ ಸಂಕಷ್ಟಗಳನ್ನು ಕೂಡ ಕೇಳಿ ಸಾಲಮನ್ನಾ ಮಾಡಬೇಕು ಎಂಬ ಅಭಿಪ್ರಾಯಗಳು ಗ್ರಾಮದಲ್ಲಿ ಕೇಳಿ ಬರುತ್ತಿವೆ.
ಬೆಳೆವಿಮೆ ಬಂದಿಲ್ಲ: ಕಳೆದ ವರ್ಷ ಮಳೆ ಕೊರತೆಯಿಂದ ಬೆಳೆಹಾನಿ ಸಂಭವಿಸಿದ್ದು, ರೈತರ ಬೆಳೆವಿಮೆ ಹಣ ವರ್ಷ ಕಳೆದರೂ ಬಂದಿಲ್ಲ ಎಂದು ಗ್ರಾಮದ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಯಾವುದೇ ನಿಯಮಗಳು ಇಲ್ಲದೆ ಬೆಳೆ ವಿಮೆ ಪಾವತಿಸಿಕೊಳ್ಳುವ ಕಂಪನಿಗಳು ರೈತರಿಗೆ ಪರಿಹಾರ ನೀಡುವಾಗ ವಿಳಂಬ ಮಾಡಿದರೆ ಸರ್ಕಾರ ಕ್ರಮ ವಹಿಸಬೇಕು. ಬರದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಸರ್ಕಾರ ಕೂಡಲೆ ಬೆಳೆ ಪರಿಹಾರ ನೀಡುವ ಕಾರ್ಯ ಮುಂದಾಗಬೇಕು. ಈ ಮೂಲಕ ರೈತರು ಹುರುಪಿನಿಂದ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಮಾಡಬೇಕು ಎಂದ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
•ದುರ್ಯೋಧನ ಹೂಗಾರ