Advertisement

ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

03:20 PM Sep 04, 2018 | |

ದಾವಣಗೆರೆ: ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜದಲ್ಲಿ ಗೌರವಯುತವಾಗಿ
ಬಾಳಬೇಕು ಎಂದು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಎಸ್‌.ಎ. ರವೀಂದ್ರನಾಥ್‌ ಹೇಳಿದ್ದಾರೆ.

Advertisement

ಸೋಮವಾರ, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ, ಹಳೆ ವಿದ್ಯಾರ್ಥಿ ಸಂಘ ಹಾಗೂ ಭೌತಶಾಸ್ತ್ರ, ರಸಾಯನ ಶಾಸ್ತ್ರ ಪ್ರಯೋಗಾಲಯಗಳ ನೂತನ ಕಟ್ಟಡದ ಸಮಾರಂಭ
ಉದ್ಘಾಟಿಸಿ, ಅವರು ಮಾತನಾಡಿ, ವಿದ್ಯಾರ್ಥಿ ಹಂತದ ಜೀವನ ಭವಿಷ್ಯ ನಿರ್ಮಿಸಿಕೊಳ್ಳುವ ಪ್ರಮುಖ ಘಟ್ಟ.
ಹಾಗಾಗಿ ವಿದ್ಯಾರ್ಥಿಗಳು ಈ ಹಂತದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಶಿಕ್ಷಣದ ಮೂಲಕ ಉತ್ತಮ ಮೌಲ್ಯ
ಅಳವಡಿಸಿಕೊಂಡು, ಗುರು-ಹಿರಿಯರಿಗೆ ಗೌರವ ನೀಡುವ ಮೂಲಕ ಸತ್ಪ್ರಜೆಗಳಾಗಿ ಬಾಳಬೇಕು ಎಂದರು.

ಸರ್ಕಾರ ಶಿಕ್ಷಣಕ್ಕೆ ಎಲ್ಲಾ ರೀತಿಯ ಸೌಲಭ್ಯ ಒದಗಿಸುತ್ತಿದ್ದು, ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು
ಎಂದರಲ್ಲದೆ, ಅಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸಲು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 10 ಲಕ್ಷ ರೂ.
ನೀಡುವುದಾಗಿ ಎಂದು ಹೇಳಿದರು. ಮಹಾನಗರಪಾಲಿಕೆ ಆಯುಕ್ತ ಮಂಜುನಾಥ ಆರ್‌. ಬಳ್ಳಾರಿ ಮಾತನಾಡಿ, ದೇಶದ ಯುವಶಕ್ತಿಯಾದ ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಬೇಕು. ಪದವಿ ನಂತರ ನೌಕರಿ ಪಡೆಯುವುದೇ ಮುಖ್ಯವಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಸಮರ್ಥವಾಗಿ ಎದುರಿಸಲು ಶ್ರಮವಹಿಸಬೇಕು. ರಾಷ್ಟ್ರ ಮತ್ತು ಪರಿಸರ ರಕ್ಷಣೆಗೆ
ಮುಂದಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿ ಬಗ್ಗೆಯೂ ಕಾಳಜಿ ವಹಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಅವಕಾಶಗಳು, ಸವಾಲುಗಳು ಇದ್ದು, ಬದುಕಿನಲ್ಲಿ ಏನನ್ನು ಆಯ್ಕೆ ಮಾಡಿಕೊಂಡು
ಯಶಸ್ವಿಯಾಗಬೇಕು ಎಂಬುದರ ಬಗ್ಗೆ ಆಲೋಚಿಸಬೇಕು. ಪ್ರಜ್ಞಾವಂತ ನಾಗರಿಕರಾಗಿ ಸಮಾಜದಲ್ಲಿ ಬಾಳಬೇಕು ಎಂದು ಸಲಹೆ ನೀಡಿದರು.

ಕಾಲೇಜು ಪ್ರಾಂಶುಪಾಲ ಶಂಕರ್‌ ಆರ್‌. ಶೀಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ| ಸಂಗಮನಾಥ ಎಂ. ಲೋಕಾಪೂರ, ನಿವೃತ್ತ ಪ್ರಾಂಶುಪಾಲ ಡಾ| ಕೆ.ಎಂ. ಮಲ್ಲಿಕಾರ್ಜುನ, ಎಸ್‌.ಆರ್‌. ಭಜಂತ್ರಿ, ಟಿ. ವೀರೇಶ್‌,
ಡಾ| ಜಿ.ಎಂ. ದಿನೇಶ್‌, ಡಾ| ಸಿ.ಎಸ್‌. ಸೋಮಶೇಖರಪ್ಪ, ಪ್ರೊ| ಎಂ.ಕೆ. ದಾನಪ್ಪ, ರಾಮ್‌ಪ್ರಸಾದ್‌ ಉಪಸ್ಥಿತರಿದ್ದರು.
ಎಸ್‌.ಎಂ. ಗೌರಮ್ಮ ಸ್ವಾಗತಿಸಿದರು. ಪ್ರೊ| ಎಸ್‌.ಎಂ. ಲತಾ ನಿರೂಪಿಸಿದರು. ಪ್ರೊ| ಜಿ.ಸಿ. ಸದಾಶಿವಪ್ಪ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next